ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹೊರಾಂಗಣ ಪ್ರವೇಶಿಸಿದ ಶ್ರೀ ದೇವರು

0

ದೇವಳದಲ್ಲಿ ಹೊರಾಂಗಣ ಉತ್ಸವಾದಿಗಳು ಆರಂಭ

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.2 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರು ಹೊರಾಂಗಣ ಪ್ರವೇಶಿಸಿದರು.

ಬಳಿಕ ದೀಪಾವಳಿ ಪ್ರಯುಕ್ತ ಶ್ರೀ ದೇವರ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿತು. ಶ್ರೀ ದೇವಳದ ಅರ್ಚಕ ಸತ್ಯನಾರಾಯಣ ನೂರಿತ್ತಾಯರು ಉತ್ಸವದ ವಿದಿವಿಧಾನಗಳನ್ನು ನೆರವೇರಿಸಿದರು. ಈ ಮೂಲಕ ಶ್ರೀ ಕ್ಷೇತ್ರದಲ್ಲಿ ಶ್ರೀ ದೇವರ ಹೊರಾಂಗಣ ವರ್ಷಾವಧಿ ಉತ್ಸವಗಳು ಆರಂಭವಾಯಿತು. ಈ ಮೊದಲು ದೇವಳದಲ್ಲಿ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಲಕ್ಷ್ಮೀ ಪೂಜೆ ನೆರವೇರಿತು.

ಶ್ರೀ ದೇವರ ಮಹಾಪೂಜೆಯ ಬಳಿಕ ಶ್ರೀ ದೇವರು ಹೊರಾಂಗಣ ಪ್ರವೇಶಿಸಿದರು. ನಂತರ ಆನೆ, ಬಿರುದಾವಳಿ, ಮಂಗಳವಾದ್ಯಗಳ ನಿನಾದದೊಂದಿಗೆ ಶ್ರೀ ದೇವರ ಉತ್ಸವಾಧಿಗಳು ನೆರವೇರಿತು. ಆರಂಭದಲ್ಲಿ ದೀಪಾರಾಧನೆಯುಕ್ತ ಶ್ರೀ ದೇವರ ಬಂಡಿ ರಥೋತ್ಸವ ನೆರವೇರಿತು.ನಂತರ ಭಜನೆ ಸುತ್ತು, ನಾಗಸ್ವರ, ಬ್ಯಾಂಡ್, ವಾದ್ಯಗಳನ್ನು ಒಳಗೊಂಡ ದೀಪಾರಾಧನೆಯುಕ್ತ ಪಾಲಕಿ ಉತ್ಸವ ಸಂಪನ್ನವಾಯಿತು.

ಸಹಸ್ರಾರು ಭಕ್ತಾಧಿಗಳು ಶ್ರೀ ದೇವರ ಉತ್ಸವವನ್ನು ವೀಕ್ಷಿಸಿದರು.
ಈ ಸಂದರ್ಭ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಶ್ರೀ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಎಕೌಂಟೆಂಟ್ ರಾಜಲಕ್ಷ್ಮಿ.ಪಿ.ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಶ್ರೀ ದೇವಳದ ಪಾಟಾಳಿ ಲೋಕೇಶ್ ಎ.ಆರ್ ಸೇರಿದಂತೆ ದೇವಳದ ಸಿಬ್ಬಂದಿಗಳು ಮತ್ತು ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.