ಪ್ರಾಮಾಣಿಕ ಪ್ರಯತ್ನದಿಂದ ಸಂಸ್ಥೆಯ ಯಶಸ್ಸು ಸಾಧ್ಯ: ಒಡಿಯೂರು ಶ್ರೀ
ಸಾಧು ಪ್ರೀತಿ ತುಂಬಿದ ಜಾಗವಿದು. ಇಲ್ಲಿ ನಮ್ಮ ಶಾಖೆಯ ಉದ್ಘಾಟನೆ ಆಗಿರುವುದು ಸಂತಸ ತಂದಿದೆ. ಧರ್ಮ ಶ್ರದ್ದೇಯ ಕೆಲಸ ನಮ್ಮದಾಗಬೇಕು. ಪ್ರಾಮಾಣಿಕ ಪ್ರಯತ್ನದಿಂದ ಸಂಸ್ಥೆ ಯಶಸ್ಸು ಸಾಧ್ಯ.
ಸಂಸ್ಥೆಯ ಉದ್ದೇಶ ವಿವಿದೋದ್ಧೇಶವಾಗಿದೆ. ಲೌಕಿಕ ಬೆಳವಣಿಗೆಗೆ ಸಂಘ ಸಂಸ್ಥೆ, ಸಹಕಾರಿಯ ಅಗತ್ಯ ಬಹಳಷ್ಟಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಆ.30ರಂದು ನಿಂತಿಕಲ್ಲಿನ ಸಾಧನಾ ಸಹಕಾರ ಸೌಧದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಅರ್ಹತೆ ನೋಡಿ ಸಹಕಾರ ನೀಡುವ ಕೆಲಸವಾಗಬೇಕು. ಸಂಸ್ಥೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ. ಸಾಮಾನ್ಯ ಜನರಿಗೆ ಸೇವೆ ಸಿಗಬೇಕೆನ್ನುವ ನಿಟ್ಟಿನಲ್ಲಿ ಸಂಸ್ಥೆಯ ಹುಟ್ಟಾಗಿದೆ. ಕೊಡು ಕೊಳ್ಳುವಿಕೆಯ ಗುಣ ಇಲ್ಲಿ ಅಗತ್ಯ. ಸಂಸ್ಥೆ ಪಾರದರ್ಶಕವಾಗಿ ನಡೆದಾಗ ಯಶಸ್ಸು ಹೆಚ್ಚು. ಧರ್ಮ ಶ್ರದ್ದೆ ತುಂಬಿದ ಜನರು ನಮ್ಮೊಂದಿಗಿರಬೇಕು. ಒಗ್ಗಟ್ಟಿನಿಂದ ಸಹಕಾರಿ ಸಂಘಗಳು ಮತ್ತಷ್ಟು ಗಟ್ಟಿಯಾಗುತ್ತದೆ. ಗ್ರಾಹಕರು ಸಹಕಾರಿಯ ಜೀವಾಳ. ಮಾನವೀಯ ಮೌಲ್ಯ ಬಹಳಷ್ಟು ಶ್ರೇಷ್ಟವಾದುದು. ಅದನ್ನು ಬೆಳೆಸುವ ಕೆಲಸವಾಗಬೇಕು ಎಂದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.ದ ಜಿಲ್ಲಾ ಸಂಯೋಜಕರಾದ ವಿಜಯ ಬಿ.ಎಸ್.ರವರು ಮಾತನಾಡಿ ಹಲವಾರು ಸಮಾಜಮುಖಿ ಯೋಜನೆಯನ್ನು ತಂದ ಸಹಕಾರಿ ಇದಾಗಿದೆ. ಸಹಕಾರಿಯ ಪಾರದರ್ಶಕ ಆಡಳಿತ ವ್ಯವಸ್ಥೆ ಸಂಘ ಈ ಹಂತಕ್ಕೆ ತಲುಪಲು ಕಾರಣವಾಗಿದೆ. ಇದು ಇತರ ಸಹಕಾರಿಗಳಿಗೆ ಮಾದರಿಯಾಗಿದೆ ಎಂದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ನಿರ್ದೇಶಕರಾದ ಭಾರತಿ ಜಿ. ಭಟ್ ರವರು ಮಾತನಾಡಿ ಸಮರ್ಥ ನಾಯಕತ್ವ ಇದ್ದಲ್ಲಿ ಯಶಸ್ಸು ಖಂಡಿತ ಎನ್ನುವುದಕ್ಕೆ ಈ ಸಹಕಾರಿ ನಿದರ್ಶನ. ಆರೋಗ್ಯ ನೆಮ್ಮದಿ ನಮಗೆ ಅತೀ ಅಗತ್ಯ. ಪರಸ್ಪರ ಸಹಕಾರದಿಂದ ಎಲ್ಲವೂ ಸಾಧ್ಯ. ಜಿಲ್ಲೆಯಲ್ಲಿ ಸಹಕಾರ ಸಂಘದ ಹುಟ್ಟು ಅಷ್ಟೊಂದು ಸುಲಭದ ಮಾತಲ್ಲ. ಇದೊಂದು ಸಾಮಾಜಿಕ ಕಳಕಳಿ ಉಳ್ಳ ಸಹಕಾರಿ ಸಂಘ ವಾಗಿದೆ. ಮಾನವೀಯ ಮೌಲ್ಯ ತುಂಬಿದ ಸಂಸ್ಥೆ ಇದಾಗಿದೆ. ಸಹಕಾರಿ ಸಂಸ್ಥೆಗಳು ಒಂದು ಅಕ್ಷಯಪಾತ್ರೆ ಇದ್ದಂತೆ. ಮಹಿಳೆಯರು ಪ್ರತಿಯೊಂದೂ ಕ್ಷೇತ್ರದಲ್ಲಿಯೂ ಸಕ್ರೀಯರಾಗಬೇಕಿದೆ. ಎಲ್ಲರೂ ಸಹಕಾರಿಯ ಬೆಳವಣಿಗೆಯಲ್ಲಿ ಭಾಗಿಗಳಾಗಿ ಎಂದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷರಾದ ಸಹಕಾರ ರತ್ನ ಎ. ಸುರೇಶ್ ರೈ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೇರ್ಪಡ ಶ್ರೀ ಮಹಿಷಾಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ವಸಂತ ನಡುಬೈಲ್, ಮುರುಳ್ಯ ಗ್ರಾ.ಪಂ.ಅಧ್ಯಕ್ಷರಾದ ವನಿತಾ ಸುವರ್ಣ ಬಾಮೂಲೆ, ಮುರುಳ್ಯ – ಎಣ್ಮೂರು ಪ್ರಾಕೃತಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಂತಿಕಲ್ಲು ಇದರ ಅಧ್ಯಕ್ಷರಾದ ಕುಸುಮಾವತಿ ರೈ ಕೆ.ಜಿ. ಎಣ್ಮೂರು ಗುತ್ತು, ಎಣ್ಮೂರು ಕೋಟಿಚೆನ್ನಯ ನಗರ ಶ್ರೀ ಸೀತಾ-ರಾಮಚಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ರಘುನಾಥ ರೈ ಕೆ.ಎಸ್. ಕಟ್ಟಬೀಡು, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪಿ.ಆರ್.ಒ. ಮಾತೇಶ್ ಭಂಡಾರಿ, ಶ್ರೀ ಗುರುದೇವ ಸೇವಾಬಳಗ ಮುರುಳ್ಯ – ಎಣ್ಮೂರು ವಲಯ ಅಧ್ಯಕ್ಷರಾದ ಮಹಾಬಲ ರೈ ಎಂ ಕೋಡ್ದೋಳು , ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೃಥ್ವಿ ಶೆಟ್ಟಿ ಪ್ರಾರ್ಥಿಸಿದರು. ಸಹಕಾರಿಯ ಉಪಾಧ್ಯಕ್ಷರಾದ ಲಿಂಗಪ್ಪ ಗೌಡ ಪನೆಯಡ್ಕ ಸ್ವಾಗತಿಸಿದರು. ಸಹಕಾರಿಯ ನಿರ್ದೇಶಕರಾದ ಸೋಮಪ್ಪ ನಾಯ್ಕ್ ಕಡಬ ವಂದಿಸಿದರು. ಸುಧಾಕರ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.