✍️ ಸಿದ್ಧೀಕ್ ಮೆತ್ತಡ್ಕ ಅಬುಧಾಬಿ, ಯುಎಈ
ಐದಾರು ವರ್ಷಗಳಿಂದ ಪ್ರತಿಯೊಂದು ಶಿಕ್ಷಕರ ದಿನಾಚರಣೆ ಬರುವಾಗಲೂ ನೆನಪಾಗಿ ಕಾಡುವುದು ನನಗೆ ಕನ್ನಡದ ಬಾಲಪಾಠವನ್ನು ಕಲಿಸಿದ ಮೊದಲ ಗುರು ಪೂರ್ಣಿಮಾ ಟೀಚರ್.
ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಎಂಬ ಕುಗ್ರಾಮದಲ್ಲಿ ಕಲಿತು ವರುಷಗಳು 33 ದಾಟಿದ ಕಾರಣ ಟೀಚರ್ ಊರಿನ ಹೆಸರೋ ಕನಿಷ್ಟ ಜಿಲ್ಲೆಯ ಹೆಸರೋ ಗೊತ್ತಾಗದೆ ಶಿಕ್ಷಕರ ದಿನಾಚರಣೆಯ ದಿನವೆಲ್ಲಾ ಚಡಪಡಿಸುತ್ತಿದ್ದೆ. ಗೆಳೆಯರೆಲ್ಲಾ ಕಲಿಸಿದ ಅಧ್ಯಾಪಕ ವೃಂದದವರಿಗೆ ಶಿಕ್ಷಕರ ದಿನಾಚರಣೆಯ ಶುಭಾಷಯ ಕೋರುವಾಗ, ನನ್ನ ಕೈಹಿಡಿದು ಅಆಇಈ ಕಲಿಸಿದ ಟೀಚರ್ ಮತ್ತೆ ಮತ್ತೆ ನೆನಪಾಗುತ್ತಿದ್ದರು. ಎಲ್ಲಿರುವರೋ ಏನೋ ಹೇಗಿರುವರೋ ಏನೋ ಎಂಬ ನೋವಿನ ನಡುವೆ
ಅವರು ಚೆನ್ನಾಗಿ ನವಿಲಿನ ಚಿತ್ರ ಬಿಡಿಸುತ್ತಿದ್ದ ಅಸ್ಪಷ್ಟ ನೆನಪುಗಳು ಮಾತ್ರ ನನ್ನನ್ನು ಮತ್ತೆ ಮತ್ತೆ ಕಾಡುತ್ತಿತ್ತು.
ಹೇಗಾದರೂ ಅವರನ್ನು ಕಂಡು ಹಿಡಿಯಬೇಕೆಂದು ಜಾಲತಾಣಗಳಾದ ಎಕ್ಸ್, ಇನ್ಸ್ಟಾಗ್ರಾಂ, ಫೇಸ್ ಬುಕ್ಕುಗಳೆಲ್ಲಾ ಒಂದೆರಡು ವರ್ಷ ಪೂರ್ಣಿಮಾ ಎಂದು ಹೆಸರಿರುವ, ಅಧ್ಯಾಪಕಿ ಎಂದು ಊಹೆ ಬಂದವರನ್ನೆಲ್ಲಾ ಸಂಪರ್ಕಿಸಿದರೂ ಫಲ ಮಾತ್ರ ಶೂನ್ಯ.
ಕಳೆದ ಬಾರಿ ಊರಿಗೆ ಹೋದಾಗ ಮಾವಿನಕಟ್ಟೆ ಮತ್ತು ಅಸುಪಾಸಿನ ಆ ಕಾಲದಲ್ಲಿ ಕಲಿತ ಕೆಲವರನ್ನು ಸಂಪರ್ಕಿಸಿ ಮಾತನಾಡಿದಾಗ ಅವರ ಹೆಸರು ಪೂರ್ಣಿಮ ಅಲ್ಲ ಅನ್ನಪೂರ್ಣ ಎಂಬ ಮಾಹಿತಿ ಸಿಕ್ಕಿತು. ಹಾಗೇ ಹುಡುಕಾಟ ಅನ್ನಪೂರ್ಣ ಎಂಬ ಪ್ರೊಫೈಲುಗಳ ಕಡೆಯಾಯಿತು.
ಹಲವಾರು ಅನ್ನಪೂರ್ಣರ ಇನ್ ಬಾಕ್ಸ್ , ಕಮೆಂಟ್ ಬಾಕ್ಸಿಗಳ ಕಡೆ ಹೋಗಿ ವಿಚಾರಿಸಿದೆ. ಫಲ ಮಾತ್ರ ಮತ್ತು ಮತ್ತೂ ಶೂನ್ಯವೇ.
ಛಲಬಿಡದೆ ಈ ವರ್ಷದ ಶಿಕ್ಷಕರ ದಿನದಂದು ಈ ಸಲ ಕಂಡು ಹಿಡಿದೇ ಹಿಡಿಯಬೇಕೆಂಬ ಹಠದಿಂದ ಊರಿನ ಮತ್ತೂ ಕೆಲವರಿಗೆ ಕರೆ ಮಾಡಿ ವಿಚಾರಿಸಿದಾಗ ಅವರ ಹೆಸರು ಪೂರ್ಣಿಮಾ ಎಂದೋ ಅನ್ನಪೂರ್ಣ ಎಂದೋ ಅಲ್ಲ, ಬರೀ “ಪೂರ್ಣ” ಎಂದು ಒಬ್ಬರು ಖಚಿತ ಮಾಹಿತಿ ಕೊಟ್ಟರು. ಆದರೆ ವಿಳಾಸವೋ ಊರು ಯಾವುದೆಂದೋ ಗೊತ್ತಿಲ್ಲ ಎಂದರು.
ನಾನು ನನ್ನ ಹಳೇ ಕೆಲಸ ಮುಂದುವರಿಸಿದೆ. ಪೂರ್ಣ ಎಂಬ ಹಲವಾರು ಐಡಿಗಳು ಕಾಣ ಸಿಕ್ಕವು.. ಕೊನೆಗೆ ಮೂರು ಪ್ರೋಫೈಲುಗಳ ಬಗ್ಗೆ ಬಲವಾದ ಸಂಶಯ ಬಂತು. ಒಂದರಿಂದ ರಿಪ್ಲೈ ಬರಲಿಲ್ಲ, ಎರಡನೇಯವರು ಚಿತ್ರದುರ್ಗ ಜಿಲ್ಲೆಯ ಟೀಚರೇ… ಆದರೆ ಸುಳ್ಯ ಎಂಬ ತಾಲೂಕೇ ಗೊತ್ತಿಲ್ಲ ಅಂದರು.
ಮೂರನೇಯವರು ನನಗೆ ಕನ್ನಡದ ಕಂಪನ್ನು ಪಸರಿಸಿದ ನನ್ನ ಟೀಚರೇ ಆಗಿರಲಿ ಎಂಬ ಪ್ರಾರ್ಥನೆಯೊಂದಿಗೆ ಅವರ ಸಂಪರ್ಕ ಸಾಧಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.. ಕೊನೆಗೆ ಅವರ ವಾಲಿಂದಲೇ ದೊರೆತ ಮಾಹಿತಿಯಂತೆ ಅವರ ಪತಿಯ ಐಡಿಗೆ ಹೋಗಿ ತಡಕಾಡಿದೆ. ಅಲ್ಲಿ ಬಿಡಾರ ಎಂಬ ಹೋಂಸ್ಟೇ ಕುರಿತು ವಿವರವಿತ್ತು. ತಕ್ಷಣ ಗೂಗಲ್ ಮೊರೆ ಹೋಗಿ ನೋಡಿದೆ. ಮಾಹಿತಿಗಳ ಜೊತೆ ಒಂದೆರಡು ಫೋನ್ ನಂಬರುಗಳು ಸಿಕ್ಕವು. ಸೇವ್ ಮಾಡಿಕೊಂಡು ವಾಟ್ಸಪ್ ನೋಡಿದಾಗ ಒಂದರಲ್ಲಿ ಪ್ರೋಫೈಲ್ ಚಿತ್ರ, ಫೇಸ್ ಬುಕ್ಕಿನಲ್ಲಿದ್ದ “ಪೂರ್ಣ ಭಟ್” ಎಂಬವರ ಅದೇ ಚಿತ್ರ. ಮತ್ತೊಮ್ಮೆ ಇದುವೇ ನನಗೆ ಅಕ್ಷರ ಕಲಿಸಿದ ಗುರುವಾಗಿರಲಿ ಎಂಬ ಪ್ರಾರ್ಥನೆಯೊಂದಿಗೆ “ನೀವು ಸುಳ್ಯ ತಾಲೂಕಿನ ಮಾವಿನಕಟ್ಟೆ ಶಾಲೆಯಲ್ಲಿ ಅದ್ಯಾಪಕಿ ಆಗಿದ್ದಿರಾ” ಎಂದು ಮೆಸೇಜ್ ಮಾಡಿದೆ. ಅಲ್ಪ ಸಮಯದ ನಂತರ
” ಹೌದು.. 33 year back..” ಎಂಬ ಉತ್ತರ ಬಂತು…
ನನ್ನ ಖುಷಿಗೆ ಮಿತಿಯಿರಲಿಲ್ಲ….
ಲೋಕವೇ ಗೆದ್ದ ಖುಷಿ..
ಖುಷಿಯಲ್ಲಿ ಒಂದೆರಡು ಕಣ್ಣ ಹನಿಗಳು ಕೆಳಗೆ ಬಿದ್ದವು…
ಕಷ್ಟ ನಷ್ಟಗಳ ಕಣ್ಣೀರ ಕೋಡಿ ಹರಿದು ಸವೆದ ಕೆನ್ನೆಗಳಲ್ಲಿ ಅಪರೂಪದ ಒಂದೆರಡು ಸಂತೋಷದ ಹನಿ ಬಿಂದುಗಳು…
ಹಾಗೇ.. ಟೀಚರ್ ಹಲಗೆಯಲ್ಲಿ ಆಣಿ ಹೊಡೆದು ಬಿಡಿಸುತ್ತಿದ್ದ ನವಿಲೊಂದು ಹಾರಿ ಬಂದು ನರ್ತನವಾಡಿದಂತೆನಿಸಿತು…