ಸುಳ್ಯದಲ್ಲಿ ಪ್ರಜಾಧ್ವನಿ ಕರ್ನಾಟಕ ಅಸ್ತಿತ್ವಕ್ಕೆ

0

ರಾಷ್ಟ್ರೀಯತೆ, ಭಾವೈಕ್ಯತೆ, ಸಹಬಾಳ್ವೆಯಿಂದ ಪ್ರಜಾಧ್ವನಿ ಸಮಾಜದಲ್ಲಿ ಕೊಂಡಿಯಾಗಲಿದೆ: ಮುಖಂಡರಿಂದ ಹೇಳಿಕೆ

ರಾಷ್ಟ್ರೀಯತೆ,ಭಾವೈಕ್ಯತೆ, ಸಹ ಬಾಳ್ವೆ ಇವುಗಳ ಮಧ್ಯೆ ನಾಗರಿಕ ಸಮಾಜದ ನಡುವೆ ಕೊಂಡಿಯಾಗಲು ಪ್ರಜಾಧ್ವನಿ ಕರ್ನಾಟಕ ಎಂಬ ಸಂಘಟನೆಯೊಂದು ಜನ್ಮ ತಾಳಿದೆ. ಈ ಮೂಲಕ ಸಮಾಜಕ್ಕೆ ನಾವು ತಿಳಿಸುತ್ತಿದ್ದೇವೆ ಎಂದು ನ. ೧೫ ರಂದು ಸುಳ್ಯದಲ್ಲಿ ಪ್ರಜಾಧ್ವನಿ ಕರ್ನಾಟಕ ಇದರ ಸಂಘಟಕರು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಂಚಾಲಕ ಗೋಪಾಲ ಪೆರಾಜೆಯವರು ಮಾತನಾಡಿ ‘ಸಂವಿಧಾನ ಪೀಠಿಕೆಯಲ್ಲಿನ ಅಂಶಗಳು ಮತ್ತು ದೇಶದ ಅಸ್ಥಿತೆಗಳ ಸಂರಕ್ಷಣೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆಗಳ ಬಗ್ಗೆ ಹೊಸ ಪೀಳಿಗೆಯಲ್ಲಿ ರಾಷ್ಟ್ರ ಪ್ರೇಮ ಹುಟ್ಟುವಂತೆ ಮಾಡಿ ಭಾರತೀಯರು ಎನ್ನುವ ಒಗ್ಗಟ್ಟು ಸೃಷ್ಟಿಸುವ ಕಾರ್ಯಚಟುವಟಿಕೆಗಳು, ಪ್ರಜಾಧ್ವನಿ ಸಂಘಟನೆಯ ಮೂಲ ಉದ್ದೇಶವಾಗಲಿದೆ.

ಇತ್ತೀಚಿನ ದಿನಗಳಲ್ಲಿ ಭಾರತೀಯ ಸಮಾಜದ ಮಧ್ಯೆ ಹುಟ್ಟಿಕೊಂಡಿರುವ ವೈ ಮನಸ್ಸು ಅಪನಂಬಿಕೆ ಮತ್ತು ಇದರಿಂದ ಸೃಷ್ಟಿಯಾಗಿರುವ ಸಾಮಾಜಿಕ ಮೌಲ್ಯಗಳ ಕುಸಿತ. ಇವು ರಾಷ್ಟ್ರದ ಏಕತೆಯ ಮೇಲೆ ಕಪ್ಪು ಛಾಯೆಯನ್ನು ಮೂಡಿಸಿದೆ. ಈ ಕರಿಛಾಯೆಯಿಂದ ಹೊರಬರುವ ಕಾರ್ಯಕ್ರಮಗಳನ್ನು ರೂಪಿಸುವುದು ಸಂಘಟನೆಯ ಉದ್ದೇಶವಾಗಿದೆ ಎಂದರು.

ರಾಷ್ಟ್ರೀಯ ಭಾವೈಕ್ಯತೆಯನ್ನು ಬಯಸುವ ಭಾರತೀಯ ಸಮಾಜವನ್ನು ಪ್ರಸ್ತುತ ಪರಿಸ್ಥಿತಿಯು ಆತಂಕಕ್ಕೆ ದೂಡಿದೆ. ಈ ಪರಿಸ್ಥಿತಿಯು ಮುಂದಿನ ಪೀಳಿಗೆಯ ಮೇಲೆ ಬೀರಬಹುದಾದ ದುಷ್ಪರಿಣಾಮ ಮತ್ತು ಅವರ ಬಾಳಿಗೆ ಕಂಟಕವಾಗಬಹುದು ಎನ್ನುವ ಕಾರಣಕ್ಕೆ ಈ ಸಮಾಜವನ್ನು ಈ ಸ್ಥಿತಿಯಿಂದ ಹೊರತರುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಸುಳ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ಸಮಿತಿಯ ಸದಸ್ಯರಾದ ಅಶೋಕ್ ಎಡಮಲೆ ಮಾತನಾಡಿ, ‘ಬ್ರಿಟಿಷರ ಕಾಲದಲ್ಲಿ ನಮ್ಮ ಸ್ವಾತಂತ್ರ್ಯ ಮತ್ತು ಭಾವೈಕ್ಯತಾ ಬದುಕಿನ ಕನಸು ಕಂಡು ಭಾರತೀಯರು ಅಂದು ಒಂದುಗೂಡಬೇಕೆಂದು ಪ್ರಯತ್ನ ಪಟ್ಟಂತೆ, ಮುಂದಿನ ಪೀಳಿಗೆಯ ನೆಮ್ಮದಿಯ ಬದುಕಿಗಾಗಿ ಸಮಾಜದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುವುದು ಪ್ರಜಾಧ್ವನಿ ಕರ್ನಾಟಕದ ಉದ್ದೇಶವಾಗಿದೆ. ಇದು ಯಾವುದೇ ರಾಜಕೀಯ ಪಕ್ಷ ಸಂಘಟನೆಯಲ್ಲ ಎಂದರು.


ಕಳೆದ ಎರಡು ವರ್ಷಗಳಿಂದ ಇದರ ತಯಾರಿಗಳು ನಡೆಯುತ್ತಿದ್ದು ೨೦೨೪ ನ ೧ ರಂದು ಸಂಪಾಜೆಯಲ್ಲಿ ಪ್ರಜಾಧ್ವನಿ ಲಾಂಛನ ಬಿಡುಗಡೆಗೊಂಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಮಿತಿಯ ಸದಸ್ಯರುಗಳಾದ ಉಮ್ಮರ್ ಕೆ ಎಸ್,ಪ್ರವೀಣ್ ಮುಂಡೋಡಿ ಸಂಘಟನೆ ಉದ್ದೇಶದ ಮಾಹಿತಿ ನೀಡಿದರು.

ಸದಸ್ಯರುಗಳಾದ ವಸಂತ ಪೆಲ್ತಡ್ಕ,ಮಂಜುನಾಥ್ ಮಡ್ತಿಲ, ಮಹೇಶ್ ಬೆಳ್ಳಾರ್ಕರ್, ಕರುಣಾಕರ ಪಲ್ಲತಡ್ಕ ಉಪಸ್ಥಿತರಿದ್ದರು.