ಧಾರ್ಮಿಕ ಸಭೆ, ಕುಣಿತ ಭಜನೆ, ವೈಭವದ ಮೆರವಣಿಗೆ
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಸವನ ಮೂಲೆ ಕುಲ್ಕುಂದ ಇದರ ವತಿಯಿಂದ ೧೩ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ. 7 ರಂದು ಶ್ರೀ ಬಸವೇಶ್ವರ ದೇವಸ್ಥಾನ ಬಸವನಮೂಲೆಯಲ್ಲಿ ಜರುಗಿತು.
ಬೆಳಗ್ಗೆ ಮೂರ್ತಿ ಪ್ರತಿಷ್ಠಾಪನೆ, ನಡೆದು ಮಹಾಗಣಪತಿ ಹೋಮ, ಬಸವೇಶ್ವರ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಪೂರ್ವಾಹ್ನ ಕಲಾವಿದ ಯಜೇಶ್ ಆಚಾರ್ಯ ಇವರಿಂದ ಭಕ್ತಿ ಸಂಗೀತ ನಡೆದು ಮಧ್ಯಾಹ್ನ ಮಹಾಪೂಜೆ ಹಾಗೂ ಪರಿವಾರ ಸಹಿತ ಶ್ರೀ ಬಸವೇಶ್ವರ ದೇವರಿಗೆ ಮಹಾಪೂಜೆ ನಡೆಯಿತು. ಪ್ರಸಾದ ವಿತರಣೆ ನಡೆದು ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಅಪರಾಹ್ನ ಸಭಾ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ನಡೆಯಿತು. ಸಂಜೆ ಮಹಾಪೂಜೆ ನಡೆದು, ಪ್ರಸಾದ ವಿತರಣೆ ನಡೆದು ಶ್ರೀ ಮಹಾಗಣಪತಿ ದೇವರ ಶೋಭಾಯಾತ್ರೆ ಬಳಿಕ ನದಿಯಲ್ಲಿ ಮೂರ್ತಿ ವಿಸರ್ಜನೆ ನಡೆಯಿತು. ಶೋಭಾಯಾತ್ರೆಯಲ್ಲಿ ಟ್ಯಾಬ್ಲೋ, ಬ್ಯಾಂಡ್ ವಾದ್ಯ, ಕೈಕಂಬ ಶಾರದಾಂಭ ಮಹಿಳಾ ಕುಣಿತ ಭಜನಾ ತಂಡ ಹಾಗೂ ಬಸವೇಶ್ವರ ಮಕ್ಕಳ ಕುಣಿತ ಭಜನಾ ತಂಡ ಭಾಗವಹಿಸಿದ್ದವು.
ಧಾರ್ಮಿಕ ಸಭೆ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಿಥುನ್ ಕುಲ್ಕುಂದ, ಧಾರ್ಮಿಕ ಉಪನ್ಯಾಸವನ್ನು ಧಾರ್ಮಿಕ ಚಿಂತಕ ಪೂರ್ಣ ಆತ್ಮಾನಂದ ರಾಮ ಮಾಡಿದರು. ಮುಖ್ಯ ಅತಿಥಿಗಳಾಗಿ ಬಸವೇಶ್ವರ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಸ್ತಂದ, ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸೂರ್ಯಪ್ರಸಾದ್ ಎಸ್ ರಾವ್, ಕುಮಾರಸ್ವಾಮಿ ವಿದ್ಯಾಲಯದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಪ್ರಸಾದ್, ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾಟ ರವಿ ಕಕ್ಕೆಪದವು, ಸರ್ಕಾರಿ ಕಿ. ಪ್ರಾ. ಶಾಲೆ ಕುಲ್ಕುಂದ ಇದರ ಮುಖ್ಯೋಪಾಧ್ಯಾಯ ಮಲ್ಲೇಶಪ್ಪ, ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯರಾದ ರಾಜೇಶ್ ಕುದುರೆ ಮಜಲು, ಬಸವೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವರಾಮ ಪಳ್ಳಿಗದ್ದೆ ವೇದಿಕೆಯಲ್ಲಿದ್ದರು.