ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ವಾರ್ಷಿಕ ಮಹಾಸಭೆ ಮತ್ತು ಮಾಹಿತಿ ಕಾರ್ಯಾಗಾರವು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಜು. 16ರಂದು ಜರುಗಿತು.
ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ.ಕೆಯವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯನ್ನು ಜಿಲ್ಲಾ ಸ್ಕೌಟ್ ಆಯುಕ್ತರಾದ ಮಹಮ್ಮದ್ ತುಂಬೆ ಉದ್ಘಾಟಿಸಿ, ಪಂಜ ಸ್ಥಳೀಯ ಸಂಸ್ಥೆಯ ಕಾರ್ಯಕ್ರಮಗಳ ಸಂಘಟನೆಯ ಬಗ್ಗೆ ಶ್ಲಾಘಿಸಿದರು.
ರಾಜ್ಯ ಸಂಸ್ಥೆಯ ವಾರ್ಷಿಕ ಯೋಜನಾ ಪುಸ್ತಕವನ್ನು ಜಿಲ್ಲಾ ಗೈಡ್ ಆಯುಕ್ತೆ ಶ್ರೀಮತಿ ವಿಮಲಾ ರಂಗಯ್ಯ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಗೈಡ್ ಆಯುಕ್ತೆಯಾಗಿ ನೇಮಕಗೊಂಡಿರುವ ಪಂಜ ಸ್ಥಳೀಯ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ವಿಮಲಾ ರಂಗಯ್ಯ ರವರನ್ನು ಗೌರವಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಪ್ರತೀಮ್ ಕುಮಾರ್ ಸ್ಕೌಟ್ಸ್ ಗೈಡ್ಸ್ ಚಟುವಟಿಕೆಗಳ ಆಯೋಜನೆಗೆ ಸಂಬಂಧಿಸಿದ ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ ರಮೇಶ್ ಭಾಗವಹಿಸಿ, ಸ್ಕೌಟ್ ಗೈಡ್ ಚಟುವಟಿಕೆಗಳು ಸ್ವಯಂಶಿಸ್ತನ್ನು ರೂಪಿಸಿ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಮತ್ತು ಮುಂದಿನ ದಿನಗಳಲ್ಲಿ ಎಲ್ಲ ಶಾಲೆಗಳು ಸ್ಕೌಟ್ , ಗೈಡ್, ಕಬ್, ಬುಲ್ ಬುಲ್ ದಳ ತೆರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕಿ ಸಂಧ್ಯಾಕುಮಾರಿ ಮತ್ತು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜಯಂತ ಕೆ ರವರು ಪ್ರತೀ ಶಾಲೆಗಳಲ್ಲಿ ಸ್ಕೌಟ್ಸ್ ಗೈಡ್ಸ್ ಚಟುವಟಿಕೆ ನಡೆಯಲೇಬೇಕು. ಹಾಗೂ ಗ್ರಾಮ ಪಂಚಾಯತ್ ನ ಅನುದಾನ ದೊರಕಿಸುವ ಬಗ್ಗೆ ಗ್ರಾಮ ಸಭೆಗಳಲ್ಲಿ ಪ್ರಸ್ತಾಪಿಸಲಾಗುವುದೆಂದು ತಿಳಿಸಿದರು.
ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ ವಾರ್ಷಿಕ ಕಾರ್ಯಕ್ರಮಗಳ ಮಾಹಿತಿ ನೀಡಿದರು.
2023 -24ರ ವರದಿ ಮತ್ತು 2024- 25ರ ಯೋಜಿತ ಕಾರ್ಯಕ್ರಮಗಳನ್ನು ಕಾರ್ಯದರ್ಶಿ ಉದಯಕುಮಾರ್ ರೈ ಬಾಳಿಲ ಮಂಡಿಸಿದರು. 2023-24ರ ಲೆಕ್ಕಪತ್ರ ಹಾಗೂ 2024- 25ರ ಆಯವ್ಯಯವನ್ನು ಕೋಶಾಧಿಕಾರಿ ವಾಸುದೇವ ನಡ್ಕ ಸಭೆಯ ಮುಂದಿಟ್ಟರು. ಬಳಿಕ ಮುಂಗಡಪತ್ರಕ್ಕೆ ಅನುಮೋದನೆಯನ್ನು ಪಡೆದುಕೊಳ್ಳಲಾಯಿತು.
ದ್ವಿತೀಯ ಸೋಪಾನ ಪರೀಕ್ಷಾ ಪ್ರಮಾಣ ಪತ್ರವನ್ನು ಶಾಲೆಗಳಿಗೆ ವಿತರಿಸಲಾಯಿತು.
ಜಿಲ್ಲಾ ಸಹಾಯಕ ಆಯುಕ್ತರಾದ ದೇವಿಪ್ರಸಾದ್ ಜಾಕೆ, ಸ್ಥಳೀಯ ಸಂಸ್ಥೆ ಉಪಾಧ್ಯಕ್ಷರುಗಳಾದ ಸೋಮಶೇಖರ್ ನೇರಳ, ಬಾಲಕೃಷ್ಣ ರೈ ಬಿರ್ಕಿ, ದಾಮೋಧರ ನೆರಳ, ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಯ
ವ್ಯಾಪ್ತಿಯಲ್ಲಿರುವ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ತರಬೇತು ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಸೋಮಶೇಖರ್ ನೆರಳ ಸ್ವಾಗತಿಸಿದರು. ಕಾರ್ಯದರ್ಶಿ ಉದಯಕುಮಾರ್ ರೈ ಬಾಳಿಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ ಇಲ್ಲಿಯ ರೋವರ್ ಗಳು ಸ್ವಯಂಸೇವಕರಾಗಿ ಸಹಕರಿಸಿದರು.
ಮಹಾಸಭೆ ಬಳಿಕ ಶಿಕ್ಷಕರಿಗೆ ಸ್ಕೌಟ್ಸ್ ಗೈಡ್ಸ್ ಮಾಹಿತಿ ಕಾರ್ಯಾಗಾರ ನಡೆಸಲಾಯಿತು.