ಕೆವಿಜಿ ತಾಂತ್ರಿಕ ಮಹಾವಿದ್ಯಾಲಯ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ – 2024 ಆಚರಣೆ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನೆ

0

ಬೇರೆ ಭಾಷೆಗಳ ವ್ಯಾಮೋಹದಿಂದ ಕನ್ನಡ ಕುಂಠಿತವಾಗಿದೆ – ಡಾ. ಪ್ರಭಾಕರ ನೀರುಮಾರ್ಗ

ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು, ನುಡಿ, ಕಲೆ, ಸಂಸ್ಕೃತಿ, ಇತಿಹಾಸದ ಮೇಲೆ ಅಭಿಮಾನ ಮೂಡಿಸುವ ಉದ್ದೇಶದಿಂದ ಸರಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಬೇರೆ ಬೇರೆ ಕೋರ್ಸ್ ಗಳ ಆಯ್ಕೆಯಿಂದಾಗಿ ಮತ್ತು ಅನ್ಯ ಭಾಷೆಯ‌ ಮೇಲಿನ ವ್ಯಾಮೋಹ ಕನ್ನಡ ಭಾಷೆಯನ್ನು ಕುಂಠಿತಗೊಳಿಸುತ್ತದೆ. ಕನ್ನಡ ನಮಗೆ ಉದ್ಯೋಗ ನೀಡುವ, ಅನ್ನ ನೀಡುವ ಭಾಷೆಯಾದರೆ ಕನ್ನಡ ಉಳಿಯುವುದಕ್ಕೆ ಸಾಧ್ಯ ಎಂದು ಯಂ.ಎ.ಪಿ.ಎಸ್. ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭಾಕರ ನೀರುಮಾರ್ಗ ಹೇಳಿದರು.

ಅವರು ನ. 23ರಂದು ಸುಳ್ಯದ ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ಸುಳ್ಯದ ಅಮರಶ್ರೀಭಾಗ್ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ – 2024 ಆಚರಣೆ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ಒ.ಎಲ್.ಇ. ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ ನಗಾರಿಯನ್ನು ಬಡಿದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿಂಗಾರ ಅನಾವರಣಗೊಳಿಸಿದ ಕನ್ನಡ ರಂಗಭೂಮಿಯ ಖ್ಯಾತ ರಂಗ ನಿರ್ದೇಶಕ ಜೀವನ್ ರಾಂ ರಂಗಮನೆ ಸುಳ್ಯ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಮಾತನಾಡಿದ ಡಾ. ಜೀವನ್ ರಾಂ ಸುಳ್ಯ ನನ್ನ 33 ವರ್ಷಗಳ ರಂಗ ಪಯಣದಲ್ಲಿ ಅತ್ಯಂತ ಸಂತೋಷ ಕೊಟ್ಟದ್ದು ಇವತ್ತಿನ ಸನ್ಮಾನ. ನನ್ನಲ್ಲಿರು ಪ್ರತಿಭೆಯನ್ನು ಗುರುತಿಸಿ ಇವತ್ತು ಈ ಮಟ್ಟಕ್ಕೆ ಬೆಳೆಯಲು ಕಾರಣಕರ್ತರಾದವರು ಡಾ. ರೇಣುಕಾಪ್ರಸಾದ್ ರವರು. ನನಗೆ 12 ಬಾರಿ ರಾಷ್ಟ್ರೀಯ ಪುರಸ್ಕಾರ ದೊರೆಯಲು ಕಾರಣವಾಗಿರುವುದು ನನ್ನನ್ನಲ್ಲಿರುವ ಸ್ಪಷ್ಟವಾದ ಕನ್ನಡ ಭಾಷೆ. ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಜೊತೆಗೆ ಪೊಷಕರ ಪಾತ್ರವೂ ಪ್ರಮುಖವಾಗಿದೆ. ಕನ್ನಡ ಆಚರಣೆ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿರದೆ ನಿತ್ಯ ನಿರಂತರವಾಗಿ ಆಚರಣೆಯಾಗಲಿ. ಆ ಮೂಲಕ ಕನ್ನಡ ಬೆಳೆಯಲಿ ಎಂದು ಹೇಳಿದರು.


ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದ ಸಿ.ಇ.ಒ ಡಾ. ಉಜ್ವಲ್ ಯುಜೆ ಮಾತನಾಡಿ ಸುಳ್ಯದಿಂದ ರಾಷ್ಟ್ರ ಮಟ್ಟಕ್ಕೆ ಕನ್ನಡ ನಾಡು, ನುಡಿ ಕಲೆಯನ್ನು ಪಸರಿಸಿದ ಕೀರ್ತಿ ಡಾ. ಜೀವನ್ ರಾಂರವರದ್ದು. ನಮ್ಮ ಕ್ಯಾಂಪಸ್ ನ ಎಲ್ಲಾ ಬೆಳವಣಿಗೆಗಳಲ್ಲಿ ಡಾ. ಜೀವನ್ ರಾಂರವರ ಮಾರ್ಗದರ್ಶನ, ಪಾಲುದಾರಿಕೆ ಇದೆ. ಡಾ. ಕುರುಂಜಿಯವರ ಹಾಗೆ ಅವರ ಹೆಸರೂ ಸುಳ್ಯದ ಕಲಾ ಶಿಲ್ಪಿ ಎಂದು ಶಾಶ್ವತವಾಗಿ ಉಳಿಯಬೇಕು ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ವಿ ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ. ಲೋಕೇಶ್ ಪಿ.ಸಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಪರಿಚಯಿಸಿದರು. ಪ್ರೊ. ಅಶ್ವಿಜ ಕೆ.ಸಿ ಡಾ. ಪ್ರಭಾಕರ ನೀರುಮಾರ್ಗರನ್ನು ಪರಿಚಯಿಸಿದರು.

ಡಾ. ಕುಸುಮಾಧರ ಎಸ್. ಡಾ. ಜೀವನ್ ರಾಂ ಸುಳ್ಯರನ್ನು ಪರಿಚಯಿಸಿದರು. ಕ್ರೀಡಾಸ್ಪರ್ಧೆ ವಿಜೇತರ ಪಟ್ಟಿಯನ್ನು ಅಖಿಲೇಶ್, ಸಾಂಸ್ಕೃತಿಕ ಸ್ಪರ್ಧಾ ವಿಜೇತರ ಪಟ್ಟಿಯನ್ನು ಪ್ರೊ. ಕೃಷ್ಣರಾಜ್ ಎಂ.ವಿ ವಾಚಿಸಿದರು.

ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಶ್ರೀಧರ್ ಕೆ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ನಂದಕುಮಾರ್ ಪಿ.ಎಸ್. ವಂದಿಸಿದರು. ವಿದ್ಯಾರ್ಥಿಗಳಾದ ನಿಹಾರಿಕ ಕೆ, ಷಣ್ಮುಖ ಸಿ ಮತ್ತು ಸ್ಪೂರ್ತಿ ಎಂ.ಪಿ. ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರಜ್ಞಾ ಸಹಕರಿಸಿದರು. ಕಾಲೇಜಿನ ಉಪನ್ಯಾಸಕ ವೃಂದ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಎ.ಒ.ಎಲ್.ಇ ಬಿ ಕಮಿಟಿಯ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಮತ್ತಿತರ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಸುದ್ದಿ ಚಾನೆಲ್ ಮೂಲಕ ಕಾರ್ಯಕ್ರಮದ ನೇರಪ್ರಸಾರಗೊಂಡಿತು.