ಅಕ್ಷರ ಕಲಿಸಿದ ಗುರುಗಳ ಮನೆ, ಶಾಲೆಗಳಿಗೆ ತೆರಳಿ ಗೌರವ ಸಮರ್ಪಣೆ
9 ಮಂದಿ ಶಿಕ್ಷಕರಿಗೆ ಊರ ಪ್ರಮುಖರ ಉಪಸ್ಥಿತಿಯಲ್ಲಿ ಸಮ್ಮಾನ
ಊರು-ಪರವೂರಿನ ಸರಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿರುವ ಮುಕ್ಕೂರು ಪರಿಸರದ 9 ಮಂದಿ ಶಿಕ್ಷಕರನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನೇಸರ ಯುವಕ ಮಂಡಲದ ವತಿಯಿಂದ ಗುರುತಿಸಿ ಅವರ ಮನೆ, ಕರ್ತವ್ಯ ನಿರ್ವಹಿಸುವ ಶಾಲೆಗಳಿಗೆ ತೆರಳಿ ಗೌರವ ಸಲ್ಲಿಸುವ ಕಾರ್ಯ ನಡೆಯಿತು.
ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆ.6 ರಂದು ವಿಶಿಷ್ಟ ರೀತಿಯಲ್ಲಿ ನಡೆಯಿತು. ಶಿಕ್ಷಕರ ಮನೆಗೆ ಭೇಟಿ ನೀಡಿ ಅಲ್ಲಿ ಊರ ಪ್ರಮುಖರ ಉಪಸ್ಥಿತಿಯಲ್ಲಿ ಫಲವಸ್ತುಗಳ ಸಹಿತ ಗೌರವ ಸಮರ್ಪಿಸಿ ಅವರ ಬಳಿ ಆಶೀರ್ವಾದ ಪಡೆದುಕೊಳ್ಳಲಾಯಿತು. ಯಾವುದೇ ಮುನ್ಸೂಚನೆ ನೀಡದೆ ದಿಢೀರ್ ಆಗಿ ಭೇಟಿ ನೀಡಿ ಗೌರವ ಸಮರ್ಪಿಸಿದನ್ನು ಕಂಡು ಶಿಕ್ಷಕರು ಅಚ್ಚರಿಗೊಂಡು ಧನ್ಯವಾದ ಅರ್ಪಿಸಿದರು.
ಪೆರುವಾಜೆ ಸ.ಹಿ.ಪ್ರಾ.ಶಾಲಾ ಶಿಕ್ಷಕಿ ಲಲಿತಾ ಕುಮಾರಿ ಮನವಳಿಕೆ, ಐವರ್ನಾಡು ಸ.ಪ್ರೌ.ಶಾಲಾ ಶಿಕ್ಷಕ ಅರವಿಂದ ಕಜೆ, ನಿವೃತ್ತ ಶಿಕ್ಷಕರಾದ ರಾಜೀವಿ ಕಂಡಿಪ್ಪಾಡಿ, ದಾಮೋದರ ಗೌಡ ಕಂಡಿಪ್ಪಾಡಿ, ನಿವೃತ್ತ ಮುಖ್ಯಗುರು ಬಾಬು ಎನ್, ಮುಕ್ಕೂರು ಶಾಲಾ ಪ್ರಭಾರ ಮುಖ್ಯಗುರು ಲತಾ, ಸಹ ಶಿಕ್ಷಕಿ ಸೌಮ್ಯ, ಅತಿಥಿ ಶಿಕ್ಷಕಿ ಕವಿತಾ, ಗೌರವ ಶಿಕ್ಷಕಿ ಅಪೂರ್ವ ಬಿ.ಎಸ್.ಅವರನ್ನು ಗುರುತಿಸಿ ಗೌರವಿಸಲಾಯಿತು. ಈ ವೇಳೆ ಶಿಕ್ಷಕರು ಕೃತಜ್ಞತಾ ನುಡಿಗಳನ್ನಾಡಿ, ಇದೊಂದು ಸ್ಮರಣೀಯ ಸಂದರ್ಭ ಎಂದರು.
ಪುತ್ತೂರು ಐಎಂಎ ಘಟಕದ ಅದ್ಯಕ್ಷ ಡಾ|ನರಸಿಂಹ ಶರ್ಮಾ ಕಾನಾವು ಅವರು ಮನವಳಿಕೆಯಲ್ಲಿ ಶಿಕ್ಷಕಿ ಲಲಿತಾ ಕುಮಾರಿ ಅವರನ್ನು ಸಮ್ಮಾನಿಸಿ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವದದ್ದು. ಆ ಕಾರ್ಯವನ್ನು ಮಾಡುತ್ತಿರುವ ಶಿಕ್ಷಕರನ್ನು ಗುರುತಿಸಿ ಅವರ ಮನೆಗೆ ಬಂದು ಸಮ್ಮಾನಿಸುವ ನೇಸರ ಯುವಕ ಮಂಡಲದ ಕಾರ್ಯ ಶ್ಲಾಘನೀಯವಾದದು ಎಂದರು.
ಐವರ್ನಾಡು ಸ.ಪ್ರೌ.ಶಾಲಾ ಶಿಕ್ಷಕ ಅರವಿಂದ ಅವರನ್ನು ಕಜೆ ಮನೆಯಲ್ಲಿ ಸಮ್ಮಾನಿಸಿದ ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಮಾತನಾಡಿ, ಮಕ್ಕಳನ್ನು ಎಳವೆಯಲ್ಲಿ ತಿದ್ದಿ ತೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಿಸುವ ಶಿಕ್ಷಕರು ಪ್ರತಿ ವ್ಯಕ್ತಿಗೂ ಆದರ್ಶ ವ್ಯಕ್ತಿ. ಅವರನ್ನು ಗುರುತಿಸುವ ಒಳ್ಳೆಯ ಕಾರ್ಯ ನಡೆದಿದೆ. ಸರಳ ಸಜ್ಜನಿಕೆಯ ಅರವಿಂದ ಅವರದ್ದು ಇನ್ನಷ್ಟು ಮಂದಿಗೆ ಪ್ರೇರಣೆ ನೀಡುವ ವ್ಯಕ್ತಿತ್ವ ಎಂದರು.
ನಿವೃತ್ತ ಶಿಕ್ಷಕರಾದ ರಾಜೀವಿ ಕಂಡಿಪ್ಪಾಡಿ, ದಾಮೋದರ ಗೌಡ ಕಂಡಿಪ್ಪಾಡಿ ಅವರನ್ನು ಕಂಡಿಪ್ಪಾಡಿ ನಿವಾಸದಲ್ಲಿ ಸಮ್ಮಾನಿಸಿದ ಕುಂಬ್ರ ದಯಾಕರ ಆಳ್ವ, ಇದೊಂದು ಉತ್ತಮ ನಡೆ. ಸಾವಿರಾರು ಮಕ್ಕಳ ಬಾಳಿಗೆ ಬೆಳಕಾದ ಶಿಕ್ಷಕರನ್ನು ಗುರುತಿಸಿ ಭವಿಷ್ಯದ ಪೀಳಿಗೆಗೆ ತಿಳಿಸುವ ಕಾರ್ಯ ಇಲ್ಲಿ ನಡೆದಿದೆ. ಇದೊಂದು ಧನಾತ್ಮಕ ಚಟುವಟಿಕೆ. ಶಿಕ್ಷಕರಿಗೂ ಆತ್ಮತೃಪ್ತಿಯ ಕ್ಷಣ ಎಂದರು.
ನಿವೃತ್ತ ಮುಖ್ಯಗುರು ಬಾಬು ಎನ್ ಅವರನ್ನು ಸಮ್ಮಾನಿಸಿದ ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಕಳೆದ ಎಂಟು ವರ್ಷಗಳಿಂದ ಹತ್ತಾರು ಕಾರ್ಯಕ್ರಮವನ್ನು ನೇಸರ ಯುವಕ ಮಂಡಲದ ಮೂಲಕ ನಡೆಸಲಾಗಿದೆ. ಜನಪರ ಕಾರ್ಯಗಳ ಜತೆಗೆ ಈ ಬಾರಿ ಶಿಕ್ಷಕರನ್ನು ಗುರುತಿಸುವ ವಿಶೇಷ ಕಾರ್ಯಕ್ರಮ ನಡೆದಿದೆ. ಮನೆ, ಶಾಲೆಗಳಲ್ಲಿ ಶಿಕ್ಷಕರು ನಮಗೆ ತೋರಿದ ಪ್ರೀತಿಗೆ ನಾವು ಚಿರರುಣಿ ಎಂದರು.
ಮುಕ್ಕೂರು ಶಾಲಾ ಪ್ರಭಾರ ಗುರು ಲತಾ, ಅತಿಥಿ ಶಿಕ್ಷಕಿ ಕವಿತಾ, ಗೌರವ ಶಿಕ್ಷಕಿ ಅಪೂರ್ವ ಬಿ.ಎಸ್. ಅವರನ್ನು ಸಮ್ಮಾನಿಸಿದ ಪ್ರಗತಿಪರ ಕೃಷಿಕರಾದ ಮೋಹನ ಬೈಪಡಿತ್ತಾಯ, ನರಸಿಂಹ ತೇಜಸ್ವಿ ಕಾನಾವು ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ತನ್ನ ಜೀವನವನ್ನು ಧಾರೆ ಎರೆಯುವವರು ಶಿಕ್ಷಕರು. ಅವರ ಸ್ಮರಣೆ ಆದರ್ಶವಾದದು ಎಂದರು.
ಈ ಸಂದರ್ಭದಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು, ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ, ಪದಾ„ಕಾರಿಗಳಾದ ಜಯಂತ ಗೌಡ ಕುಂಡಡ್ಕ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ತಾರಾನಾಥ ಕುಂಡಡ್ಕ, ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ರವೀಂದ್ರ ಅನವುಗುಂಡಿ, ಶೀನಪ್ಪ ಮೊದಲಾದವರು ಉಪಸ್ಥಿತರಿದ್ದರು.