ಅ.9ರಿಂದ ಅ.17: ಸುಳ್ಯದ ನಾಡಹಬ್ಬ ಶ್ರೀ ಶಾರದಾಂಬ ದಸರಾ ಉತ್ಸವ

0

ಶ್ರೀ ಶಾರದಾಂಬ ದಸರಾ ಸಮೂಹ ಸಮಿತಿಯ ವತಿಯಿಂದ ಪತ್ರಿಕಾಗೋಷ್ಠಿ

ಮಹಿಳಾ ಹಾಗೂ ಮಕ್ಕಳ ದಸರಾ ವಿಶೇಷ ಮೆರಗು

ಸಂಗೀತ ನಿರ್ದೇಶಕ ಗುರುಕಿರಣ್ ಆಗಮಿಸುವ ನಿರೀಕ್ಷೆ

ಸುಳ್ಯದಲ್ಲಿ 1972ರಲ್ಲಿ ಪ್ರಾರಂಭಗೊಂಡು ಕಳೆದ 52 ವರ್ಷಗಳಿಂದ ಸುಳ್ಯದಲ್ಲಿ ವಿಜೃಂಭಣೆಯಿಂದ ನಡೆಸಲ್ಪಡುವ ಶ್ರೀ ಶಾರದಾಂಬ ದಸರಾ ಉತ್ಸವವು ಈ ಬಾರಿ ಮೈಸೂರು, ಮಡಿಕೇರಿ ಹಾಗೂ ಮಂಗಳೂರು ದಸರಾ ರೀತಿಯಲ್ಲಿ ಅತೀ ವಿಜೃಂಭಣೆಯಿಂದ ಅ.9ರಿಂದ ಅ.17ರವರೆಗೆ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದ ಶ್ರೀ ಶಾರದಾಂಬ ಕಲಾವೇದಿಕೆಯಲ್ಲಿ ಜರುಗಲಿದೆ ಎಂದು ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸೆ.21ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸಾರ್ವಜನಿಕ ಶ್ರೀ ಶಾರದಾಂಬ ದಸರಾ ಸಮೂಹ ಸಮಿತಿಯ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಈ ಬಾರಿಯ ಸುಳ್ಯದ ಶಾರದಾಂಬ ಉತ್ಸವವು ಪ್ರತೀ ವರ್ಷಕ್ಕಿಂತ ಹೆಚ್ಚಿನ ವಿಜೃಂಭಣೆಯಿಂದ ಪೂರ್ತಿ ದಿನ ಮಹಿಳಾ ದಸರಾ -2024 ಜರುಗಲಿದೆ‌. ಅಂದು ಸ್ಟಾಲ್ ಗಳಲ್ಲಿ ತಾಲೂಕಿನ ಮಹಿಳೆಯರು ಮನೆಯಿಂದ ತಯಾರಿಸಿಕೊಂಡು ಬಂದ ವಿಶೇಷ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಇದರ ಜೊತೆಗೆ ಗೃಹ ತಯಾರಿಕಾ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಮಹಿಳೆಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಸೇರಿದಂತೆ ಆ ದಿನದಂದು ಮಹಿಳೆಯರಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಹೇಳಿದರು.

ಅ.13ರಂದು ಸುಳ್ಯ ತಾಲೂಕಿನ ವಿವಿಧ ಭಾಗದ ಮಕ್ಕಳಿಂದ ಸುಳ್ಯ ಬಸ್ ನಿಲ್ದಾಣದಿಂದ ಶಾರದಾಂಬ ಕಲಾವೇದಿಕೆಯ ತನಕ ಮಕ್ಕಳ ಮೆರವಣಿಗೆ ಸಾಗಿ ಬರಲಿದ್ದು, ಮಕ್ಕಳಿಂದ ಸಾಂಸ್ಕೃತಿಕ ವೈಭವ ಜರುಗಲಿದೆ ಎಂದು ಹೇಳಿದರು.

ನಗರದಲ್ಲಿ ವಿದ್ಯುತ್ ದೀಪಾಲಂಕಾರ – ಪಾರ್ಕಿಂಗ್ ಗೂ ಪತ್ಯೇಕ ವ್ಯವಸ್ಥೆ

ಪ್ರತೀ ವರ್ಷ ಸುಳ್ಯ ನಗರವನ್ನು ನಾವು ದಸರಾ ಸಂದರ್ಭದಲ್ಲಿ ತಳಿರು ತೋರಣ ಹಾಗೂ ಬಂಟಿಂಗ್ಸ್ ಮೂಲಕ ಅಲಂಕಾರ ಮಾಡುತ್ತಿದ್ದೆವು. ಆದರೆ ಈ ವರ್ಷ ಸುಳ್ಯ ನಗರ ಪಂಚಾಯತ್ ಆಡಳಿತದ ಸಹಕಾರದೊಂದಿಗೆ, ವರ್ತಕರ ಸಹಭಾಗಿತ್ವದಲ್ಲಿ ಪ್ರತೀ ಅಂಗಡಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡುವಂತೆ ವಿನಂತಿಸಿಕೊಂಡಿದ್ದೇವೆ. ಇದಕ್ಕಾಗಿ ಎಲ್ಲಾ ಜಾತಿ ಮತ, ಧರ್ಮದವರು ನಮ್ಮೊಂದಿಗೆ ಕೈಜೋಡಿಸಬೇಕು.

ಈ ಬಾರಿ ಸುಮಾರು 15ರಿಂದ 20 ಟ್ಯಾಬ್ಲೋ ಇರಲಿದ್ದು, ಮಹಿಳಾ ಸಮಿತಿಯ ವತಿಯಿಂದಲೂ ಈ ಬಾರಿ ಟ್ಯಾಬ್ಲೋ ಇರಲಿದೆ ಎಂದು ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಅವರು ಹೇಳಿದರು.

ಕೊನೆಯ ದಿನ ಜರುಗಲಿರುವ ಶೋಭಾಯಾತ್ರೆಯ ದಿನ ಅರಂತೋಡು – ಕಲ್ಲುಗುಂಡಿ ಭಾಗದಿಂದ ಬರುವವರು ಗಾಂಧಿನಗರ ಶಾಲಾ ಮೈದಾನದಲ್ಲಿ , ಜಾಲ್ಸೂರು – ಗುತ್ತಿಗಾರು ಭಾಗದಿಂದ ಬರುವವರು ಜ್ಯೋತಿ ವೃತ್ತ ಹಾಗೂ ಪ್ರಭು ಮೈದಾನದಲ್ಲಿ , ಮಂಡೆಕೋಲು – ಅಜ್ಜಾವರ ಭಾಗದಿಂದ ಬರುವವರು ಎ.ಪಿ.ಎಂ.ಸಿ. ಮೈದಾನದಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿ ಸ್ಥಳಕ್ಕೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ‌. ಒಟ್ಟಾರೆ ಶೋಭಾಯಾತ್ರೆಯ ದಿನದಂದು ಜ್ಯೋತಿ ಸರ್ಕಲ್ ನಿಂದ ಗಾಂಧಿನಗರದ ವರೆಗೆ ರಸ್ತೆ ಬದಿ ವಾಹನಗಳನ್ನು ಪಾರ್ಕಿಂಗ್ ಮಾಡದೆ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ನಾರಾಯಣ ಕೇಕಡ್ಕ ಅವರು ವಿನಂತಿಸಿಕೊಂಡರು.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರು


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ಬಾರಿ ನಾಲ್ಕೈದು ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದೇವೆ.
ಸಾಂಸ್ಕೃತಿಕ ಕಾರ್ಯಕ್ರಮದ ಕೊನೆಯ ದಿನ ನಡೆಯುವ ಸಂಗೀತ ರಸಮಂಜರಿಯಲ್ಲಿ ಸರಿಗಮಪ ಸೀಸನ್ 20ರ ವಿಜೇತ ದರ್ಶನ್ ನಾರಾಯಣ್ ನೇತೃತ್ವದ ಐದಾರು ಮಂದಿ ಸ್ಟಾರ್ ಸಿಂಗರ್ ಗಳನ್ನು ಕರೆಸಿದ್ದೇವೆ. ಜೊತೆಗೆ ಆ ದಿನ ವಿಶೇಷವಾಗಿ ಸಂಗೀತ ನಿರ್ದೇಶಕರುಗಳಾದ ಗುರುಕಿರಣ್, ಅರ್ಜುನ್ ಜನ್ಯ ಹಾಗೂ ಹಾಡುಗಾರ ವಿಜಯಪ್ರಕಾಶ್ ಅವರ ಜೊತೆ ಸಮಿತಿಯ ವತಿಯಿಂದ ಮಾತನಾಡಿಸುವ ಕಾರ್ಯ ನಡೆಯುತ್ತಿದ್ದು, ಯಾರಾದರೂ ಒಬ್ಬರು ಸಂಗೀತ ನಿರ್ದೇಶಕರು ಆಗಮಿಸುವ ನಿರೀಕ್ಷೆ ಇದೆ ಎಂದು ನಾರಾಯಣ ಕೇಕಡ್ಕರು ತಿಳಿಸಿದರು.

ಉತ್ಸವ ಸಮಿತಿಯ ಅಧ್ಯಕ್ಷ ಡಾ. ಡಿ.ವಿ. ಲೀಲಾಧರ್ ಅವರು ಮಾತನಾಡಿ ಸುಳ್ಯ ತಾಲೂಕಿನ ಧಾರ್ಮಿಕ, ಸಾಮಾಜಿಕ ಧುರೀಣರು ಹಾಗೂ ಹಿರಿಯರನ್ನು ಸೇರಿಸಿಕೊಂಡು ದಸರಾ ಉತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಜರುಗಿಸಲು ನಿರ್ಧರಿಸಿದ್ದೇವೆ. ಸುಳ್ಯ ತಾಲೂಕಿನ ಜನತೆ ದಸರಾ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಬೇಕು ಎಂದು ಹೇಳಿದರು.
ವಿವಿಧ ಸಂಘ – ಸಂಸ್ಥೆಗಳು ತಮ್ಮ ದಸರಾ ಎಂದು ಭಾವಿಸಿ, ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು. ಅಂತಿಮ ದಿನದ ಶೋಭಾಯಾತ್ರೆಯಲ್ಲಿಯೂ ತಾಲೂಕಿನ ಜನತೆ ಭಾಗವಹಿಸಬೇಕು ಎಂದು ಹೇಳಿದರಲ್ಲದೇ, ದಸರಾ ಕಾರ್ಯಕ್ರಮಕ್ಕೆ ಮಾದ್ಯಮ, ನಗರ ಆಡಳಿತ, ಕಂದಾಯ, ಪೊಲೀಸ್ ಇಲಾಖೆಯ ಸಂಪೂರ್ಣ ಸಹಕಾರ ನೀಡುವಂತೆ ತಿಳಿಸಿದರು.

ಸುಳ್ಯದ ಎರಡನೇ ಜಾತ್ರೆ : ಗೋಕುಲ್ ದಾಸ್

ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ ಗೋಕುಲ್ ದಾಸ್ ಅವರು ಮಾತನಾಡಿ ಕಳೆದ 52 ವರ್ಷದಿಂದ ಸುಳ್ಯದ ಶ್ರೀ ಶಾರದಾಂಬ ಉತ್ಸವವು ಅದ್ಧೂರಿಯಾಗಿ ಜರುಗುತ್ತಿದೆ. ಈ ಬಾರಿ ಅತ್ಯಂತ ವಿಶೇಷವಾಗಿ ದಸರಾ ನಡೆಯಲಿದ್ದು, ಸುಳ್ಯದ ಎರಡನೇ ಜಾತ್ರೆಯಾಗಿ ದಸರಾ ಕಾರ್ಯಕ್ರಮವು ಮೂಡಿ ಬರಲಿದ್ದು, ಈ ಸಲದ ಶೋಭಾಯಾತ್ರೆಯಲ್ಲಿ ಹದಿನೈದರಿಂದ ಇಪ್ಪತ್ತು ಟ್ಯಾಬ್ಲೋ ಗಳು ಇರಲಿದೆ ಎಂದು ಹೇಳಿದರು.

ಶ್ರೀ ಶಾರದಾಂಬ ಉತ್ಸವ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು ಅವರು ಮಾತನಾಡಿ ಈ ಬಾರಿ ವಿಶೇಷ ಆಕರ್ಷಣೆಯೊಂದಿಗೆ ಸುಳ್ಯ ದಸರಾ ನಡೆಯಲಿದ್ದು, ಪ್ರತೀ ದಿನ ರಾತ್ರಿ ಅನ್ನಸಂತರ್ಪಣೆಯ ವ್ಯವಸ್ಥೆ ಇರಲಿದೆ. ಶೋಭಾಯಾತ್ರೆಯಲ್ಲಿ ತಾಲೂಕಿನ ಎಲ್ಲರೂ ಭಾಗವಹಿಸಬೇಕು ಎಂದು ಹೇಳಿದರು.

ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ ಅವರು ಮಾತನಾಡಿ ಸುಳ್ಯ ದಸರಾದಲ್ಲಿ ಈ ಬಾರಿ ಒಂದು ದಿನ ಪೂರ್ತಿ ಮಹಿಳಾ ದಸರಾ ನಡೆಯಲಿದೆ. ಬೆಳಿಗ್ಗೆಯಿಂದ ರಾತ್ರಿಯ ತನಕ ಮಹಿಳೆಯರಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ತಾಲೂಕಿನ ಎಲ್ಲಾ ಮಹಿಳೆಯರು ಇದರಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದು ಹೇಳಿದರು ‌

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಶಾರದಾಂಬ ಸೇವಾ ಸಮಿತಿಯ ಕೋಶಾಧಿಕಾರಿ ಅಶೋಕ್ ಪ್ರಭು, ಶ್ರೀ ಶಾರದಾಂಬ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಖಜಾಂಜಿ ಬೂಡು ರಾಧಾಕೃಷ್ಣ ರೈ, ಶ್ರೀ ಶಾರದಾಂಬ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಉಪಾಧ್ಯಕ್ಷರುಗಳಾದ ಡಾ. ಯಶೋದಾ ರಾಮಚಂದ್ರ, ಶ್ರೀಮತಿ ಲತಾ ಮಧುಸೂದನ್, ಹರೀಶ್ ರೈ ಉಬರಡ್ಕ, ಹೇಮಂತ್ ಕಾಮತ್, ಶ್ರೀ ಶಾರದಾಂಬ ಉತ್ಸವ ಸಮಿತಿಯ ಕೋಶಾಧಿಕಾರಿ ಗಣೇಶ್ ಆಳ್ವ, ದಸರಾ ಉತ್ಸವ ಸಮಿತಿಯ ಖಜಾಂಜಿ ಸುನಿಲ್ ಕೇರ್ಪಳ, ಮಾಧ್ಯಮ ವಕ್ತಾರ ಕೃಷ್ಣ ಬೆಟ್ಟ, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಂ.ಕೆ. ಸತೀಶ್, ಗೌರವ ಸದಸ್ಯರಾದ ತೀರ್ಥರಾಮ ಜಾಲ್ಸೂರು ಸೇರಿದಂತೆ ಶ್ರೀ ಶಾರದಾಂಬ ಸಮೂಹ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.