ಸುಳ್ಯ : ತಿಂಗಳ ಸಾಹಿತ್ಯ ಸಂವಾದ ಮಾಲಿಕೆ ಕಾರ್ಯಕ್ರಮ

0

ವ್ಯಕ್ತಿಯ ವ್ಯಕ್ತಿತ್ವಕ್ಕೆ ಮನಸ್ಸೇ ಕಾರಣ: ಕುಯಿಂತೋಡು ದಾಮೋದರ

“ವ್ಯಕ್ತಿಯ ವ್ಯಕ್ತಿತ್ವ ಆತನ ಮನಸ್ಸಿನಂತೆ. ಆತನ ಆಲೋಚನೆಯಂತೆ ರೂಪುಗೊಳ್ಳುತ್ತದೆ. ತನ್ನ ಸಹಜ ಭಾವನೆಗಳನ್ನು ತನಗನಿಸಿದಂತೆ ಅಭಿವ್ಯಕ್ತಿಸಿ ಸಾಹಿತ್ಯ ರಚಿಸುತ್ತಿದ್ದೆ” ಎಂದು ಕುಯಿಂತೋಡು ದಾಮೋದರ ಅವರು ಹೇಳಿದರು.

ಅವರು ಸುಳ್ಯದ ಸಂಧ್ಯಾರಶ್ಮಿ ಸಭಾಂಗಣದಲ್ಲಿ ನಡೆದ ಸಂಧ್ಯಾರಶ್ಮಿ ಸಾಹಿತ್ಯ ಸಂಘ ಹಾಗೂ ಸುಳ್ಯ ತಾಲೂಕು ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕದ ಸಹಯೋಗದಲ್ಲಿ ನಡೆದ ತಿಂಗಳ ಸಾಹಿತ್ಯ ಸಂವಾದ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಆಗಸ್ಟ್ ತಿಂಗಳ ಸಂವಾದ ಮಾಲಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಕುಯಿಂತೋಡು ದಾಮೋದರ ಇವರ ಸಾಹಿತ್ಯ ಹಾಗೂ ವ್ಯಕ್ತಿತ್ವ ಪರಿಚಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸುಳ್ಯದಂತಹ ಊರಿನಲ್ಲಿ ಇಂದು ಅನೇಕ ಸಾಹಿತಿಗಳು ಕವಿ, ಕವಯತ್ರಿಯರು ಇದ್ದಾರೆ. ಅದರಲ್ಲಿ ಪ್ರಭಾಕರ ಶಿಶಿಲ, ಚಂದ್ರಶೇಖರ ದಾಮ್ಲೆ ಹಾಗೂ ಸ್ಥಳೀಯ ಸುದ್ದಿ ಪತ್ರಿಕೆಯ ಪಾತ್ರ ಬಹಳವಿದೆ ಎಂದು ನುಡಿದರು.

88ರ ಹರೆಯದ ಕುಯಿಂತೋಡು ದಾಮೋದರ ಅವರು ಕಾರ್ಯಕ್ರಮದಲ್ಲಿ ತಮ್ಮ ಕವಿಸಮಯವನ್ನು ನೆನಪಿಸಿಕೊಂಡು ಕವಿತೆಗಳು ಹುಟ್ಟಿದ ಬಗೆಯನ್ನು ಸಭೆಯ ಮುಂದಿರಿಸಿ ತಮ್ಮ ಕೆಲವು ಕವಿತೆಗಳನ್ನು ಹಾಡಿದರು. ಸಂವಾದದಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಾ ತನ್ನ ಸಾಹಿತ್ಯ ಸೃಷ್ಟಿ, ವೃತ್ತಿ ಜೀವನವ ಹಾಗೂ ಶಿಷ್ಯಂದಿರನ್ನು ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ಅರಂತೋಡು ಎನ್.ಎಂ.ಪಿ.ಯು ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಕೆ. ಆರ್ ಗಂಗಾಧರ ಅವರು ಕುಯಿಂತೋಡು ಅವರ ಸಹಜೀವನದ ಸವಿನೆನಪನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಬಹುಮುಖ ಪ್ರತಿಭೆಯ ಕುಯಿಂತೋಡು ಅವರು ಪಠ್ಯ ಪುಸ್ತಕ ಇಲ್ಲದೆಯೇ ನಿಖರವಾಗಿ ನಿರರ್ಗಳವಾಗಿ ಪಾಠ ಮಾಡುತ್ತಿದ್ದ ರೀತಿಯನ್ನು ತಿಳಿಸಿದರು. “ನಿಷ್ಠುರವಾದಿ ಸಾಹಿತಿಯಾಗಿದ್ದ ಇವರು ಮೂಢನಂಬಿಕೆಗಳ ವಿರೋಧಿ. ಒಬ್ಬ ಉತ್ತಮ ಕ್ರೀಡಾಪಟು, ಯಕ್ಷಗಾನ ಪಟು, ಹಿಮ್ಮೇಳ ಮುಮ್ಮೇಳದಲ್ಲಿ ನಿಸ್ಸೀಮರಾಗಿದ್ದರು. ಸರಳವ್ಯಕ್ತಿತ್ವದ ಇವರೊಬ್ಬ ಅಜಾತ ಶತ್ರು ಹಾಗೂ ವಿವಾದಾತೀತ ವ್ಯಕ್ತಿ. ಎಲ್ಲರೊಂದಿಗಿನ ಸಂಬಂಧದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದರು. ಶಾಲೆ, ವೃತ್ತಿ, ಪಠ್ಯ ಹಾಗೂ ವಿದ್ಯಾರ್ಥಿಗಳಿಗೆ ಬದ್ಧರಾಗಿದ್ದರು ಮತ್ತು ವಿದ್ಯಾರ್ಥಿಗಳ ಕನಸಿಗೆ ಮಾರ್ಗದರ್ಶಕರಾಗಿದ್ದರು” ಎಂದು ಹೇಳುತ್ತಾ ತನ್ನನ್ನೊಬ್ಬ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕನಾಗುವ ಹಂತಕ್ಕೆ ಬೆಳೆಸಿದ ಕೀರ್ತಿ ಕುಯಿಂತೋಡು ಅವರಿಗೆ ಸಲ್ಲುತ್ತದೆ ಎನ್ನುತ್ತಾ, ವ್ಯಕ್ತಿ ತಿಳುವಳಿಕೆ ಬಂದಂತೆ ಸರಳವಾಗುತ್ತಾನೆ; ಸರಳವಾದಾಗ ಸಂತೃಪ್ತಿಯನ್ನು ಕಂಡುಕೊಳ್ಳುತ್ತಾನೆ ಎಂದು ನುಡಿದರು.

ಕುಯಿಂತೋಡು ಅವರ ಶಿಷ್ಯರಾಗಿರುವ ಮಡಿಕೇರಿ ಆಕಾಶವಾಣಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಅವರು ‘ಗುರುವಂದನ’ ಮಾತುಗಳನ್ನಾಡುತ್ತಾ ತನ್ನ ಯಶಸ್ಸಿನಲ್ಲಿ ತನ್ನ ಪ್ರತಿಭೆಯ ಅನಾವರಣದಲ್ಲಿ ತನ್ನ ಗುರುಗಳ ಪಾತ್ರವನ್ನು ಮೆಲುಕು ಹಾಕಿದರು.

ತನ್ನ ಗುರುಗಳಾದ ಕುಯಿಂತೋಡು ಇವರು ತನಗೆ ಪ್ರಾಥಮಿಕ ಶಾಲಾ ವಿದ್ಯಾರ್ಥಿ ದಿನಗಳಲ್ಲಿ ಕೆಲವು ಪುಸ್ತಕಗಳನ್ನು ನೀಡಿದ್ದು ಅದರಲ್ಲೂ ‘ಆರತಿ’ ಎಂಬ ಪುಸ್ತಕವು ತನ್ನ ಬದುಕಿನಲ್ಲಿ, ವ್ಯಕ್ತಿತ್ವದಲ್ಲಿ ಹಾಗೂ ವೃತ್ತಿ ಬದುಕಿನಲ್ಲಿ ಉಚ್ಛಾರ ಸ್ಪಷ್ಟತೆ, ಭಾಷಾಶುದ್ಧಿ ಹಾಗೂ ಇನ್ನಿತರ ವಿಚಾರಗಳಲ್ಲಿ ಹೇಗೆ ಸಹಾಯಕವಾಯಿತು ಎಂಬುದನ್ನು ತಿಳಿಸಿದರು. ತನ್ನ ಗುರುಗಳ ಪ್ರೇರಣೆಯಿಂದಲೇ ತನಗೆ ಪುರಾಣಗಳ ಬಗ್ಗೆ ಆಸಕ್ತಿ ಹುಟ್ಟಿದ್ದು ಇದು ತನ್ನ ಹದಿನೆಂಟು ಪುರಾಣಗಳ ಅವಲೋಕನದ ಕೃತಿ ‘ಪುರಾಣಯಾನ’ದ ಸೃಷ್ಟಿಗೆ ನಾಂದಿಯಾಯಿತು ಎನ್ನುತ್ತಾ ತನ್ನ ಕಂಚಿನ ಕಂಠದಲ್ಲಿ ಗಮಕ ವಾಚನ, ಯಕ್ಷಗಾನ ಭಾಗವತಿಕೆ ಮೂಲಕ ಗುರುವಿಗೆ ನಮನಗಳನ್ನು ಸಲ್ಲಿಸಿ ಸಭೆಯಲ್ಲಿ ವಿದ್ಯುತ್‌ಸಂಚಾರ ಮೂಡಿಸಿದರು.

ದಾಮೋದರ ಅವರ ಕೃತಿಗಳ ಪರಿಚಯ ಮಾಡಿದ ಶ್ರೀಮತಿ ಸಂಗೀತಾ ರವಿರಾಜ್ ಅವರು “ಕುಯಿಂತೋಡು ಅವರು ಛಂದೋಬದ್ಧವಾಗಿ ಲಾಲಿತ್ಯಪೂರ್ಣವಾಗಿ ಗೇಯ ಕವಿತೆಗಳನ್ನು ರಚಿಸಿದ್ದಾರೆ. ಅವರೊಳಗೊಬ್ಬ ಸೂಕ್ಷ್ಮ ಮನಸ್ಸಿನ ಪ್ರಖರ ಚಿಂತನೆಯ ಸಾಹಿತಿ ಇದ್ದಾರೆ. ಅವರ ಕವಿತೆಗಳಲ್ಲಿ ಅಂತೆಯೇ ಬದುಕಿನಲ್ಲಿ ಪ್ರಕೃತಿಯ ಕುರಿತು ವಿಶೇಷ ಕಾಳಜಿಯನ್ನು ಕಾಣಬಹುದು. ಅವರು ಗಂಭೀರವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರೆ ಇನ್ನಷ್ಟು ಉತ್ತಮ ಕೃತಿಗಳು ಹೊರಬರುತ್ತಿದ್ದವು” ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷೆ ಶ್ರೀಮತಿ ಲೀಲಾ ದಾಮೋದರ ಅವರು ತಮ್ಮ ಗುರುಗಳಾಗಿದ್ದ ಕುಯಿಂತೋಡು ಅವರ ಆದರ್ಶ ವ್ಯಕ್ತಿತ್ವವನ್ನು ನೆನಪಿಸಿಕೊಂಡರು.

ಕಾರ್ಯಕ್ರಮದ ಸಂಚಾಲಕ ಹಾಗೂ ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಕಾರ್ಯದರ್ಶಿ, ಖ್ಯಾತ ಗಾಯಕ ಕೆ.ಆರ್. ಗೋಪಾಲಕೃಷ್ಣ ಅವರು ಕುಯಿಂತೋಡುರವರ ಗೀತೆಗಳನ್ನು ಹಾಡಿ ಸಭೆಯಲ್ಲಿ ಸಂಚಲನ ಮೂಡಿಸಿದರು.

ಮಾ| ಖುಷಿತ್ ಅವರು ಕುಯಿಂತೋಡು ಅವರ ಶಿಶುಗೀತೆಯನ್ನು ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಹಾಗೂ ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಉಪಾಧ್ಯಕ್ಷೆ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಇನ್ನೋರ್ವ ಉಪಾಧ್ಯಕ್ಷ ರಾಮಚಂದ್ರ ಪಲ್ಲತ್ತಡ್ಕ ವಂದಿಸಿದರು. ಸಂಘದ ಸದಸ್ಯರಾದ ಉದಯ ಭಾಸ್ಕರ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪೋಷಕಾಧ್ಯಕ್ಷ ಡಾ| ರಂಗಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.