ಕಾಳು ಮೆಣಸು ಬಹುವಾರ್ಷಿಕ ಸಾಂಬಾರ ಬೆಳೆಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಯಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿದೆ. ಇದನ್ನು ಸಾಂಬಾರ ಬೆಳೆಗಳ ರಾಜ ಅಥವಾ ಕಪ್ಪು ಬಂಗಾರ ಎಂಬ ಹೆಸರುಗಳಿಂದ ಕರೆಯಲ್ಪಡುತ್ತದೆ. ಈ ಬೆಳೆಯನ್ನು ಹೆಚ್ಚು ಸಾವಯವದಿಂದ ಕೂಡಿದ ಮತ್ತು ನೀರು ಬಸಿದು ಹೋಗುವ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯಬಹುದು. ಪ್ರತಿಕೂಲ ಹವಾಮಾನದಿಂದಾಗಿ ಕಾಳುಮೆಣಸಿನಲ್ಲಿ ಶೀಘ್ರ ಸೊರಗು ರೋಗದ ತೀವ್ರತೆ ಹೆಚ್ಚಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಶೀಘ್ರ ಸೊರಗು ರೋಗ ಬಾಧಿತ ಬಳ್ಳಿಗಳ ಎಲೆಗಳ ಮೇಲೆ ಬೂದು ಬಣ್ಣ ಮಿಶ್ರಿತ ವೃತ್ತಾಕಾರದ ಕಪ್ಪು ಮಚ್ಚೆಗಳು ಕಂಡು ಬರುತ್ತವೆ.
ಈ ರೋಗವು ತೀವ್ರವಾದಾಗ ಬಳ್ಳಿಯ ಮೇಲ್ಭಾಗಕ್ಕೂ ಹರಡಿ ಹೂ ಹಾಗೂ ಗೊಂಚಲುಗಳು ಸೊರಗಿ ಉದರಲು ಕರಣವಾಗುವುದಲ್ಲದೆ ಬುಡ ಭಾಗದ ಕಂಡವು ಕೊಳೆತು ತೊಗಟೆ ಸುಲಿದು ಬಳ್ಳಿಗಳು ಸತ್ತು ಹೋಗುತ್ತವೆ. ಆದ್ದರಿಂದ ಕೃಷಿಕರು ಸಮಗ್ರ ರೋಗ ನಿರ್ವಹಣಾ ಪದ್ಧತಿಗಳನ್ನು ಅನುಸರಿಸಿಕೊಂಡು ಸುಸ್ಥಿರ ಇಳುವರಿ ಮತ್ತು ಆದಾಯವನ್ನು ಪಡೆಯಬಹುದೆಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿಗಳಾದ ಡಾ. ಕೇದಾರನಾಥ ರವರು ತಿಳಿಸಿದರು. ಮೊದಲನೆಯದಾಗಿ ರೋಗ ಬಾಧೆಯಿಂದ ಸತ್ತಿರುವ ಬಳ್ಳಿಗಳನ್ನು ಬುಡ ಸಮೇತ ಕಿತ್ತು ನಾಶಪಡಿಸಬೇಕು ಹಾಗೂ ಬಾಧಿತ ಪ್ರದೇಶಕ್ಕೆ ಶೇಕಡಾ ೧ ರ ಬೋರ್ಡೋ ದ್ರಾವಣ ಅಥವಾ ೩ ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ೩ ಲೀಟರನಷ್ಟು ಸುರಿದು ಹೊಸ ಸಸಿಗಳನ್ನು ನಾಟಿ ಮಾಡಬಹುದು. ನಾಟಿ ಮಾಡಲು ರೋಗ ರಹಿತ ಬಳ್ಳಿಗಳನ್ನು ಬಳಸಬೇಕು. ಜೂನ್ ಹಾಗೂ ಸೆಪ್ಟೆಂಬರ್ ತಿಂಗಳುಗಳಲ್ಲಿ ಒಂದು ಕೆಜಿ ಕಹಿ ಬೇವಿನ ಹಿಂಡಿ ಅಥವಾ ೧೦ ಕೆಜಿ ಹಟ್ಟಿ ಗೊಬ್ಬರದ ಜೊತೆಗೆ ೫೦ ಗ್ರಾಂ ಟ್ರೈಕೊಡರ್ಮ ಹಾರ್ಜಿಯನಮ್ ವನ್ನೂ ಮಿಶ್ರಣ ಮಾಡಿ ಪ್ರತಿ ಬಳ್ಳಿಯ ಬುಡಕ್ಕೆ ಹಾಕಬೇಕು ಅಥವಾ ೨೦ ಗ್ರಾಂ ಅರ್ಕಾ ಸೂಕ್ಷ್ಮಾಣು ಜೀವಿಗಳ ಮಿಶ್ರಣವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಪ್ರತಿ ಬಳ್ಳಿಯ ಬುಡ ಭಾಗಕ್ಕೆ ೩ ಲೀಟರ್ ನಷ್ಟು ದ್ರಾವಣವನ್ನು ಸುರಿಯಬೇಕು. ಮಳೆಗಾಲ ಪೂರ್ವದಲ್ಲಿ ಹಾಗೂ ಅಗಸ್ಟ್ ತಿಂಗಳಲ್ಲಿ ಭೂಮಿಯಿಂದ ೧ ಮೀಟರ್ ಎತ್ತರದ ವರೆಗೂ ಬಳ್ಳಿಗಳ ಕಾಂಡಕ್ಕೆ ಶೇಕಡಾ ೧೦ ರ ಪೇಸ್ಟನ್ನು ಬಳಿಯಬೇಕು ಹಾಗೂ ಶೇಕಡಾ ೧ ರ ಬೋರ್ಡೋ ದ್ರಾವಣವನ್ನು ೪೦ ದಿನಗಳ ಅಂತರದಲ್ಲಿ (ಜೂನ್ ಹಾಗು ಜೂಲೈ ತಿಂಗಳಲ್ಲಿ) ೨ ರಿಂದ ೩ ಬಾರಿ ಸಿಂಪರಣೆ ಮಾಡಬೇಕು ಹಾಗೂ ಅಗಸ್ಟ್ ತಿಂಗಳಲ್ಲಿ ಮೆಟೆಲಾಕ್ಸಿಲ್+ಮ್ಯಾಂಕೋಜೇಬ್ @ ೨ ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಬಳ್ಳಿಯ ಬುಡ ಹಾಗೂ ಬಳ್ಳಿಗೆ ಸಿಂಪರಣೆ ಮಾಡಬೇಕು. ಶಿಫಾರಸಿದ ಪ್ರಮಾಣದಲ್ಲಿ ಅಂದರೆ ೧೦೦ : ೪೦ : ೧೪೦ ಗ್ರಾಂ ಸಾರಜನಕ: ರಂಜಕ : ಪೊಟ್ಯಾಷ್ ನ್ನು ಪ್ರತಿ ಬಳ್ಳಿಗೆ ಪ್ರತಿ ವರ್ಷ ಎರಡು ಕಂತುಗಳಲ್ಲಿ ಕೊಡಬೇಕು ಹಾಗೂ ೫ ಗ್ರಾಂ ಸೂಕ್ಷ್ಮ ಪೋಷಕಾಂಶಗಳ ಮಿಶ್ರಣ (ಪೆಪ್ಪರ ಸ್ಪೆಷಿಯಲ್) ವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಮಳೆಗಾಲ ಪ್ರಾರಂಭದಲ್ಲಿ ಅಥವಾ ಹೂ ಬಿಡುವ ಮುಂಚೆ ಹಾಗೂ ೩೦ ದಿನಗಳ ನಂತರ ಎರಡನೇ ಬಾರಿ ಸಿಂಪರಣೆ ಮಾಡುವುದರಿಂದ ಶೀಘ್ರ ಸೊರಗು ರೋಗದ ನಿರ್ವಹಣೆ ಜೊತೆಗೆ ಒಳ್ಳೆಯ ಇಳುವರಿಯನ್ನು ಪಡೆಯಬಹುದು.