ರಸ್ತೆ ಬದಿ ನಿಲ್ಲಿಸಿರುವ ಚಾಲಕರು
ಸೂಕ್ತ ಸ್ಥಳಕ್ಕೆ ಆರೋಗ್ಯ ಸಚಿವರಿಗೆ ಮನವಿ
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿರುವ 108 ಅಂಬ್ಯುಲೆನ್ಸ್ ವಾಹನವನ್ನು ಆಸ್ಪತ್ರೆಯ ಶೆಡ್ ನಲ್ಲಿ ನಿಲ್ಲಿಸಲು ಆಸ್ಪತ್ರೆಯವರು ತಕರಾರು ಮಾಡುತ್ತಿರುವುದರಿಂದ ಅಂಬ್ಯುಲೆನ್ಸ್ ನಿಲ್ಲಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು 108 ಅಂಬ್ಯುಲೆನ್ಸ್ ಚಾಲಕರು ಮತ್ತು ಸಿಬ್ಬಂದಿ ಆರೋಗ್ಯ ಸಚಿವರಿಗೆ ಮನವಿ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಕಳೆದ 8 ವರ್ಷಗಳಿಂದ ತಾಲೂಕು ಆಸ್ಪತ್ರೆ ಸುಳ್ಯ ಇಲ್ಲಿ 108 ಅಂಬುಲೆನ್ಸ್ ಕಾರ್ಯ ನಿರ್ವಹಿಸುತ್ತಿದ್ದು, ಈ ಆಂಬುಲೆನ್ಸ್ ನಿಲುಗಡೆಗೆ ತಾತ್ಕಾಲಿಕ ಶೆಡ್ ಒಂದನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇತ್ತೀಚೆಗಿನ ಕೆಲಸಮಯದಿಂದ ಅಲ್ಲಿ ಅಂಬುಲೆನ್ಸ್ ನಿಲ್ಲಿಸುವುದಕ್ಕೆ ಆಸ್ಪತ್ರೆಯವರು ಆಕ್ಷೇಪ ವ್ಯಕ್ತಪಡಿಸತೊಡಗಿದ್ದಾರೆ. 108 ಅಂಬುಲೆನ್ಸ್ ನಲ್ಲಿ ಮಹಿಳಾ ಸಿಬ್ಬಂದಿಗಳು ಕೂಡ ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ಸರಿಯಾದ ಶೌಚಾಲಯ ಮತ್ತು ರೂಮಿನ ವ್ಯವಸ್ಥೆ ಇರುವುದಿಲ್ಲ. ಆದುದರಿಂದ, ತಾವು ಈ ಬಗ್ಗೆ ಗಮನಹರಿಸಿ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಸಚಿವರಿಗೆ ಬರೆದಿರುವ ಮನವಿಯಲ್ಲಿ ಅವರು ವಿನಂತಿಸಿಕೊಂಡಿದ್ದಾರೆ.
ಈ ಕುರಿತು ಸುದ್ದಿಯೊಂದಿಗೆ ಮಾತನಾಡಿದ 108 ಸಿಬ್ಬಂದಿ ಹಿಮಕರ ಕಾಡುಪಂಜರವರು, “108 ಅಂಬ್ಯುಲೆನ್ಸ್ ವಾಹನು ಆಸ್ಪತ್ರೆಯ ಎದುರಿನ ಶೆಡ್ ನಲ್ಲಿ ನಿಲ್ಲುತಿತ್ತು. ಆದರೆ ಈಗೀಗ ವೈದ್ಯಾಧಿಕಾರಿಗಳು ಶೆಡ್ ನಿಂದ ವಾಹನ ಹೊರಗೆ ಇಡುವಂತೆ ಹೇಳುತ್ತಿದ್ದಾರೆ. ಅದಕ್ಕಾಗಿ ಈಗ ರಸ್ತೆಯ ಬದಿಯಲ್ಲಿ 108 ವಾಹನ ನಿಲ್ಲಿಸಿದ್ದೇವೆ. ಈ ಕುರಿತು ಸಚಿವರಿಗೆ ಹಾಗು ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ” ಎಂದು ಹೇಳಿದರು.
ಆಸ್ಪತ್ರೆಯ ಅಂಬ್ಯುಲೆನ್ಸ್ ಗೇ ಸ್ಥಳಾವಕಾಶದ ಕೊರತೆಯಾಗಿದೆ : ಡಾ.ಕರುಣಾಕರ
ಈ ಕುರಿತು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕರುಣಾಕರ ಕೆ.ವಿ.ಯವರನ್ನು ಸಂಪರ್ಕಿಸಿ ವಿಚಾರಿಸಿದಾಗ, ” ಆಸ್ಪತ್ರೆಯಲ್ಲಿ 2 ಅಂಬ್ಯುಲೆನ್ಸ್ ಇತ್ತು. ಈಗ ಹೊಸದಾಗಿ ಒಂದು ಬಂದಿದ್ದು ಅದನ್ನು ಶೆಡ್ ನಲ್ಲಿ ನಿಲ್ಲಿಸಬೇಕಿದೆ. ಅದಕ್ಕಾಗಿ 108 ಅಂಬ್ಯುಲೆನ್ಸನ್ನು ಶೆಡ್ ನಿಂದ ಹೊರಗಿಡುವಂತೆ ಹೇಳಿದ್ದೇವೆ. ಶೆಡ್ ನಲ್ಲಿ ಜಾಗ ಇದ್ದರೆ ಇಡಬಹುದು. ಆದರೆ ಈಗ ಶೆಡ್ ನಲ್ಲಿ ಜಾಗ ಇಲ್ಲ. ಅವರು ಆಸ್ಪತ್ರೆಯ ವರಾಂಡದಲ್ಲಿ ಅಂಬ್ಯುಲೆನ್ಸ್ ಇಡಬಹುದು. ಮತ್ತು 108 ಅಂಬ್ಯುಲೆನ್ಸ್ ಖಾಸಗಿ ಸಂಸ್ಥೆ ವಹಿಸಿಕೊಂಡಿರುವುದರಿಂದ ಅದಕ್ಕೆ ಅವರು ವ್ಯವಸ್ಥೆ ಕಲ್ಪಿಸಬೇಕಾಗಿದೆ ” ಎಂದು ಹೇಳಿದರು.