ಐವರ್ನಾಡು ರಬ್ಬರು ಫ್ಯಾಕ್ಟರಿಗೆ ಕೆಎಫ್ ಡಿಸಿ ಅಧ್ಯಕ್ಷರ ಭೇಟಿ

0

ರಬ್ಬರ್ ಪ್ಲಾಂಟೇಶನ್ ,ಫ್ಯಾಕ್ಟರಿ ಪರಿಶೀಲನೆ – ಕಾರ್ಮಿಕರ ಬೇಡಿಕೆ ಪೂರೈಸುವ ಭರವಸೆ

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ)ದ ಅಧ್ಯಕ್ಷ ಬಸವರಾಜ ನೀಲಪ್ಪ ಶಿವಣ್ಣನವ‌ರ್ ಸೆ.24ರಂದು ಐವರ್ನಾಡು ರಬ್ಬರು ಫ್ಯಾಕ್ಟರಿಗೆ ಭೇಟಿ ನೀಡಿದರು. ಕೆಎಫ್‌ಡಿಸಿಯ ವಿವಿಧ ರಬ್ಬರ್ ಪ್ಲಾಂಟೇಷನ್, ರಬ್ಬರ್ ಫ್ಯಾಕ್ಟರಿಗಳಿಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ರಬ್ಬರ್ ಕಾರ್ಮಿಕರ ಮನೆಗಳಿಗೆ ಭೇಟಿ ನೀಡಿದರು. ಬಳಿಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಮಿಕ ಮುಖಂಡರ ಜೊತೆ ಮಾತುಕತೆ ನಡೆಸಿದರು. ಕಾರ್ಮಿಕರಿಗೆ ಶೇ.20 ಬೋನಸ್ ನೀಡಬೇಕು, ಕಾರ್ಮಿಕರ ಮನೆಗಳು ನಾದುರಸ್ತಿಯಲ್ಲಿದ್ದು ಹೊಸ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಅವರು ಕೆಎಫ್‌ಡಿಸಿ ಅಧ್ಯಕ್ಷರಿಗೆ ಮನವಿ ಮಾಡಿದರು. ಕಾರ್ಮಿಕ ಮುಖಂಡರು ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಮನವಿ ಸಲ್ಲಿಸಿದರು. 2023-24ನೇ ಸಾಲಿನಲ್ಲಿ ಬೋನಸನ್ನು ಶೇ.20ಕ್ಕೆ ಏರಿಸಬೇಕು, ತಮಿಳು ಬಾಂಧವರ ಸುವರ್ಣ ಮಹೋತ್ಸವದ ಅಂಗವಾಗಿ ಕಾರ್ಮಿಕರಿಗೆ ವೇತನ ಸಹಿತ ಒಂದು ದಿನದ ರಜೆ ಘೋಷಣೆ ಮಾಡಬೇಕು, ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಿಸುವ ಕಲ್ಯಾಣ ಮಂಟಪಕ್ಕೆ ಮೇ ಡೆಗೆ ನಿಗದಿಪಡಿಸಿದ ಹಣವನ್ನು ನೀಡಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿರಿಸಿ ಮನವಿ ಸಲ್ಲಿಸಿದರು.


ಕಾರ್ಮಿಕರಿಗೆ ಬೋನಸ್ ಕೊಡಿಸುವ ಪ್ರಯತ್ನ
ರಬ್ಬ‌ರ್ ನಿಗಮ ನಷ್ಟದಲ್ಲಿದೆ. ಆದರೂ ಕಾರ್ಮಿಕರಿಗೆ ನ್ಯಾಯಯುತವಾಗಿ ದೊರಕಬೇಕಾದ ಸೌಲಭ್ಯಗಳನ್ನು ದೊರಕಿಸಿ ಕೊಡಲು ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ಕೆಎಫ್‌ಡಿಸಿ ಅಧ್ಯಕ್ಷರಾದ ಬಸವರಾಜ ನೀಲಪ್ಪ ಶಿವಣ್ಣನವ‌ರ್ ಹೇಳಿದರು. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಕಾರ್ಮಿಕರು ಮುಂದಿರಿಸಿದ ಬೋನಸ್ ಬೇಡಿಕೆಯನ್ನು ಈಡೇರಿಸಲು ಎಲ್ಲಾ ಪ್ರಯತ್ನ ನಡೆಸಲಾಗುವುದು. ಕಾರ್ಮಿಕರ ಮನೆಗಳ ಪರಿಸ್ಥಿತಿಯ ಪರಿಶೀಲನೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ವರದಿ ಪರಿಶೀಲನೆ ನಡೆಸಿ ನಿಗಮದ ವತಿಯಿಂದ ಸಾಧ್ಯವಾಗುವ ಎಲ್ಲಾ ಸಹಾಯ ಮಾಡಲಾಗುವುದು ಅಥವಾ ವಸತಿ ಸಚಿವರ ಗಮನಕ್ಕೆ ತಂದು ಪರಿಹಾರಕ್ಕೆ ಶ್ರಮಿಸಲಾಗುವುದು ಎಂದು ಹೇಳಿದರು.


ಕೆಎಫ್‌ಡಿಸಿ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ಹಾಗೂ ಇತರ ಅಧಿಕಾರಿಗಳು ಜೊತೆಯಲ್ಲಿದ್ದರು.ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ನಗರ ಪಂಚಾಯತ್ ಸದಸ್ಯ ಸಿದ್ದಿಕ್ ಕೊಕ್ಕೊ, ಕಾರ್ಮಿಕ ಮುಖಂಡರಾದ ಆನಂದ ರಾಮಸ್ವಾಮಿ, ಶಂಕರಲಿಂಗಂ, ಜೀವರತ್ನ, ಅಣ್ಣಾದೊರೈ, ಸುಂದರಲಿಂಗಂ, ಲೋಕನಾಥ್, ಗಣೇಶನ್ ನಾಗಪಟ್ಟಣ ಮತ್ತಿತರರು ಉಪಸ್ಥಿತರಿದ್ದರು.