ಬೆಳ್ಳಾರೆ ಕೆಪಿಎಸ್ ಪ್ರಾಥಮಿಕ ವಿಭಾಗದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

0

.ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಭಾರತದ ಎರಡನೇ ಪ್ರಧಾನಿ ಪಂಡಿತ್ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು.

ವಿದ್ಯಾರ್ಥಿಗಳಾದ ಮಹತಿ ಆಕಿರೆಕಾಡು ರಾವ್, ಸೋನಲ್ ರೆನಿಶಾ ಫೆರ್ನಾಂಡಿಸ್, ಮಹಮ್ಮದ್ ಅಯಾಝ್ ಇವರುಗಳು ಸರ್ವಧರ್ಮ ಪ್ರಾರ್ಥನೆಯನ್ನು ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಬಳಿಕ ಸ್ಕೌಟ್ ಗೈಡ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆಗಳನ್ನು ಹಾಡಿದರು. ಶಾಲಾ ಪದವೀಧರೇತರ ಮುಖ್ಯೋಪಾಧ್ಯಾಯರಾದ ಮಾಯಿಲಪ್ಪ ಜಿ ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು.

ಎಸ್ ಡಿ ಎಮ್ ಸಿ ಕಾರ್ಯಾಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಸದಸ್ಯರಾದ ಆರೀಫ್, ಉಪ ವಲಯ ಅರಣ್ಯಾಧಿಕಾರಿ, ಮುಖ್ಯ ಗುರುಗಳು, ಶಿಕ್ಷಕರು ಮತ್ತು ವಿದ್ಯಾರ್ಥಿ ನಾಯಕರು, ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಿದರು.

ಸ್ಥಳೀಯ ಉಪ ವಲಯ ಅರಣ್ಯಾಧಿಕಾರಿ ದಿಲೀಪ್ ಕುಮಾರ್ ಬಿ.ವಿ ಇವರು, ಸೀಡ್ ಬಾಲ್ ಕಾರ್ಯಕ್ರಮದ ಅವಶ್ಯಕತೆ ಹಾಗೂ ಪ್ರಸ್ತುತತೆ, ಕಾಡಿನ ಸಂರಕ್ಷಣೆಯ ಬಗ್ಗೆ ಮಕ್ಕಳಲ್ಲಿ ಇರಬೇಕಾದ ಕಾಳಜಿ ಇವುಗಳ ಬಗ್ಗೆ ಅರಿವು ಮೂಡಿಸಿದರು. ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಎರಡು ಮರಗಳನ್ನು ನೆಟ್ಟು ಪೋಷಿಸಿ ತಮ್ಮೊಂದಿಗೆ ಅದು ಬೆಳೆಯುವಂತೆ ನೋಡಿಕೊಳ್ಳಬೇಕಾಗಿ ಮಕ್ಕಳಿಗೆ ಕರೆ ನೀಡಿದರು. ನಂತರ ಬೀಜದುಂಡೆ ವಿತರಣೆ ಕಾರ್ಯಕ್ರಮ ಗಣ್ಯರಿಂದ ನೆರವೇರಿತು.

ವಿದ್ಯಾರ್ಥಿನಿಯರಾದ ಮಾನ್ವಿ ಎಂ ರೈ, ಪಿ ಮಾನ್ವಿ, ಬಿಂದುಶ್ರೀ ಇವರು ಗಾಂಧಿಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯ ಪ್ರಯುಕ್ತ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಮಾತನಾಡಿದರು. ದಿನದ ಮಹತ್ವದ ಕುರಿತು ಶಾಲಾ ಶಿಕ್ಷಕರಾದ ರಾಜನಾಯಕ ಟಿ ಇವರು ಮಕ್ಕಳಿಗೆ ಉತ್ತಮವಾದ ಮಾಹಿತಿಯನ್ನು ಕೊಟ್ಟರು. ಗಣ್ಯ ಪುರುಷರ ಆದರ್ಶಗಳನ್ನು ನಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಶಿಕ್ಷಕರಾದ ದಿನೇಶ್ ಮಾಚಾರ್ ರವರು ಗಾಂಧೀಜಿಯವರ ದಕ್ಷಿಣ ಕನ್ನಡದ ನಂಟು, 1934 ರಲ್ಲಿ ಪುತ್ತೂರಿಗೆ ಅವರು ನೀಡಿದ ಭೇಟಿ, ಆ ಸಂದರ್ಭದ ಸ್ವಾತಂತ್ರ್ಯ ಹೋರಾಟ ಇವುಗಳ ಬಗ್ಗೆ ಮಾತನಾಡಿದರು. ಬಳಿಕ ಸರಸ್ವತಿ ಪೂಜೆಯನ್ನು ಶಾಲಾ ಮುಖ್ಯೋಪಾಧ್ಯಾಯರು ಮತ್ತು ವಿದ್ಯಾರ್ಥಿ ನಾಯಕರು ನೆರವೇರಿಸಿದರು. ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಶಾಲಾ ಆವರಣದ ಸ್ವಚ್ಛತಾ ಕಾರ್ಯ ನಡೆಸಿಕೊಟ್ಟರು.