ಸುಳ್ಯದ ಶ್ರೀ ಶಾರದಾಂಬ ದಸರಾ ಉತ್ಸವ -2024

0

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ

ಡಾ. ಆರ್‌.ಕೆ. ನಾಯರ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಸನ್ಮಾನ ಗೌರವ

ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿಯ ವತಿಯಿಂದ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತಿರುವ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ -2024ರ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ಶ್ರೀ ಶಾರದಾಂಬ ಕಲಾವೇದಿಕೆಯಲ್ಲಿ ಅ.16ರಂದು ರಾತ್ರಿ ನಡೆಯಿತು.

ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು .
ಈ ಸಂದರ್ಭದಲ್ಲಿ ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಡಾ. ಆರ್.ಕೆ. ನಾಯರ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಯೋಚನೆ – ಯೋಜನೆ ಹಾಕಿಕೊಂಡಾಗ ಕಾರ್ಯಕ್ರಮದ ಯಶಸ್ವಿ ಸಾಧ್ಯ: ಮಾಜಿ ಸಂಸದ ಕಟೀಲ್
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ಉತ್ಸವಗಳು ಉತ್ಸಾಹ ಕ್ಕೆ ಮಾತ್ರ ಸೀಮಿತವಾಗಿರದೆ ಯೋಜನೆ ಯೋಜನೆಯ ಮೂಲಕ ಕಾರ್ಯಕ್ರಮ ಆಯೋಜಿಸಿದಾಗ ಇಂತಹ ಉತ್ಸವಗಳು ಸಾರ್ಥಕವಾಗುತ್ತದೆ ಎಂದು ಶುಭಹಾರೈಸಿದರು.

ಭಜನೆಯೊಂದಿಗೆ ನಡೆಸುತ್ತಿರುವು ಉತ್ತಮ ಬೆಳವಣಿಗೆ : ಡಾ. ಆರ್.ಕೆ.ನಾಯರ್

ಸನ್ಮಾನ ಸ್ವೀಕರಿಸಿದ ಡಾ. ಆರ್.ಕೆ. ನಾಯರ್ ಅವರು ಮಾತನಾಡಿ ಸನಾತನ ಧರ್ಮದಲ್ಲಿ ಹಿಂದೂ ಧರ್ಮ ಶ್ರೇಷ್ಠ ಧರ್ಮ. ಶಾರದಾಂಬ ಉತ್ಸವದಂತಹ ಇಂತಹ ಹಬ್ಬಗಳು ಉತ್ತರ ಭಾರತದಲ್ಲಿ ಕೇವಲ ಮನೋರಂಜನಾ ಹಬ್ಬವಾಗಿದೆ. ಆದರೆ ಇಲ್ಲಿ ಭಜನೆಯಂತಹಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಕಾರ್ಯಕ್ರಮ ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಊರಿನ ಜನರನ್ನು ಒಗ್ಗೂಡಿಸಿ ದಸರಾ ಆಚರಣೆ: ಗುರುಕಿರಣ್

ಸಂಗೀತ ನಿರ್ದೇಶಕ ಗುರುಕಿರಣ್ ಅವರು ಮಾತನಾಡಿ ಊರಿನ ಎಲ್ಲಾ ಜನರು ಒಗ್ಗೂಡಿಸಿ ಕಾರ್ಯಕ್ರಮ ಮಾಡುವುದೇ ಹಬ್ಬ ಎಂದು ಹೇಳಿದರು.

ಧಾರ್ಮಿಕ ನಂಬಿಕೆ – ಸಂಸ್ಕೃತಿ ಸಂಪ್ರದಾಯಕ್ಕೆ ದ‌.ಕ. ಜಿಲ್ಲೆ ಮಾದರಿ : ಎ.ಸಿ. ಜುಬಿನ್ ಮೊಹಪಾತ್ರ
ಪುತ್ತೂರು ಕಮಿಷನರ್ ಜುಬಿನ್ ಮೊಹಪಾತ್ರ ಅವರು ಮಾತನಾಡಿ ನವರಾತ್ರಿಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಭಾರತದಲ್ಲಿ ಮಾತ್ರ ನೋಡಲು ಸಾಧ್ಯ. ಪ್ರಪಂಚದಲ್ಲಿ ಭಾರತವು ಸಂಪ್ರದಾಯಬದ್ಧ ದೇಶ‌. ದೇಶದಲ್ಲಿ ನೋಡಿದಾಗ ಸಂಸ್ಕೃತಿ – ಸಂಪ್ರದಾಯಬದ್ದ ಜಿಲ್ಲೆ ದಕ್ಷಿಣ ಕನ್ನಡವಾಗಿದ್ದು, ಇಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳನ್ನು ನೋಡಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಅವರು ಮಾತನಾಡಿ ಕಳೆದ 52 ವರ್ಷಗಳಿಂದ ಶ್ರೀ ಶಾರದಾಂಬ ಸಮಿತಿ ಹತ್ತು ಹಲವಾರು ಅಧ್ಯಕ್ಷರುಗಳನ್ನು ಕಂಡಿದೆ. ಅತ್ಯಂತ ಕಷ್ಟಕರ ಸನ್ನಿವೇಶದಲ್ಲಿಯೂ ಶಾರದಾಂಬ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಎಂದು ಹೇಳಿದರು.

ವೇದಿಕೆಯಲ್ಲಿ ಶ್ರೀ ಶಾರದಾಂಬ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲ್ ದಾಸ್, ಶ್ರೀ ಶಾರದಾಂಬ ಉತ್ಸವ ಸಮಿತಿ ಅಧ್ಯಕ್ಷ ಡಾ. ಲೀಲಾಧರ್ ಡಿ. ವಿ. ಸಮಿತಿಯ ಗೌರವ ಸಲಹೆಗಾರರಾದ ಅಕ್ಷಯ್ ಕೆ.ಸಿ., ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಅಧ್ಯಕ್ಷ ನವೀನ್ ಚಂದ್ರ ಕೆ.ಎಸ್., ಉತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಂ.ಕೆ. ಸತೀಶ್, ಸುಳ್ಯ ತಾಲೂಕು ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಖಜಾಂಜಿ ಸುನಿಲ್ ಕುಮಾರ್ ಕೇರ್ಪಳ ಉಪಸ್ಥಿತರಿದ್ದರು.
ಶ್ರೀ ಶಾರದಾಂಬ ಸೇವಾ ಸಮಿತಿ ಕೋಶಾಧಿಕಾರಿ ಅಶೋಕ್ ಪ್ರಭು ಅವರು ಸ್ವಾಗತಿಸಿ, ಉತ್ಸವ ಸಮಿತಿ ಕೋಶಾಧಿಕಾರಿ ಗಣೇಶ್ ಆಳ್ವ ವಂದಿಸಿದರು. ನಿವೃತ್ತ ಶಿಕ್ಷಕ ಅಚ್ಚುತ ಅಟ್ಲೂರು ಹಾಗೂ ಸುಶ್ಮಿತ ಕಡಪಾಲ ಅವರು ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದ ಬಳಿಕ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಉಪಸ್ಥಿತಿಯಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕ ಸರಿಗಮಪ ಸೀಸನ್ 20 ವಿಜೇತ ದರ್ಶನ್ ನಾರಾಯಣ್ ನೇತೃತ್ವದಲ್ಲಿ ಸ್ಟಾರ್ ಸಿಂಗರ್ ಜಸ್ಮರಣ್ ಸಿಂಗ್, ಅಮಿಶ್ ಕುಮಾರ್, ಶಿವಾನಿ ನವೀನ್, ಐಶ್ವರ್ಯ ರಂಗರಾಜನ್ ಮತ್ತು ಅರ್ಫಾಜ್ ಉಲ್ಲಾಳ್ ಮೊದಲಾದ ಜನಪ್ರಿಯ ಗಾಯಕರನ್ನೊಳಗೊಂಡ ತಂಡದಿಂದ ‘ಸಂಗೀತ ಸೌರಭ’ ಸಂಗೀತ ರಸಮಂಜರಿ ಜರುಗುತ್ತಿದೆ.