ಸುಬ್ರಹ್ಮಣ್ಯ: ಜಿಲ್ಲಾ ಮಟ್ಟದ ಸಂಸ್ಕೃತ ಪ್ರತಿಭಾ ಪುರಸ್ಕಾರ ಹಾಗೂ ಸಂಸ್ಕೃತೋತ್ಸವ

0

ಹೃದಯ ಹೃದಯಗಳ ಸಂವಹನವೇ ಭಾಷೆ:ಲಕ್ಷ್ಮೀಶ ಗಬ್ಲಡ್ಕ

ಭಾಷೆ ಅಂದರೆ ಅದು ಹೃದಯ ಹೃದಯಗಳ ಸಂವಹನ. ಭಾವನೆಗಳ ಪರಸ್ಪರ ಪರಿಚಯಾತ್ಮಕ ವಿನಿಮಯಕ್ಕೆ ಭಾಷೆ ಅತ್ಯಂತ ಅವಶ್ಯ ಮಾರ್ಗ. ಸಂಸ್ಕ್ರತ ಜಗತ್ತಿನ ಅತ್ಯಂತ ಪ್ರಭಾವಶಾಲಿ ಭಾಷೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಹೇಳಿದರು.


ಅವರು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಆಗಸ್ಟ್ ೧೮ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಂಸ್ಕ್ರತ ಪ್ರತಿಭಾ ಪುರಸ್ಕಾರ ಹಾಗೂ ಸಂಸ್ಕೃತೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.


ಸಂಸ್ಕೃತ ಭಾಷೆ ಒಂದು ಸೀಮಿತ ವರ್ಗದ ಭಾಷೆ ಎಂಬ ಆರೋಪ, ಅಪವಾದಗಳಿವೆ. ಆದರೆ ಈ ಅಪವಾದ ನಿರಾಧಾರ ಎಂಬುದಕ್ಕೆ ಸಂಸ್ಕೃತವನ್ನು ಕಲಿತ ಹಾಗೂ ಸಂಸ್ಕೃತಾಭ್ಯಾಸ ಮುಂದುವರಿಸುತ್ತಿರುವ ಎಲ್ಲಾ ಧರ್ಮಗಳ ಹಾಗೂ ಸಮಾಜದ ಎಲ್ಲಾ ವರ್ಗಗಳ ಮಕ್ಕಳೇ ಸಾಕ್ಷಿ ಎಂದು ಅವರು ಹೇಳಿದರು.
ದೀಪ ಬೆಳಗಿಸಿ ಉದ್ಘಾಟಿಸಿದ ಕಾಲೇಜಿನ ಪ್ರೌಢಶಾಲಾ ಮುಖ್ಯಸ್ಥರಾದ ಯಶವಂತ ರೈ ಮಾತನಾಡಿ ಭಾಷೆ ಸಂಸ್ಕಾರ ಮತ್ತು ಸಂಸ್ಕ್ರತಿಯ ಪ್ರತೀಕ. ಸಂಸ್ಕಾರಯುತ ಜೀವನ, ಆರೋಗ್ಯಕರ ಮನಸ್ಥಿತಿಯಿಂದ ನೆಮ್ಮದಿ ಸಿಗುತ್ತದೆ ಎಂದರು.


ದಕ್ಷಿಣ ಕನ್ನಡ ಜಿಲ್ಲಾ ಸಂಸ್ಕ್ರತ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಪರಮೇಶ್ವರ ಹೆಗಡೆಯವರು ಅಧ್ಯಕ್ಷತೆ ವಹಿಸಿ, ಸಂಸ್ಕೃತ ಭಾಷೆಯ ಇತಿಹಾಸ, ಸಾಹಿತ್ಯಗಳನ್ನು ಉಲ್ಲೇಖಿಸಿ, ಸಂಸ್ಕೃತ ಅಧ್ಯಯನದ ಇಂದಿನ ಅವಶ್ಯಕತೆಗಳನ್ನು ತಿಳಿಸಿದರು.


ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜು ಉಪ ಪ್ರಾಂಶುಪಾಲೆ ಶ್ರೀಮತಿ ರೇಖಾರಾಣಿಯವರು ಎಲ್ಲಾ ಭಾಷೆಗಳ ಮೂಲ ಸಂಸ್ಕೃತ. ಪ್ರತಿಯೊಂದು ಭಾಷೆಯ ಅತ್ಯಧಿಕ ಶಬ್ದ ಭಂಡಾರ ಸಂಸ್ಕ್ರತದಲ್ಲಿಯೇ ಇದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಸಂಸ್ಕೃತದಲ್ಲಿ ೧೨೫, ೧೨೪ ಅಂಕ ಮತ್ತು ತೃತೀಯ ಭಾಷೆ ಸಂಸ್ಕೃತದಲ್ಲಿ ೧೦೦, ೯೯ ಅಂಕ ಗಳಿಸಿದ ದಕ್ಷಿಣ ಕನ್ನಡ ಜಿಲ್ಲೆಯ ೩೯ ಶಾಲೆಗಳ ೨೭೦ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಶಾಲು, ಸ್ಮರಣಿಕೆ ನೀಡಿ ಪ್ರತಿಭಾ ಪುರಸ್ಕಾರ ನಡೆಸಲಾಯಿತು.
ವಿಶೇಷ ಆಕರ್ಷಣೆಯಾಗಿ, ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಶಿಕ್ಷಕರಾದ ರಘು ಬಿಜೂರ್ ಇವರ ಉಸ್ತುವಾರಿಯಲ್ಲಿ, ಸಂಸ್ಕೃತೋತ್ಸವದ ಅಂಗವಾಗಿ ಮೂಡಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಗಜಾನನ ಮರಾಠೆ, ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಹಾಗೂ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿಯರು ಸಂಸ್ಕೃತ ಗಾಯನ, ಸಂಸ್ಕೃತ ಹಾಡುಗಳಿಗೆ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವೆಂಕಟೇಶ್ ಪ್ರಸಾದ್ ಪುರಸ್ಕೃತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಯ ಸತ್ಯಶಂಕರ್ ಪ್ರಸ್ತಾವನೆಗೈದರು. ಮೂಡಬಿದಿರೆ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ವೆಂಕಟರಮಣ ಕೆರೆಗದ್ದೆ ಸ್ವಾಗತಿಸಿ, ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲೆಯ ದಿವಸ್ಪತಿ ವಂದಿಸಿದರು. ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಶ್ರೀಮತಿ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು, ಸಂಸ್ಕೃತಾಭಿಮಾನಿ ಪೋಷಕ ಬಂಧುಗಳು ಉಪಸ್ಥಿತರಿದ್ದರು. ಮಧ್ಯಾಹ್ನದ ಭೋಜನದ ಬಳಿಕ ೨೦೨೪-೨೫ನೇ ಸಾಲಿಗೆ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಕ್ರತ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.