ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಆಟಿ ಕೂಟ

0

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ), ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಇಲಾಖೆ- ಸಂಜೀವಿನಿ ಒಕ್ಕೂಟ, ದ.ಕ‌.ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಹಾಗೂ ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ವತಿಯಿಂದ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಆಟಿ ಕೂಟ ಕಾರ್ಯಕ್ರಮ ಜರಗಿತು. ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್‌ಗಳ ಸಂಜೀವಿನಿ ಒಕ್ಕೂಟದ ಸದಸ್ಯರು ತಮ್ಮ ಮನೆಯಲ್ಲಿ ವೈವಿಧ್ಯಮಯ ಆಟಿ ಖಾದ್ಯಗಳನ್ನು ತಯಾರಿಸಿ ತಂದಿದ್ದರು. ಈ ಖಾದ್ಯಗಳನ್ನು ಆಟಿ ಸಂಭ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಉಣಬಡಿಸಿ ಖುಷಿಪಟ್ಟರು.


ಆಟಿ ತಿಂಗಳಲ್ಲಿ ಸುರಿಯುವ ವಿಪರೀತ ಮಳೆಗೆ ತಿನ್ನಲು ಆಹಾರದ ಕೊರತೆ ಹಾಗೂ ಹಲವಾರು ಕಾಯಿಲೆಗಳು ಸರ್ವೇ ಸಾಮಾನ್ಯವಾಗಿತ್ತು. ಹಳೆಯ ಕಾಲದಲ್ಲಿ ಅವುಗಳನ್ನು ನಿಭಾಯಿಸಲು ನಮ್ಮ ಹಿರಿಯರು ಕಂಡುಕೊಂಡ ಪರಿಹಾರ ವಿಧಾನಗಳನ್ನು ನೆನಪಿಸುವ ಈ ಆಟಿ ಸಂಭ್ರಮದಲ್ಲಿ ಭಾಗವಹಿಸಿದ ದ.ಕ. ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಜಯರಾಮ್ ಕೆ.ಇ. ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.


ಸುಮಾರು 25ಕ್ಕೂ ಹೆಚ್ಚು ವೈವಿಧ್ಯಮಯ ಖಾದ್ಯಗಳು ಇಲ್ಲಿ ಇದ್ದವು. ಆಟಿ ಪಾಯಸ, ಆಟಿ ಸೊಪ್ಪಿನ ಶೀರ, ನನ್ನೇರಿ, ತಜಂಕ್‌ ಪಲ್ಯ, ಮೆಂತೆ ಪಾಯಸ, ಹಲಸಿನ ಹಣ್ಣಿನ ಬರ್ಫಿ, ಬಾಳೆಕಾಯಿ ಚಿಪ್ಸ್, ಹಲಸಿನ ಬೀಜದ ಖಾದ್ಯಗಳು, ಪತ್ರೋಡೆ, ಕೆಸು ಸಾಂಬಾರು ಬಾಳೆದಂಡು ಪಲ್ಯ, ಕಣಲೆ ಸಾಂಬಾರ್, ಕಣಲೆ ಪಲ್ಯ, ಕಣಲೆ ಪತ್ರೋಡೆ, ಒಂದೆಲಗ ಲೇಹ, ಔಷಧೀಯ ಸಸ್ಯಗಳ ಚಟ್ನಿ ಹೀಗೆ ಹಲವಾರು ವೈವಿಧ್ಯಮಯ ಸಾಂಪ್ರದಾಯಿಕ ತಿಂಡಿ ತಿನಿಸುಗಳು ಇದ್ದವು. ಸಂಜೀವಿನಿ ಒಕ್ಕೂಟದ ಸದಸ್ಯರು ತಯಾರಿಸಿದ ವೈನ್, ಮೇಣದ ಬತ್ತಿ, ಉಪ್ಪಿನಕಾಯಿ, ಚಾಪೆ, ರೊಟ್ಟಿ, ಜೇನು ಮತ್ತಿತರ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ತಹಶಿಲ್ದಾರರ (ಗ್ರೇಡ್ 2) ಮಂಜುನಾಥ್ ಎಂ, ತಾ. ಪಂ. ವ್ಯವಸ್ಥಾಪಕ ಹರೀಶ್, ತಾ.ಪಂ. ಸಹಾಯಕ‌ ನಿರ್ದೇಶಕಿ ಸರೋಜಿನಿ ಇದ್ದರು. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ವಲಯ ವ್ಯವಸ್ಥಾಪಕರಾದ ಮೇರಿ, ರೂಪ, ತಾಲೂಕು ವ್ಯವಸ್ಥಾಪಕಿ ಶ್ವೇತಾ, ವಲಯ ಮೇಲ್ವಿಚಾರಕ ಮಹೇಶ್, ಅವಿನಾಶ್, ಶ್ರೀನಿಧಿ ಮತ್ತಿತರರು ಸಂಯೋಜನೆಯಲ್ಲಿ ಸಹಕರಿಸಿದರು.