ಸಂಪರ್ಕ ಕಳೆದುಕೊಂಡಿರುವ ಅರಮನೆಗಯದಲ್ಲಿ ಶಾಶ್ವತ ತೂಗು ಸೇತುವೆ ಅಥವಾ ಸೇತುವೆ ನಿರ್ಮಾಣಕ್ಕೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯ
ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಅವರ ಅಧ್ಯಕ್ಷತೆಯಲ್ಲಿ ಅ.29ರಂದು ಗ್ರಾಮ ಪಂಚಾಯತಿ ಸಭಾಭವನದಲ್ಲಿ ನಡೆಯಿತು.
ಮುಖ್ಯವಾಗಿ ಇತ್ತೀಚೆಗೆ ಬಲ್ನಾಡು ಹೊಳೆಗೆ ಅಡ್ಡಲಾಗಿ ಅರಮನೆಗಯ ಬಳಿ ನಿರ್ಮಿಸಿದ್ದ ತೂಗು ಸೇತುವೆ ಬಿದ್ದು ಆ ಭಾಗದ ಸಂಪರ್ಕ ಕಡಿತಗೊಂಡಿರುವುದರಿಂದ ಮತ್ತು ಮತ್ತು ಅವೈಜ್ಞಾನಿಕವಾಗಿ ನಿರ್ಮಿಸಿರುವ ಆ ತೂಗು ಸೇತುವೆಯನ್ನು ದುರಸ್ತಿ ಮಾಡಲು ಸಾಧ್ಯವಿಲ್ಲವೆಂದು ಲೋಕೋಪಯೋಗಿ ಇಲಾಖೆಯವರು ವರದಿ ನೀಡಿರುವುದರಿಂದ ಅಲ್ಲಿಗೆ ಶಾಶ್ವತ ತೂಗುಸೇತುವೆ ಅಥವಾ ಸೇತುವೆ ನಿರ್ಮಾಣಕ್ಕೆ ಸರಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆ ಚರ್ಚಿಸಲಾಯಿತು.
ಗ್ರಾಮ ಪಂಚಾಯತ್ ಅನುದಾನದಲ್ಲಿ ತೂಗುಸೇತುವೆ , ಸೇತುವೆ ಮರು ನಿರ್ಮಾಣ ಮಾಡಲು ಸಾಧ್ಯವಿಲ್ಲದುದರಿಂದ ಸರಕಾರಕ್ಕೆ ಕೂಡಲೆ ಅಲ್ಲಿ ಹೊಸ ತೂಗುಸೇತುವೆ ಅಥವಾ ಸೇತುವೆ ನಿರ್ಮಾಣಕ್ಕೆ ಪಕ್ಷಭೇದ ಆಗ್ರಹಿಸುವುದಾಗಿ ನಿರ್ಣಯ ಕೈಗೊಳ್ಳಲಾಯಿತು.
ಅರಂತೋಡು ಕಾಮಧೇನು ಹೋಟೆಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ನಿರಂತರ ರಸ್ತೆ ಅಪಘಾತಗಳು ಸಂಭವಿಸುತಿರುವುದರಿಂದ ಹೆದ್ದಾರಿಯ ತಾಂತ್ರಿಕ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಅಭಿವೃದ್ಧಿಯ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲು ಸಭೆ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಶ್ರೀಮತಿ ಭವಾನಿ ಚಿಟ್ಟಾನೂರ್, ಸದಸ್ಯರಾದ ಶಿವಾನಂದ ಕುಕ್ಕುಂಬಳ, ವೆಂಕಟರಮಣ ಪೆತ್ತಾಜೆ ರವೀಂದ್ರ ಪಂಜಿಕೋಡಿ, ಶಶಿಧರ ದೊಡ್ಡ ಕುಮೇರಿ, ಶ್ರೀಮತಿ ಸುಜಯ ಲೋಹಿತ್, ಶ್ರೀಮತಿ ವಿನೋದ ಚಂದ್ರಶೇಖರ ತೊಡಿಕಾನ, ಶ್ರೀಮತಿ ಹರಿಣಿ ದೇರಾಜೆ, ಶ್ರೀಮತಿ ಸರಸ್ವತಿ ಬಿಳಿಯಾರು, ಶ್ರೀಮತಿ ಮಾಲಿನಿ ವಿನೋದ್, ಕುಮಾರಿ ಶ್ವೇತಾ ಅರಮನೆಗಯ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ. ಅರ್. ಅವರು ಸ್ವಾಗತಿಸಿ ಸರಕಾರದ ಸುತ್ತೋಲೆಗಳನ್ನು ಮಂಡಿಸಿದರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಕರಿಸಿದರು.