ನಿಜಕ್ಕೂ ನೀವು ಗ್ರೇಟ್…
✍️ ಜಯಶ್ರೀ ಕೊಯಿಂಗೋಡಿ
ಲೈನ್‌ಮ್ಯಾನ್‌ಗಳೇ ನಿಮಗೊಂದು ಹ್ಯಾಟ್ಸಾಪ್ .. ಎಂತಹ ಚಳಿ, ಮಳೆ, ಗಾಳಿಯಲ್ಲೂ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜೀವದ ಹಂಗು ತೆರೆದು ಕರ್ತವ್ಯ ನಿಭಾಯಿಸುತ್ತಿರುವ ನಿಮಗೊಂದು ದೊಡ್ಡ ಸೆಲ್ಯೂಟ್…
ಇವರು ಲೈನ್‌ಮ್ಯಾನ್‌ಗಳು. ಕಳೆದ ರಾತ್ರಿ ನಮ್ಮ ಮನೆ ಪಕ್ಕದಲ್ಲಿ ನಡೆದ ಘಟನೆ. ಸುಮಾರು ಮಧ್ಯರಾತ್ರಿ 1.30ರ ಸುಮಾರಿಗೆ ದೊಡ್ಡದೊಂದು ಶಬ್ಧ ಕೇಳಿಸಿತ್ತು. ಆ ಸಮಯಕ್ಕೆ ಕರೆಂಟ್ ಕೂಡಾ ಹೋಯ್ತು. ಬಹುಶಃ ಮನೆ ಪಕ್ಕದಲ್ಲಿಯೇ ಇದ್ದ ಟ್ರಾನ್ಸ್‌ಫಾರ್ಮ್ ನಿಂದ ಶಬ್ಧ ಬಂತೆಂದು ತಿಳ್ಕೊಂಡು ಸಧ್ಯಕ್ಕೆ ಕರೆಂಟ್ ಬರ್‍ಲಿಕ್ಕಿಲ್ಲ ಅಂತ ಯೋಚಿಸಿದೆ… ಸ್ವಲ್ಪ ಹೊತ್ತಲ್ಲೇ ಇನ್ನೊಂದು ಶಬ್ದ ಕೇಳಿಸಿತು. ಆದರೂ ಏಳುವ ಮನಸ್ಸಾಗಲೇ ಇಲ್ಲ. ಹೊರಗೆ ಜಡಿ ಮಳೆ. ಪುನಃ ಮತ್ತೊಂದು ಶಬ್ದ. ಆದರೂ ಏಳಲೇ ಇಲ್ಲ. ಕರೆಂಟ್ ಇಲ್ಲವಲ್ಲ ಹಾಗಾಗಿ ಬೆಳಿಗ್ಗೆಯ ತಿಂಡಿಯದ್ದೇ ಧ್ಯಾನ… ಏನು ತಿಂಡಿ ಮಾಡುವುದೆಂದು? ಶಬ್ದ ಬಂದ ಸ್ವಲ್ಪ ಹೊತ್ತಲ್ಲೇ ಇಡೀ ಮನೆಯ ಸುತ್ತೆಲ್ಲಾ ಬೆಳಕು ಕಾಣಿಸಿತು. ಈಗಂತೂ ಭಯ ಆರಂಭವಾಗಿ ಎದ್ದು ಬಂದು ಮನೆಯ ಹೊರಗೆ ಇಣುಕಿದೆ. ನಾನೇನೋ ಕರೆಂಟ್ ಶಾರ್ಟ್ ಸರ್ಕ್ಯೂಟ್ ಆಯಿತೆಂದು ಭಯದಿಂದ ಮಲಗಿದ್ದ ಯಜಮಾನರನ್ನೂ ಎಬ್ಬಿಸಿದೆ. ನೋಡಿದರೆ ಮನೆಯ ಬಳಿ ರಬ್ಬರ್ ಗುಡ್ಡೆಯಿಂದ ಪ್ರಖರವಾದ ಟಾರ್ಚ್ ಹಿಡಿದ ವ್ಯಕ್ತಿಗಳು ಕಾಣಿಸಿಕೊಂಡರು. ನೋಡಿದರೆ ಮೆಸ್ಕಾಂ ಜೀಪ್. ಆ ಜಡಿ ಮಳೆಯಲ್ಲೂ ಲೈನ್‌ಮ್ಯಾನ್‌ಗಳು ತಮ್ಮ ಕರ್ತವ್ಯದಲ್ಲಿ ನಿರತರಾಗಿರುವುದನ್ನು ಕಂಡು ನನ್ನ ನಿದ್ದೆಯೇ ಬಿಟ್ಟೋಗಿತ್ತು. ನಿಜಕ್ಕೂ ಇವರು ಗ್ರೇಟ್ ಅನ್ನಿಸಿತು. ಗಾಳಿ ಮಳೆಯನ್ನು ಲೆಕ್ಕಿಸದೆ ಇವರು ಕರೆಂಟ್ ಲೈನ್‌ಗೆ ಬಿದ್ದ ಮರದ ಗೆಲ್ಲನ್ನು ತೆರವುಗೊಳಿಸಲು ಬಂದಿದ್ದರು.
ನಾವಲ್ಲಿ ಸುಖನಿದ್ರೆಯಲ್ಲಿ ಪವಡಿಸುತ್ತಿರುವ ಆ ಸಂದರ್ಭದಲ್ಲಿ ಅವರು ಕಾಡು ಬಳ್ಳಿಗಳ ಮಧ್ಯೆಯೇ ನುಸುಳಿಕೊಂಡು ಬಂದು ಕರೆಂಟ್ ಕಂಬಕ್ಕೂ ಹತ್ತಿ ಅಲ್ಲಿರುವ ಲೈನ್ ಕ್ಲಿಯರ್ ಮಾಡಿದರು. ಸುಮಾರು ಮುಕ್ಕಾಲು ಗಂಟೆಯ ಕೆಲಸ… ಕೆಲಸ ಮುಗಿದ ಕೂಡಲೇ ಕರೆಂಟ್ ಚಾರ್ಜ್ ಕೂಡಾ ಮಾಡಿದ್ದರು. ಕೂಡಲೇ ಕರೆಂಟ್ ಬಂದಿತ್ತು.
ನಿಜಕ್ಕೂ ಇವರ ಸೇವೆಗೊಂಡು ನಾವು ಗೌರವ ಕೊಡಲೇಬೇಕು. ನಾವೆಲ್ಲೋ ಕರೆಂಟ್ ಇಲ್ಲದಿದ್ದರೆ ಬೈಯ್ಯುತ್ತಾ ಇರುತ್ತೇವೆ. ಆದರೆ ಅವರ ಕಷ್ಟ ದೇವರಿಗೇ ಗೊತ್ತು. ಎಷ್ಟೋ ಕಡೆಗಳಲ್ಲಿ ಅವಘಡ ಸಂಭವಿದ್ದೂ ಇದೆ. ಅವರೂ ಮನುಷ್ಯರೇ ತಾನೇ? ಅವರಿಗೂ ಮನೆ, ಸಂಸಾರ, ಹೆಂಡತಿ, ಮಕ್ಕಳು ಇರುತ್ತದೆಯಲ್ಲಾ? ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಎಂತಹ ಸಮಯದಲ್ಲೂ ಕರ್ತವ್ಯ ನಿರತರಾಗಿರುವ ನೀವುಗಳು ನಿಜವಾಗಿಯೂ ಗ್ರೇಟ್ ಅಲ್ವಾ?…