ನಾಳೆ (ಆ.31) : ದುಗ್ಗಲಡ್ಕ ಸ. ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವೆಂಕಟ್ರಮಣ ಕೆ.ಎಸ್ ಸೇವಾ ನಿವೃತ್ತಿ

0

ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ವೆಂಕಟ್ರಮಣ ಕೆ.ಎಸ್ ರವರು ನಾಳೆ (ಆ. 31) ರಂದು ತಮ್ಮ ಸೇವೆಯಿಂದ ನಿವೃತ್ತಿಯಾಗುತ್ತಿದ್ದಾರೆ.

ಆರಂತೋಡು ಗ್ರಾಮದ ಕಲ್ಲುಗದ್ದೆ ಮನೆತನದ ದಿ. ಶೇಷಪ್ಪ ಮಾಸ್ಟರ್ ಮತ್ತು ದಿ. ಸಣ್ಣಮ್ಮ ದಂಪತಿಗಳ ಚತುರ್ಥ ಪುತ್ರನಾಗಿ ಆ. 31, 1964ರಲ್ಲಿ ಜನಿಸಿದ ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು, ಪ್ರೌಢ ಶಿಕ್ಷಣವನ್ನು ನೆಹರು ಸ್ಮಾರಕ ಪಿಯು ಕಾಲೇಜು ಆರಂತೋಡಿನಲ್ಲಿ ಪೂರೈಸಿದ ಬಳಿಕ ಕುಶಾಲನಗರದಲ್ಲಿ ಸಿಪಿಎಡ್ ತರಬೇತಿ ಪಡೆದಿದ್ದರು. ಬಳಿಕ ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಸುಳ್ಯದ ಎನ್‌ಎಂಸಿಯಲ್ಲಿ ಮುಗಿಸಿ, ಚೆನ್ನರಾಯಪಟ್ಟಣದ ಜ್ಞಾನಜ್ಯೋತಿ ಬಿಪಿಎಡ್ ಕಾಲೇಜಿನಲ್ಲಿ ಬಿಪಿಎಡ್ ತರಬೇತಿ ಪೂರೈಸಿದರು.

ಡಿ. 14, 1995ರಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇಲ್ಲಿ ತನ್ನ ಸರಕಾರಿ ಸೇವೆಯನ್ನು ಆರಂಭಿಸಿದ ಇವರು, ಅಲ್ಲಿ ಸುಮಾರು 17 ವರ್ಷಗಳ ಕಾಲ ದುಡಿದಿದ್ದರು. ಅಲ್ಲಿಂದ ಜೂ. 30, 2012ರಲ್ಲಿ ದುಗಲಡ್ಕ ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡು ಇಲ್ಲಿಯ ತನಕ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಇದೀಗ ತನ್ನ ಜನ್ಮದಿನದಂದೇ ಸರಕಾರಿ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ.

ಇವರು ತನ್ನ ಸೇವಾ ಅವಧಿಯಲ್ಲಿ ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳು ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದ್ದರು.
ಜಿಲ್ಲೆ, ತಾಲೂಕು, ಹೋಬಳಿ ಮಟ್ಟದ ಪಂದ್ಯಾಟ ಹಾಗೂ ಕ್ರೀಡಾಕೂಟಗಳನ್ನು ಉತ್ತಮ ರೀತಿಯಿಂದ ಸಂಘಟಿಸಿದ ಹೆಗ್ಗಳಿಕೆ ಇವರದ್ದು. ಶಾಲೆಯಲ್ಲಿ ಹೂದೋಟ ಮತ್ತು ತರಕಾರಿ ತೋಟ ಮಾಡಿ ಶಾಲೆಯನ್ನು ಸುಂದರವನ್ನಾಗಿಸಿದ್ದಾರೆ.

ಇವರ ಪತ್ನಿ ಶ್ರೀಮತಿ ಪದ್ಮಿನಿಯವರು ಕೆಪಿಎಸ್ ಗಾಂಧಿನಗರ ಇಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದು, ಮಗಳು ರಕ್ಷಾ ವಿ.ಕೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ಮಗ ವೈಭವ್ ವಿ.ಕೆ ಇಂಜಿನಿಯರಿಂಗ್ ಮುಗಿಸಿ ಉನ್ನತ ವ್ಯಾಸಂಗದ ತಯಾರಿಯಲ್ಲಿದ್ದಾರೆ.