ಸಂವಿಧಾನದಡಿಯಲ್ಲಿ ಸ್ವಾಭಿಮಾನದ ಬದುಕು ಕಟ್ಟಲು ಸರಕಾರ ಬದ್ಧ, ಕರಾವಳಿ ಮರಾಟಿ ಸಮುದಾಯದ 17 ಬೇಡಿಕೆಗಳಿಗೆ ಸಂವಿಧಾನಡಿಯಲ್ಲಿ ಕ್ರಮ ; ಸಚಿವ ಮಹಾದೇವಪ್ಪ
ಕರಾವಳಿಯ ಮರಾಟಿ ಸಮುದಾಯದ ನ್ಯಾಯಯುತ ಬೇಡಿಕೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಿ, ಮುಖ್ಯಮಂತ್ರಿಯವರ ಗಮನಕ್ಕೆ ತಂದು ಈಡೇರಿಸುವ ಪ್ರಯತ್ನ ಮಾಡುತ್ತೇನೆ. ಸಂವಿದಾನದ ಆಶಯದಂತೆ ಆರ್ಥಿಕ ನ್ಯಾಯ, ಸಾಮಾಜಿಕ ನ್ಯಾಯ ಹಿಂದುಳಿದ ವರ್ಗಗಳಿಗೂ ಸಿಗಬೇಕು. ಅಸಮಾನತೆಯ ನಿರ್ಮೂಲನೆಯಾಗಿ ಸಮಾನತೆ ಸಿಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ಹೇಳಿದರು. ಅವರು ನ. 10ರಂದು ಮೂಡುಬಿದಿರೆ ವಿದ್ಯಾಗಿರಿ ಆಳ್ವಾಸ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆದ ‘ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶ 2024 ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ಆಶಯವನ್ನು ಈಡೇರಿಸುವಲ್ಲಿ ಚುನಾಯಿತ ಪ್ರತಿನಿಧಿಗಳು ರಾಜಕೀಯ ಬಿಟ್ಟು ಕೆಲಸ ಮಾಡಬೇಕು. ಶಿಕ್ಷಣದ ಮೂಲಕ ಆರ್ಥಿಕ ಸದೃಢತೆ ಸಾಧ್ಯ. ರಾಜಕೀಯ ಉದ್ದೇಶ ಇಲ್ಲದೆ ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರದ ಗ್ಯಾರಂಟಿ ಯೋಜನೆ ವರದಾನವಾಗಿದೆ ಎಂದರು. ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮರಾಟಿ ಸಮುದಾಯದವರು ಸುವರ್ಣಾಕ್ಷರದಲ್ಲಿ ಬರೆದಿಡುವ ಕಾರ್ಯ ಇವತ್ತು ನಡೆದಿದೆ. ಸಮಾವೇಶ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಸಮುದಾಯದ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಉದ್ಯಮಿ ಶಶಿಧರ ಶೆಟ್ಟಿ ಬರೋಡ ಮುಖ್ಯ ಅತಿಥಿಗಳಾಗಿ ಭಾಗವಹಿದ್ದರು. ‘ಗದ್ದಿಗೆ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ ಮಹಾರಾಷ್ಟ್ರದಿಂದ ವಲಸೆ ಬಂದಿರುವ ಮರಾಟಿಗರು ಕರ್ನಾಟಕದಲ್ಲಿ ಶೇ.6.9 ರಷ್ಟಿದ್ದಾರೆ. ಸ್ವಾಭಿಮಾನಿಗಳಾಗಿ, ಕೃಷಿ ಚಟುವಟಿಕೆಗಳ ಮೂಲಕ ಶ್ರಮ ಜೀವಿಗಳಾಗಿರುವ ಮರಾಟಿಗರು ಇಂದು ಗದ್ದಿಗೆ ಸಮಾವೇಶದ ಮೂಲಕ ಒಂದಾಗಿದ್ದೀರಿ. ಈ ಸಮಾವೇಶ ಸಮಾಜದಲ್ಲಿ ಕ್ರಿಯಾಶೀಲರಾಗಲು ಪ್ರೇರಣೆಯಾಗಲಿ ಎಂದರು.
ಜಮ್ಮು ಮತ್ತು ಕಾಶ್ಮೀರ ಸರಕಾರದ ಪ್ರಧಾನ ಕಾರ್ಯದರ್ಶಿ, ಸಮಾವೇಶದ ಅಧ್ಯಕ್ಷ ಎಚ್. ರಾಜೇಶ್ ಪ್ರಸಾದ್ ಐಎಎಸ್ ಅಧ್ಯತೆ ವಹಿಸಿ ಮಾತನಾಡುತ್ತಾ ದೇಶ ಸ್ವಾತಂತ್ರ್ಯ ಪಡೆದು ಏಳು ದಶಕವಾದರೂ ಮರಾಟಿ ಸಮಾಜ ಹಿಂದುಳಿದಿದೆ. ನಮ್ಮ ಸನುದಾಯ ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ, ಉನ್ನತ ಸ್ಥಾನಕ್ಕೆ ಏರಬೇಕಾದರೆ ಶಿಕ್ಷಣ ಮುಖ್ಯವಾಗಿ ನೀಡಬೇಕು. ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕೌಶಲ್ಯ ತರಬೇತಿಯನ್ನು ನೀಡಬೇಕು. ಉನ್ನತ ಸ್ಥಾನದಲ್ಲಿರುವ, ಉದ್ಯೋಗದಲ್ಲಿರುವ ಸಮಾಜ ಬಾಂಧವರು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಮುಂದೆ ತರುವಲ್ಲಿ ಶ್ರಮವಹಿಸಬೇಕು ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕೇಂದ್ರ ಸರ್ಕಾರದ ನಿವೃತ್ತ ಕೃಷಿ ನಿರ್ದೇಶಕ ಡಾ. ಬಿ.ಜಿ.ನಾಯ್ಕ, ಕರ್ನಾಟಕ ಮರಾಟಿ ಸಂಘದ ಅಧ್ಯಕ್ಷೆ ಶೋಭಾವತಿ ಎಂ.ಟಿ., ದಕ್ಷಿಣ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ವಿಶ್ವನಾಥ ನಾಯ್ಕ, ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ, ಸಮ್ಮೇಳನದ ಸಂಚಾಲಕ ಡಾ. ಬಾಲಕೃಷ್ಣ ಸಿ.ಎಚ್., ಕೂಡ್ಲಿ ಮರಾಟಿ ಸಂಘದ ರಾಮಚಂದ್ರ ನಾಯ್ಕ್, ಕೆ.ವಿ. ಚಂದ್ರಶೇಖರ ನಾಯ್ಕ್, ಎಸ್. ಎಸ್. ಪರಮೇಶ್ವರ, ಎ.ಕೆ. ನಾಯ್ಕ್ ಚೊಕ್ಕಾಡಿ, ಪ್ರಕಾಶ್ ನಾಯ್ಕ, ಶಂಕರ ನಾಯ್ಕ, ನರಸಿಂಹ ನಾಯ್ಕ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮ್ಮೇಳನದ ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ ಸರಕಾರಕ್ಕೆ ನೀಡಿದ ಮನವಿ ವಾಚಿಸಿದರು. ಸಮಾವೇಶದ ಗೌರವಾಧ್ಯಕ್ಷ ಡಾ. ಕೆ. ಸುಂದರ ನಾಯ್ಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಂಕರ ನಾಯ್ಕ ವಂದಿಸಿದರು. ಸಹ ಸಂಚಾಲಕ ಪ್ರಕಾಶ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಸ್ಮರಣ ಸಂಚಿಕೆ ಸಂಪಾದಕರಾದ ದುಗ್ಗಪ್ಪ ನಾಯ್ಕ್ ಸ್ಮರಣ ಸಂಚಿಕೆಯ ಬಗ್ಗೆ ಮಾತನಾಡಿದರು. ಶ್ರೀಮತಿ ಶಾಲಿನಿ ಮತ್ತು ಸುಧಾಕರ್ ಸನ್ಮಾನಪತ್ರ ವಾಚಿಸಿದರು. ಪದ್ಮರಾಜ್ ಮತ್ತು ತಂಡದವರು ಪ್ರಾರ್ಥಿಸಿದರು. ಬಳಿಕ ನಡೆದ ವಿಚಾರಗೋಷ್ಠಿಯಲ್ಲಿ ಶಿಕ್ಷಣ ಮತ್ತು ಯುವಜನತೆ ವಿಚಾರವಾಗಿ ಉಪನ್ಯಾಸ ನೀಡಿದ ಮತ್ತು ಕಾರ್ಯಕ್ರಮದ ಆಯೋಜನೆಗೆ ಮಾರ್ಗದರ್ಶಕರಾಗಿ ಸ್ಥಳಾವಕಾಶ ಮತ್ತು ಪೂರ್ಣ ಸಹಕಾರ ನೀಡಿದ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವರನ್ನು ಸಮಾವೇಶದಲ್ಲಿ ಸನ್ಮಾನಿಸಲಾಯಿತು. ಸಂಜೆ ತನಕ ವಿವಿಧ ಗೋಷ್ಠಿಗಳು, ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ.