ಗಾಂಧಿನಗರ ಕೆಪಿಎಸ್ ಪ್ರಾಥಮಿಕ ಶಾಲಾ ವಿಭಾಗದ ಸಹಶಿಕ್ಷಕಿ ಶ್ರೀಮತಿ ದಮಯಂತಿ ಅಡ್ಕಬಳೆ ಸೇವಾ ನಿವೃತ್ತಿ – ಬೀಳ್ಕೊಡುಗೆ

0

ಸುಳ್ಯದ ಗಾಂಧಿನಗರ ಕೆಪಿಎಸ್‌ನ ಪ್ರಾಥಮಿಕ ವಿಭಾಗದಲ್ಲಿ ಕಳೆದ 27 ವರ್ಷಗಳಿಂದ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ಸೆ. 30ರಂದು ವಯೋನಿವೃತ್ತಿ ಹೊಂದಿದ ಶ್ರೀಮತಿ ದಮಯಂತಿ ಅಡ್ಕಬಳೆಯವರಿಗೆ ಬೀಳ್ಕೊಡುಗೆ ಸಮಾರಂಭ ಶಾಲಾ ರಂಗಮಂದಿರದಲ್ಲಿ ಅ. 1ರಂದು ನಡೆಯಿತು.

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್‌ರವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಆಲೆಟ್ಟಿ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಅರುಣ್‌ಕುಮಾರ್ ಅಭಿನಂದನಾ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಚಿದಾನಂದ ಕುದ್ಪಾಜೆ, ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಾ, ಸಿಆರ್‌ಪಿ ಮಮತಾ ರವೀಶ್ ಪಡ್ಡಂಬೈಲು, ಕೆಪಿಎಸ್ ಪ್ರಾಂಶುಪಾಲೆ ಶ್ರೀಮತಿ ಪರಮೇಶ್ವರಿ, ಪ್ರೌಢ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಜ್ಯೋತಿಲಕ್ಷ್ಮಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೆ.ಕೆ. ರೈ, ದಮಯಂತಿ ಅಡ್ಕಬಳೆಯವರ ಪತಿ ನಿವೃತ್ತ ದೈ.ಶಿ.ಶಿಕ್ಷಕ ತೀರ್ಥರಾಮ ಅಡ್ಕಬಳೆ, ನಿವೃತ್ತ ದೈ.ಶಿ.ಶಿಕ್ಷಕಿ ಎ.ಜಿ.ಭವಾನಿ, ನಿವೃತ್ತ ಮುಖ್ಯಶಿಕ್ಷಕ ಕೋಟಿಯಪ್ಪ ಪೂಜಾರಿ, ಪುತ್ಯ ಪೆರಾಜೆ ಶಾಲೆಯ ಶಿಕ್ಷಕಿ ಶ್ರೀಮತಿ ಜಯಶ್ರೀ ಉಪಸ್ಥಿತರಿದ್ದರು.

ನಿವೃತ್ತಿಗೊಂಡ ಶಿಕ್ಷಕಿ ಶ್ರೀಮತಿ ದಮಯಂತಿ ಅಡ್ಕಬಳೆ ದಂಪತಿಗಳನ್ನು ಗಾಂಧಿನಗರ ಕೆಪಿಎಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಶಿಕ್ಷಕ ವೃತ್ತಿ ಸಂದರ್ಭದಲ್ಲಿ ಸಹಕರಿಸಿದವರನ್ನು ಶಿಕ್ಷಕಿ ದಮಯಂತಿಯವರು ನೆನೆಸಿ ಭಾವುಕರಾದರು.

ನಿವೃತ್ತಿಗೊಂಡ ದಮಯಂತಿ ಅಡ್ಕಬಳೆಯವರು ರೂ. 25,000 ವನ್ನು ಶಾಲಾ ದತ್ತಿನಿಧಿಗೆ ಸಮರ್ಪಿಸಿ, ಪ್ರತಿವರ್ಷ ಸ್ವಾತಂತ್ರ್ಯೋತ್ಸವದ ದಿನ ಸಿಹಿತಿಂಡಿ ವಿತರಿಸಲು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪದ್ಮನಾಭ ಅತ್ಯಾಡಿಯವರನ್ನು, ಕೆಪಿಎಸ್ ಪ್ರಾಂಶುಪಾಲೆ ಶ್ರೀಮತಿ ಪರಮೇಶ್ವರಿಯವರನ್ನು ಗೌರವಿಸಲಾಯಿತು.

ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಪದ್ಮನಾಭ ಅತ್ಯಾಡಿ ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಚಂದ್ರಾವತಿ ವಂದಿಸಿದರು. ಶಿಕ್ಷಕಿ ಶ್ರೀಮತಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವೃಂದ, ಶಿಕ್ಷಕ ವೃಂದ, ಎಸ್‌ಡಿಎಂಸಿ ಸದಸ್ಯರು, ಅಕ್ಷರ ದಾಸೋಹ ಸಿಬ್ಬಂದಿಗಳು, ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು