ಅರಂತೋಡು-ಎಲಿಮಲೆ ರಸ್ತೆ ಅಭಿವೃದ್ಧಿಗಾಗಿ ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಕೆ

0

ನಮಗೆ ಕೊಟ್ಟ ಭರವಸೆ ಈಡೇರಿಸಿ : ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಒತ್ತಾಯ

ಅರಂತೋಡು- ಎಲಿಮಲೆ ಲೋಕೋಪಯೋಗಿ ರಸ್ತೆಯ ಆಯ್ಕೆ ಭಾಗವನ್ನು ಅಭಿವೃದ್ಧಿ ಪಡಿಸಬೇಕೆಂದು ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆಯವರು ಸುಳ್ಯ ಶಾಸಕರಿಗೆ, ತಹಶೀಲ್ದಾರ್ ರಿಗೆ, ಲೋಕೋಪಯೋಗಿ ಇಲಾಖೆಯವರಿಗೆ ಮನವಿ ಸಲ್ಲಿಸಿದ್ದಾರಲ್ಲದೆ, ನಮಗೆ ಈ ಹಿಂದೆ ಕೊಟ್ಟ ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ಮೈಸೂರು, ಕೊಡಗು ಜಿಲ್ಲಾ ಯಾತ್ರಿಕರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಸಂಪರ್ಕಿಸಲು ಅತೀ ಹತ್ತಿರದ ರಸ್ತೆ ಅರಂತೋಡು-ಎಲಿಮಲೆ ಜಿಲ್ಲಾ ಮುಖ್ಯ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ಯಾತ್ರಿಕರ ವಾಹನಗಳು, ಸ್ಥಳೀಯ ವಾಹನಗಳು,ಸರ್ಕಾರಿ ಬಸ್ಸುಗಳು,ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚಾರ ಮಾಡುತ್ತಿದ್ದಾರೆ. ಅತೀ ಇಕ್ಕಟ್ಟಾದ ಈ ರಸ್ತೆ ಅಭಿವೃದ್ಧಿ ಮಾಡಬೇಕೆಂದು ಹಲವಾರು ವರ್ಷಗಳಿಂದ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲದ ಪರಿಣಾಮವಾಗಿ, ಬೇಸತ್ತ ಈ ಭಾಗದ ಜನತೆ,ಕಳೆದ ವಿಧಾನ ಸಭಾ ಚುನಾವಣೆಯ ಪೂರ್ವದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ, ಇದರ ಮುಂದಾಳತ್ವದಲ್ಲಿ ಊರ ನಾಗರಿಕರು ಚುನಾವಣೆ ಬಹಿಷ್ಕರಿಸಿ ಪಟ್ಟುಬಿಡದ ಹೋರಾಟದ ಫಲವಾಗಿ ಅರಂತೋಡಿನಿಂದ ಪಿಂಡಿಮನೆವರೆಗೆ 3 ಕೀ. ಮೀ. ರಸ್ತೆ ಅಭಿವೃದ್ಧಿ ಹೊಂದಿದೆ. ಊರ ನಾಗರಿಕರ ಬೇಡಿಕೆ ಕನಿಷ್ಠ ಅಡ್ತಲೆ ವರೆಗೆ ರಸ್ತೆ ಅಭಿವೃದ್ಧಿ ಪಡಿಸಬೇಕು ಎಂದಾಗಿತ್ತು. ಆ ಪ್ರಕಾರ ಇನ್ನೂ ಒಂದು ಕೀ. ಮೀ. ರಸ್ತೆ ಅಭಿವೃದ್ಧಿಗೆ ಬಾಕಿ ಇರುತ್ತದೆ. ಆ ಸಂದರ್ಭದಲ್ಲಿ ಜನಪ್ರತಿನಿಧಿಗಳ ಭರವಸೆಯಂತೆ ಚುನಾವಣಾ ಬಹಿಷ್ಕಾರವನ್ನು ಹಿಂತೆಗೆದುಕೊಂಡು ಊರಿನ ಸರ್ವ ನಾಗರಿಕರು ಚುನಾವಣೆಗೆ ಸರ್ವ ರೀತಿಯ ಸಹಕಾರ ನೀಡಿರುತ್ತಾರೆ.


ಆ ಬಳಿಕ ಉಳಿಕೆ ಒಂದು ಕೀ. ಮೀ. ರಸ್ತೆಯನ್ನು ಶೀಘ್ರದಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಹಕ್ಕೋತ್ತಾಯ ಮಾಡುವ ಮನವಿಯನ್ನು ಮಾಡಲಾಗಿತ್ತು.
ಆದರೆ ಇದೀಗ ಸುಮಾರು ಎರಡು ವರ್ಷಗಳೇ ಕಳೆದರೂ ರಸ್ತೆ ಅಭಿವೃದ್ಧಿಪಡಿಸುವ ಯಾವುದೇ ಸೂಚನೆಗಳೂ ಇದುವರೆಗೂ ಕಂಡುಬಂದಿಲ್ಲ.
ಭ್ರಮನಿರಸನಗೊಂಡಿರುವ ಈ ಭಾಗದ ಜನತೆ ಮತ್ತೆ ಹೋರಾಟದ ಹಾದಿ ಹಿಡಿಯುವುದು ಈಗ ಅನಿವಾರ್ಯವಾಗಿದೆ. ಅರಂತೋಡು-ಎಲಿಮಲೆ ಲೋಕೋಪಯೋಗಿ ರಸ್ತೆಯ ಆಯ್ದ ಭಾಗ ಪಿಂಡಿಮನೆಯಿಂದ ಅಡ್ತಲೆ ವರೆಗಿನ ಒಂದು ಕೀ. ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಲು, ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಮಾಡುತ್ತಿದ್ದೇವೆ. ಒಂದು ವೇಳೆ ರಸ್ತೆ ಅಭಿವೃದ್ಧಿ ಪಡಿಸುವರೇ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ, ಈ ಹಿಂದಿನ ನಿರ್ಣಯದಂತೆ ಮುಂದುವರೆಯುವುದು ಎಂದು ತೀರ್ಮಾನಿಸಲಾಗಿದೆ. ಇದರಿಂದ ಮುಂಬರುವ ಸಹಕಾರ ಸಂಘಗಳ ಚುನಾವಣೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇರುತ್ತದೆ ಎಂದು ತಮ್ಮ ಗಮನಕ್ಕೆ ತರುತಿದ್ದೇವೆ ಎಂದು‌ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮನವಿ ಸಲ್ಲಿಕೆ ಸಂದರ್ಭ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ, ಭವಾನಿಶಂಕರ ಅಡ್ತಲೆ, ರಂಜಿತ್ ಅಡ್ತಲೆ , ಕೇಶವ ಮೇಲಡ್ತಲೆ ಮೋಹನ್ ಪಂಜದ ಬೈಲ್ ಇದ್ದರು.