ರಚನಾ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಯುವಜನ ಸಂಯುಕ್ತ ಮಂಡಳಿಯಲ್ಲಿ ವ್ಯವಸ್ಥೆ

0

ನ.8 ರಂದು ಉಬರಡ್ಕ ಸೂಂತೋಡು ಬಳಿ ಸ್ಕೂಟಿ ಹಾಗೂ ಕೆಎಸ್ ಆರ್ ಟಿ ಸಿ ಬಸ್ ನಡುವೆ ಅಪಘಾತ ಸಂಭವಿಸಿ ಮೃತಪಟ್ಟಿದ್ದ ವಿದ್ಯಾರ್ಥಿನಿ ರಚನಾಳ ಮೃತದೇಹದ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಂದು ಬೆಳಿಗ್ಗೆ ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ವೇದಿಕೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಿಗ್ಗೆ ಸುಮಾರು 10.30 ಗಂಟೆಗೆ ಕೆವಿಜಿ ಆಸ್ಪತ್ರೆಯಿಂದ ಅಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ಯುವಜನ ಸಂಯುಕ್ತ ಮಂಡಳಿಗೆ ತರಲಾಯಿತು.


ಈ ಸಂದರ್ಭ ಸ್ಥಳೀಯ ನೂರಾರು ಮಂದಿ ಸಾರ್ವಜನಿಕರು , ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳು,ಹಾಗೂ ರಚನಾ ವಿದ್ಯಾಭ್ಯಾಸ ಮಾಡುತ್ತಿದ್ದ ಪುತ್ತೂರಿನ ವಿವೇಕಾನಂದ ಕಾಲೇಜಿನ ಸಹಪಾಠಿಗಳು ಹಾಗೂ ಉಪನ್ಯಾಸಕರುಗಳು ಅಂತಿಮ ದರ್ಶನವನ್ನು ಪಡೆದುಕೊಂಡರು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ, ಮುಖಂಡರುಗಳಾದ ಹರೀಶ್ ಕಂಜಿಪಿಲಿ, ಎಂ.ವೆಂಕಪ್ಪ ಗೌಡ, ಕೆ.ಎಂ.ಮುಸ್ತಾಫ ಜನತಾ, ಪಿಎಸ್ ಗಂಗಾಧರ್ , ರಾಧಾಕೃಷ್ಣ ಬೈತ್ತಡ್ಕ, ನಂದರಾಜ್ ಸಂಕೇಶ್, ಹಾಗೂ ಇನ್ನೂ ಅನೇಕರು ಮುಖಂಡರುಗಳು ಅಂತಿಮ ದರ್ಶನದಲ್ಲಿ ಭಾಗವಹಿಸಿದರು.


ಅಂತಿಮ ದರ್ಶನವನ್ನು ಪಡೆಯುಕೊಳ್ಳುತ್ತಿದ್ದ ವೇಳೆ ರಚನಾಳ ಉಪನ್ಯಾಸಕರುಗಳು ಹಾಗೂ ಸಹಪಾಠಿಗಳು ಕಣ್ಣಿರಿಟ್ಟ ದೃಶ್ಯ ಅಂತಿಮ ದರ್ಶನಕ್ಕೆ ಬಂದ ನೂರಾರು ಮಂದಿಯ ಕಣ್ಣಿನಿಂದ ನೀರು ತರಿಸಿತು. ಸುಳ್ಯ ಜೂನಿಯರ್ ಕಾಲೇಜಿನ ಎಲ್ಲಾ ಶಿಕ್ಷಕ ವೃಂದದವರು, ಎಸ್ ಡಿ ಎಂಸಿ ಸಮನ್ವಯ ವೇದಿಕೆಯ ರಾಜ್ಯ ಮತ್ತು ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಶಿಕ್ಷಣ ಸಂಪನ್ಮೂಲ ಕೇಂದ್ರದ ಪದಾಧಿಕಾರಿಗಳು, ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದರು. ಸುಮಾರು 1 ಗಂಟೆಗಳ ಕಾಲ ಅಂತಿಮ ದರ್ಶನಕ್ಕೆ ಅವಕಾಶದ ಬಳಿಕ ಉಬರಡ್ಕದ ಕಾಡುತೋಟ ಮೃತರ ಮನೆಗೆ ಮೃತದೇಹವನ್ನು ಕೊಂಡ್ಯೊಯಲಾಯಿತು.


ರಚನಾ ಶಿಕ್ಷಣ ಪಡೆಯುತ್ತಿದ್ದ ಪುತ್ತೂರು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಉಪನ್ಯಾಸಕರು, ಸಹಪಾಠಿಗಳು ಕೂಡ ಆಗಮಿಸಿ ಅಂತಿಮ ದರ್ಶನ ಪಡೆದರು. ಉಬರಡ್ಕ ಮಿತ್ತೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ ಸಹಿತ ಊರಿನ ಗಣ್ಯರು ನೇತೃತ್ವ ವಹಿಸಿದ್ದರು.