ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗೋ ಪೂಜೆ, ಗಜಲಕ್ಷ್ಮಿ ಯಶಸ್ವಿಗೆ ಪೂಜೆ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವಳದ ಗಜರಾಣಿ ಯಶಸ್ವಿಗೆ ನ.2 ರ ಬಲಿಪಾಡ್ಯಮಿ ಪ್ರಯುಕ್ತ ಜಯಲಕ್ಷ್ಮಿ ಪೂಜೆ ನಡೆಯಿತು.

ಕ್ಷೇತ್ರ ಪುರೋಹಿತ ವೇದಮೂರ್ತಿ ಮಧುಸೂದನ ಕಲ್ಲೂರಾಯ ಯಶಸ್ವಿಗೆ ವಿವಿಧ ವೈಧಿಕ ವಿದಿವಿಧಾನಗಳೊಂದಿಗೆ ಪೂಜೆ ನೆರವೇರಿಸಿದರು. ಅಲ್ಲದೆ ಆನೆಗೆ ಹಣ್ಣುಹಂಪಲು ತೆಂಗಿನಕಾಯಿ,ಅವಲಕ್ಕಿ, ಹೊದ್ಲು, ಬೆಲ್ಲ,ಹಣ್ಣು ಹಂಪಲು, ತೆಂಗಿನ ಕಾಯಿ ಇತ್ಯಾದಿ ತಿನಿಸುಗಳನ್ನು ನೀಡಿದರು.ನಂತರ ಗಜಲಕ್ಷ್ಮಿ ಗೆ ಮಂಗಳಾರತಿ ಬೆಳಗಿದರು. ಶ್ರೀ ದೇವಳದಲ್ಲಿ ವರ್ಷದಲ್ಲಿ ಎರಡು ಭಾರಿ ನವರಾತ್ರಿ ಮತ್ತು ದೀಪಾವಳಿಗೆ ಗಜಲಕ್ಷ್ಮಿ ಪೂಜೆ ನೆರವೇರುತ್ತದೆ.

ಗೋ ಪೂಜೆ

ಆರಂಭದಲ್ಲಿ ದೇವಳದ ಗೋಶಾಲೆಯಲ್ಲಿದ್ದ ಗೋವುಗಳನ್ನು ಸ್ನಾನ ಮಾಡಿಸಿ ಅವುಗಳನ್ನು ಶ್ರೀ ದೇವಳಕ್ಕೆ ಕರೆತರಲಾಯಿತು. ಶ್ರೀ ದೇವಳದ ಮುಂಭಾಗ ಕ್ಷೇತ್ರ ಪುರೋಹಿತ ಮದುಸೂಧನ ಕಲ್ಲೂರಾಯರು ಗೋಮಾತೆಗೆ ಅಕ್ಕಿ,ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು, ಗೋಗ್ರಾಸ ನೀಡಿದರು. ಬಳಿಕ ವಿವಿಧ ವೈದಿಕ ವಿದಿ ವಿಧಾನ ನೆರವೇರಿಸಿ ಗೋಮಾತೆಗೆ ಪೂಜೆ ಮಾಡಿದರು.
ನಂತರ ದೇವಳದ ಅವಳಿ ಗೋಶಾಲೆಗಳಲ್ಲಿ ಗೋಪೂಜೆ ನೆರವೇರಿತು.ಆರಂಭದಲ್ಲಿ ಷಣ್ಮುಖ ಪ್ರಸಾದ ಬೋಜನ ಶಾಲೆಯ ಪಕ್ಕದ ಗೋಶಾಲೆಯಲ್ಲಿ ನಂತರ ಆದಿಸುಬ್ರಹ್ಮಣ್ಯ ದೇವಳಕ್ಕೆ ತೆರಳುವ ರಸ್ತೆಯ ಪಕ್ಕದಲ್ಲಿನ ಗೋಶಾಲೆಯಲ್ಲಿನ ಗೋವುಗಳಿಗೆ ಪೂಜೆ ನೆರವೇರಿತು. ಆರಂಭದಲ್ಲಿ ಗೋವುಗಳಿಗೆ ಅಕ್ಕಿ,ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು, ಗೋಗ್ರಾಸ ನೀಡಿದರು.ಬಳಿಕ ಗೋಮಾತೆಗೆ ಪೂಜೆ ಸಮರ್ಪಿಸಿದರು. ಬಳಿಕ ಸರ್ವರೂ ಗೋವುಗಳಿಗೆ ಹಣ್ಣುಹಂಪಲು ನೀಡಿದರು.

ಈ ಸಂದರ್ಭ ಶ್ರೀ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಎಕೌಂಟೆಂಟ್ ರಾಜಲಕ್ಷ್ಮಿ.ಪಿ.ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ದೇವಳದ ಪಾಟಾಳಿ ಲೋಕೇಶ್ ಎ.ಆರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ಪಶುವೈದ್ಯಾಧಿಕಾರಿ ಡಾ.ವೆಂಕಟಾಚಲಪತಿ, ದೇವಳದ ಸಿಬ್ಬಂದಿಗಳು ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.