ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬ ಸದಸ್ಯರ ಜಾಗವನ್ನು ಇತರರು ಅತಿಕ್ರಮಣ ಮಾಡಿರುವ ಆರೋಪ

0

ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ

ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ, ಪಲಶಿಷ್ಟ ಜಾತಿಗೆ ಸೇರಿದ ಚಂರ್ಬ ಮೇರ ಎಂಬವರ ಜಮೀನನ್ನು ಸ್ಥಳೀಯ ನಿವಾಸಿ ಮೋನಪ್ಪ ಗೌಡ ಮತ್ತು ಇತರರು ಅಕ್ರಮವಾಗಿ ಮಂಜೂರುಗೊಳಿಸಿ ಬಡ ದಲಿತ ಕುಟುಂಬಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿ ನ 30 ರಂದು ಸುಳ್ಯ ತಾಲೂಕು ಕಚೇರಿ ಮುಂಭಾಗ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನಾ ಸಭೆಯನ್ನು ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕರಿಕ್ಕಳ ದೀಪ ಬೆಳಗಿಸಿ ಉದ್ಘಾಟಿಸಿ
ಮಾತನಾಡಿ ‘ಬಡ ದಲಿತ ಕುಟುಂಬಕ್ಕೆ ಅನ್ಯಾಯ ವಾಗಿದೆ ಎಂದರೆ ನಾನು ಸ್ಥಳೀಯ ಪಂಚಾಯತ್ ಅಧ್ಯಕ್ಷ ನಾಗಿದ್ದು ತೊಂದರೆಗೊಳಗಾದವರ ಸಮಸ್ಯೆಯನ್ನು ತಿಳಿದು ಕೊಳ್ಳುವುದು ನನ್ನ ಕರ್ತವ್ಯವಾಗಿದೆ.


ನನಗೆ ತಿಳಿದು ಬಂದ ಹಾಗೆ ಅಧಿಕಾರಿಗಳ ತಪ್ಪಿ ನಿಂದ ಈ ರೀತಿಯ ತಪ್ಪು ಇಲ್ಲಿ ನಡೆದಿದೆ ಎಂದು ಕಾಣಿಸುತ್ತಿದೆ.ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸಿ ಆ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಾಗಿದೆ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್, ಕಾರ್ಯದರ್ಶಿ ಪಿ ಎಸ್ ಗಂಗಾಧರ್ ಮಾತನಾಡಿ ದಲಿತ ಸಮುದಾಯದ ಚಂರ್ಬ ಮೇರ ಎಂಬುವವರ ಜಾಗದ ಸಮಸ್ಯೆ ತುಂಬಾ ಬೇಸರದ ಸಂಗತಿ. ಒಂದು ಬಡ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ತಿಳಿದಾಗ ನಾವು ಮುಖಂಡರುಗಳಾಗಿ ಸುಮ್ಮನೆ ಇರಲು ಸಾಧ್ಯವಿಲ್ಲ. ಈ ಕುಟುಂಬದ ಪರವಾಗಿ ಎಂದಿಗೂ ನಾವು ಇದ್ದೇವೆ. ಆದ್ದರಿಂದ ಆದಷ್ಟು ಶೀಘ್ರದಲ್ಲಿ ಇವರಿಗೆ ಪರಿಹಾರ ಸಿಗಬೇಕು ಮತ್ತು ಅಧಿಕಾರಿಗಳು ಇದಕ್ಕಾಗಿ ಪ್ರಯತ್ನಿಸಬೇಕೆಂದು ಹೇಳಿದರು.

ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಧ್ಯಕ್ಷ ಗಿರಿಧರ ನಾಯ್ಕ ರವರು
‘ಚಂರ್ಬ ಮೇರ ಎಂಬವರಿಗೆ 1978 ರಲ್ಲಿ ಮಂಜೂರಾದ ಜಾಗ 1980 ರಲ್ಲಿ ಸಾಗುವಳಿ ಚೀಟಿ ನೀಡಿ SRT LND: 197/81-82 ರಂತೆ ಪೋಡಿ ವ್ಯವಹರಣೆ ಪೂರ್ಣಗೊಂಡಿದ್ದು, ಪಹಣಿ ದುರಸ್ತಿಯಾಗಿರುತ್ತದೆ. ಆದರೆ ಚಂರ್ಬ ಮೇರ ಇವರು 2005 ರಲ್ಲಿ ಮೃತಪಟ್ಟಿದ್ದು ಪ್ರಸ್ತುತ ಅವರ ಮಗನಾದ ಜೋಮ ಮೇರ ಇವರು ಜಮೀನಿನ ವಾರೀಸುದಾರರಾಗಿರುತ್ತಾರೆ.ಅಲ್ಲದೆ ಈ ಜಾಗದ ಆರ್ ಟಿ ಸಿ ಮುಂತಾದ ದಾಖಲೆಗಳು ಕೂಡ ಇವರ ಹೆಸನಲ್ಲಿಯೇ ಇದೆ.

ಆದರೆ ಸ್ಥಳೀಯ ನಿವಾಸಿ ಮೋನಪ್ಪ ಗೌಡ ಮತ್ತು ಇತರರು ಸೇರಿ ಸುಳ್ಳು ಮಾಹಿತಿಯನ್ನು ನೀಡಿ ಜಮೀನಿಗೆ ಸಾಗುವಳಿ ಚೀಟಿಯನ್ನು ಪಡೆದು ಬಡ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ.ಈ ಜಾಗ ಪಿ.ಡಿ.ಸಿ.ಎಲ್ ಕಾನೂನಿಗೆ ಅನ್ವಯಿಸುವ ಜಮೀನಾಗಿದ್ದರಿಂದ ಇತರರು ಯಾವುದೇ ರೀತಿ ಕಂದಾಯ ಕಾಯ್ದೆಯಲ್ಲಿ ಅವರ ಹೆಸರಿನಲ್ಲಿ ಮಂಜೂರುಗೊಳಿಸಲು ಅಸಾಧ್ಯವಾಗಿರುತ್ತದೆ.

ಆದರೂ ಕೂಡ ಮೋನಪ್ಪ ಗೌಡ ಮತ್ತು ಇತರರು ಸೇರಿ ಇವರ ಜಮೀನನ್ನು ಕಬಳಿಸುವ ದುರುದ್ದೇಶವನ್ನು ಹೊಂದಿರುತ್ತಾರೆ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ಕೈ ಜೋಡಿಸಿ ಕಾನೂನು ಬಾಹಿರವಾಗಿ ಮಂಜೂರು ಗೊಳಿಸಿರುತ್ತಾರೆ.
ಆದ್ದರಿಂದ ಈ ಸಾಗುವಳಿ ಚೀಟನ್ನು ರದ್ದು ಪಡಿಸಿ ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಸಿಗಬೇಕು. ಇಲ್ಲದಿದ್ದರೆ ನಾವು ಸಂಘಟನೆಯವರು ಇದನ್ನು ಬಿಡಲು ಸಾಧ್ಯವಿಲ್ಲ ಎಂದರು.

ಪ್ರತಿಭಟನಾ ಸ್ಥಳಕ್ಕೆ ಸುಳ್ಯ ತಹಶೀಲ್ದಾರರು ಬಂದು ಬೇಡಿಕೆಯ ಮನವಿ ಕೊಡಿ ಎಂದು ಹೇಳಿದಾಗ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗಿರಿಧರ ನಾಯ್ಕ ಅರ್ಜಿಯನ್ನು ಕೊಟ್ಟು ಕೊಟ್ಟು ಸಾಕಾಗಿದೆ. ನಮಗೆ ಈ ದಿನ ನಮ್ಮ ಸಮಸ್ಯೆಗೆ ಪರಿಹಾರ ಸಿಗಬೇಕು. ಎಂದು ಪಟ್ಟು ಹಿಡಿದರು.

ಈ ವೇಳೆ ತಹಶೀಲ್ದಾರ್ ರವರು ಈ ಪ್ರಕರಣ ರಾಜ್ಯ ಹೈ ಕೋರ್ಟ್ ನಲ್ಲಿ ಇದ್ದು ನಾವು ಕೋರ್ಟ್ ಉಲ್ಲಂಘನೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನ್ಯಾಯಾಲಯಕ್ಕೆ ತೆರಳಿ ತಮ್ಮ ಕೋರಿಕೆ ಮತ್ತು ಮನವಿಯನ್ನು ಕಾನೂನು ಪ್ರಕಾರ ಸಲ್ಲಿಸುವಂತೆ ತಿಳಿಸಿದರು.

ಬಳಿಕ ಸ್ಥಳದಲ್ಲಿದ್ದ ಮುಖಂಡರುಗಳಾದ ಪಿ ಸಿ ಜಯರಾಮ್ ಹಾಗೂ ಪಿ ಎಸ್ ಗಂಗಾಧರ ರವರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ ಜಾಗದ ಸರ್ವೆ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ನಡೆಸಿ ಗೊಂದಲ ಸರಿ ಪಡಿಸಿ ಕೊಡುವಂತೆ ಕೇಳಿಕ್ಕೊಂಡರು.
ಇದಕ್ಕೆ ಒಪ್ಪಿಗೆ ಸೂಚಿಸಿದ ತಹಸೀಲ್ದಾರ್ ಮಂಜುಳಾ ರವರು 15 ದಿನಗಳಲ್ಲಿ ಸರ್ವೆ ನಡೆಸಲು ಕಂದಾಯ ಇಲಾಖೆಯವರಿಗೆ ಸೂಚನೆ ನೀಡುವ ಕುರಿತು ಭರವಸೆ ನೀಡಿದರು.
ಆ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಈ ಹೇಳಿದ ಪ್ರಕಾರ ಅಧಿಕಾರಿಗಳು ನಡೆಯದಿದ್ದರೆ ಸುಳ್ಯ ತಾಲೂಕು ಕಛೇರಿ ಮುಂಭಾಗ ನಿರಂತರವಾಗಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ವತಿಯಿಂದ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು.

ಪ್ರತಿಭಟನೆಗೆ ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಬೆಂಬಲ ಸೂಚಿಸಿ ಅಧ್ಯಕ್ಷರಾದ ಶೇಸಪ್ಪ ಬೆದ್ರೆಕ್ಕಾಡು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಈ ಕುಟುಂಬಕ್ಕೆ ನ್ಯಾಯ ಕೊಡಬೇಕು. ದಲಿತರ ಮೇಲೆ ನಿರಂತರ ಈ ರೀತಿಯ ದಬ್ಬಾಳಿಕೆ ನಡೆಯುತಿದ್ದು ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ವೇದಿಕೆಯಲ್ಲಿ ಮುಖಂಡರಾದ ದಿನೇಶ್ ಪಿಂಡಿ ಮನೆ,ದಲಿತ್ ಸೇವಾ ಸಮಿತಿ ಸದಸ್ಯರುಗಳಾದ ದಿನೇಶ್, ಗಣೇಶ್ ಉಪಸ್ಥಿತರಿದ್ದರು.

ಪ್ರತಿಭಟನೆ ಯಲ್ಲಿ ಸ್ಥಳದ ಕುಟುಂಬ ಸದಸ್ಯರುಗಳಾದ ಅಕ್ಕು, ಗಿರಿಜಾ, ಮೋಹಿನಿ, ಲಲಿತಾ, ತಿಮ್ಮಕ್ಕ, ಐತೆ, ಸುಂದರಿ, ಸದಾನಂದ, ಚಂದ್ರಶೇಖರ, ಹಾಗೂ ಇತರ ಸದಸ್ಯರುಗಳು, ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಸದಸ್ಯರುಗಳು ಭಾಗವಹಿಸಿದ್ದರು.

ವೇದಿಕೆಯ ರಾಜ್ಯ ಸಮಿತಿ ಕಾರ್ಯದರ್ಶಿ ಪ್ರಮೋದ್ ತಿಂಗಳಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಅಧ್ಯಕ್ಷ ಗಿರಿಧರ ನಾಯ್ಕ ವಂದಿಸಿದರು. ಪ್ರತಿಭಟನೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.