ಸೇವೆಯಲ್ಲಿಯೇ ಸಾರ್ಥಕತೆ ಪಡೆಯುವ ಗೃಹರಕ್ಷಕರು

0


ಚರಿತ್ರೆ
ನಿಷ್ಕಾಮ ಸೇವೆ, ಸೇವೆಯೇ ಪರಮ ಗುರಿ ಎಂಬ ಧ್ಯೇಯ ವಾಕ್ಯದೊಂದಿಗೆ ಸದಾ ಕಾಲ ದೇಶಕ್ಕಾಗಿ ದುಡಿಯುವ ಮತ್ತು ಮಿಡಿಯುವ ಸ್ವಯಂಸೇವಾ ಮನೋಭಾವದ ಶಿಸ್ತು ಬದ್ಧವಾದ ಖಾಕಿ ಸಮವಸ್ತ್ರ ಧಾರಿ ಸ್ವಯಂಸೇವಕರೇ ನಮ್ಮ ಹೆಮ್ಮೆಯ ಗೃಹರಕ್ಷಕರು. ದೇಶದ ಗಡಿಭಾಗವನ್ನು ವೈರಿಗಳಿಂದ ಮತ್ತು ಭಯೋತ್ಪಾದಕರಿಂದ ಸೈನಿಕರು ರಕ್ಷಿಸುವ ರೀತಿಯಲ್ಲಿ ದೇಶದೊಳಗಿನ ಜನರ ಜೀವ ಮತ್ತು ರಾಷ್ಟ್ರೀಯ ಸಂಪನ್ಮೂಲಗಳನ್ನು ರಕ್ಷಿಸುವ ಹಾಗೂ ತುರ್ತು ಸಂದರ್ಭಗಳಲ್ಲಿ ದೇಶಕ್ಕಾಗಿ ತಮ್ಮ ಸಮಯ ಮತ್ತು ಶಕ್ತಿಯನ್ನು ಶಕ್ತಿಮೀರಿ ನೀಡಿ ದೇಶದ ಐಕ್ಯತೆ ಸ್ವಾತಂತ್ರ್ಯ ಮತ್ತು ಸ್ವಾಯತ್ತೆಯನ್ನು ಕಾಪಾಡುವ ದೇಶÀದೊಳಗಿನ ಸೈನಿಕರೇ ನಮ್ಮ ಗೃಹರಕ್ಷಕರು ಎಂದರೆ ಅತಿಶಯೋಕ್ತಿಯಾಗದು.
ಎರಡನೇಯ ಮಹಾ ಯುದ್ಧದ ಸಂದರ್ಭದಲ್ಲಿ ಹಿಟ್ಲರನ ನಾಜಿ ಸೈನ್ಯವನ್ನು ಹಿಮ್ಮೆಟ್ಟಿಸಲು ಪೊಲೀಸ್ ಮತ್ತು ಮಿಲಿಟ್ರಿ ಪಡೆಗಳಿಗೆ ಪರ್ಯಾಯವಾಗಿ ಬ್ರಿಟನ್ ದೇಶದ ಜನರೇ ಸೇರಿಕೊಂಡು ನಾಗರೀಕರ ಪಡೆಯೊಂದನ್ನು ಸೃಷ್ಟಿಸಿಕೊಂಡರು. ಈ ಗುಂಪಿಗೆ ಸ್ಥಳೀಯ ರಕ್ಷಣಾ ಕಾರ್ಯಕರ್ತರು ( Local Defence Volunteers) ಎಂದೂ ಕರೆಯಲಾಯಿತು. ಮುಂದೆ 1940 ಆಗಸ್ಟ್ 20 ರಂದು ವಿನ್‍ಸ್ಟನ್ ಚರ್ಚಿಲ್ ಅವರಿಗೆ ಹೋಮ್‍ಗಾರ್ಡ್ ಎಂದೂ ನಾಮಕರಣ ಮಾಡಿದರು. ಯುದ್ಧದ ಸಂದರ್ಭದಲ್ಲಿ ಗಾಯಗೊಂಡ ಜನರನ್ನು ಆಸ್ಪತ್ರೆಗೆ ಸಾಗಿಸಲು, ಜನರನ್ನು ಉಪಚರಿಸಲು ಮತ್ತು ಸೇನೆಗೆ ನೆರವಾಗಲು ಈ ಹೋಮ್‍ಗಾರ್ಡ್‍ಗಳನ್ನು ಬಳಸಲಾಯಿತು. ಇದೇ ಸಿದ್ದಾಂತ ಮತ್ತು ಧ್ಯೇಯಗಳನ್ನು ಇದ್ದುಕೊಂಡು ಈ ರೀತಿಯ ಸ್ವಯಂಸೇವಾ ಸಂಘಟನೆಗಳು ವಿಶ್ವದೆಲ್ಲೆಡೆ ಹುಟ್ಟಿಕೊಂಡವು. ಮಿಲಿಟರಿ ಸೇರಲು ಸಾಧ್ಯವಾಗದೆ ದೇಶಕ್ಕೆ ಸೇವೆ ಸಲ್ಲಿಸುವ ತುಡಿತ ಇರುವ ಈ ಗುಂಪನ್ನು ಬ್ರ್ರಿಟನ್‍ನಲ್ಲಿ ಮೊದಲು ‘ಡ್ಯಾಡ್ಸ್ ಆರ್ಮಿ’ ಎಂದು ಕರೆಯುತ್ತಿದ್ದರು.
ನಮ್ಮ ಭಾರತ ದೇಶದಲ್ಲಿ 1946ರಲ್ಲಿ ಬಾಂಬೆ ರಾಜ್ಯದಲ್ಲಿ ದೊಂಬಿ, ಹಿಂಸಾಚಾರ, ಕೋಮು ಗಲಭೆಗಳು ಜಾಸ್ತಿಯಾದಾಗ ಭೂಸೇನೆ. ನೌಕಸೇನೆ ಮತ್ತು ವಾಯುಸೇನೆಗೆ ಪೂರಕವಾಗಿ ಕೆಲಸ ಮಾಡಲು ಮೊರಾರ್ಜಿ ದೇಸಾಯಿಯವರ ಮುಂದಾಳತ್ವದಲ್ಲಿ ಸ್ವಯಂಸೇವಾ ಮನೋಭಾವದ ಜನರ ತಂಡ ರಚಿಸಲಾಯಿತು. 1946 ಡಿಸೆಂಬರ್ 6 ರಂದು ಅದು ಜನ್ಮ ತಾಳಿತು. ಅವರಿಗೆ ಗೃಹರಕ್ಷಕರು ಎಂದು ನಾಮಕರಣ ಮಾಡಲಾಯಿತು. ಮುಂದೆ 1962ರಲ್ಲಿ ಗೃಹರಕ್ಷಕ ಕಾಯಿದೆಯು ಜಾರಿಗೆ ತರಲಾಯಿತು. 1962ರ ಭಾರತ ಚೀನಾ ಯುದ್ಧದ ಸಂದರ್ಭದಲ್ಲಿ ಈ ಗೃಹರಕ್ಷಕರಿಗೆ ಖಾಕಿ ಸಮವಸ್ತ್ರ ನೀಡಿ ದೇಶ ಸೇವೆಗಾಗಿ ಬಳಸಿಕೊಳ್ಳಲಾಯಿತು. ಅಲ್ಲಿಯವರೆಗೆ ಸಾಮಾನ್ಯ ಧಿರಿಸಿನಲ್ಲಿಯೇ ಗೃಹರಕ್ಷಕರು ದೇಶದ ಶಾಂತಿ ಸುವ್ಯವಸ್ಥೆ ಕಾಪಾಡಲು ಕೆಲಸ ನಿರ್ವಹಿಸುತ್ತಿದ್ದರು.

ಗೃಹರಕ್ಷಕರ ಕರ್ತವ್ಯಗಳು

    ಗೃಹರಕ್ಷಕ ದಳ ದೇಶದ ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಪೊಲೀಸ್ ಇಲಾಖೆಗೆ ಹೆಗಲುಕೊಟ್ಟು ಜಿಲ್ಲಾಡಳಿತಕ್ಕೆ ಪೂರಕವಾಗಿ ಕೆಲಸ ನಿರ್ವಹಿಸುತ್ತದೆ. ಪ್ರಾಕೃತಿಕ ಮತ್ತು ಮಾನವ ನಿರ್ಮಿತ ದುರಂತಗಳಲ್ಲಿನ ಭೂಕಂಪ, ನೆರೆ, ಬೆಂಕಿ ಅವಘಡ, ಬಿರುಗಾಳಿ, ಸೈಕ್ಲೋನ್, ಸುನಾಮಿ, ಪ್ರಳಯ, ವಿಮಾನ ದುರಂತ, ರೈಲು ದುರಂತ, ವೈಮಾನಿಕ ದಾಳಿ, ಗ್ಯಾಸ್ ಸ್ಫೋಟ  ಹಾಗೂ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ ಮಾಡುತ್ತಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ  ಜನರ ಪ್ರಾಣ ರಕ್ಷಣೆ, ಜಾನುವಾರುಗಳ ರಕ್ಷಣೆ, ದೇಶದ ಸಂಪನ್ಮೂಲಗಳ ರಕ್ಷಣೆ, ಆಸ್ತಿ ರಕ್ಷಣೆ, ವಿಪತ್ತು ನಿರ್ವಹಣೆ, ಪರಿಹಾರ ಮತ್ತು ಪುನರ್ ವಸತಿ ಕಾರ್ಯಗಳಲ್ಲಿ ಸ್ಥಳೀಯ ಆಡಳಿತಕ್ಕೆ ನೆರವು ನೀಡುತ್ತಾರೆ. ಒಟ್ಟಿನಲ್ಲಿ ಸಾಮಾಜಿಕ ಶಾಂತಿ, ನಮ್ಮ ಕಾನೂನು ಸುವ್ಯವಸ್ಥೆ ಪುನರ್‍ಸ್ಥಾಪಿಸಲು ದೊಂಬಿ, ಹಿಂಸಾಚಾರ, ಕೋಮುಗಲಭೆಗಳಲ್ಲಿ ಜಿಲ್ಲಾಡಳಿತ ಜೊತೆಗೂಡಿ ಹಗಲಿರುಳು ಶ್ರಮಿಸುತ್ತಾರೆ. ಅದೇ ರೀತಿ ಶಾಂತಿ ಸಮಯದಲ್ಲಿ ಗೃಹರಕ್ಷಕರು ಪೊಲೀಸ್ ಇಲಾಖೆ ಅಗ್ನಿಶಾಮಕ ಇಲಾಖೆ, ಅಬಕಾರಿ ಇಲಾಖೆ, ಸಾರಿಗೆ ಇಲಾಖೆ, ಪ್ರಯೋಗ ವಿಧಿ ವಿಜ್ಞಾನ, ಕಾರಾಗೃಹ ಇಲಾಖೆ, ಸರಕಾರಿ ಪಹರೆ ಕರ್ತವ್ಯ, ಪ್ರಾಚ್ಯ ವಸ್ತು ಸಂಗ್ರಹಾಲಯಗಳ ಪಹರೆ, ಪ್ರವಾಸಿ ಮಿತ್ರ ಪೊಲೀಸ್ ಬೀಟ್ ಪೊಲೀಸ್, ಕರಾವಳಿ ಕಾವಲು ಪಡೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಹೀಗೆ ಹತ್ತು ಹಲವು ಇಲಾಖೆಗಳಲ್ಲಿ ಗೃಹರಕ್ಷಕರು ಕೆಲಸ ಮಾಡುತ್ತಾರೆ ಮತ್ತು ವಿಐಪಿ ಬಂದೋಬಸ್ತ್, ಮುಷ್ಕರ, ಜಾತ್ರೆ, ಚಳವಳಿ, ಹರತಾಳಗಳ ಸಂದರ್ಭಗಳಲ್ಲಿ, ಚುನಾವಣಾ ಸಂದರ್ಭಗಳಲ್ಲಿ ಪಾರದರ್ಶಕವಾದ ನ್ಯಾಯಸಮ್ಮತ, ಕಾನೂನುಬದ್ಧ ಚುನಾವಣೆ ನಡೆಸಲು ಸ್ಥಳೀಯ ಆಡಳಿತಕ್ಕೆ ನೆರವಾಗುತ್ತಾರೆ. ಇನ್ನು ಕೋಮು ಗಲಭೆಯಾದಾಗ ಪೊಲೀಸ್ ಇಲಾಖೆ ಜತೆ ಸೇರಿ ಸಮಾಜದ ಶಾಂತಿ ಕಾಪಾಡಲು ಹಗಲಿರುಳು ಶ್ರಮಿಸುತ್ತಾರೆ. ಇನ್ನು ಗಡಿ ರಕ್ಷಣಾ ಗೃಹರಕ್ಷಣಾ ಪಡೆ ಗೃಹರಕ್ಷಕ ದಳದ ವಿಶೇಷ ಪಡೆಯಾಗಿದ್ದು, ದೇಶದ ಗಡಿಭಾಗಗಳಲ್ಲಿ ಗಡಿ ಕಾಯುವ ಸೈನಿಕರಿಗೆ ದೇಶ ರಕ್ಷಣೆ ಮಾಡಲು ಸಹಾಯ ಮಾಡುತ್ತದೆ. ಇಂತಹ ಗೃಹರಕ್ಷಕರಿಗೆ ವಿಶೇಷವಾದ ಶಸ್ತ್ರಾಸ್ತ್ರ, ಪ್ರಯೋಗ ತರಬೇತಿ ನಡೆಸಿ ದೇಶ ಸೇವೆಗೆ ಬಳಸಲಾಗುತ್ತದೆ. ಹೀಗೆ ದೇಶದ ಒಳಗಡೆ ದೇಶದ ಗಡಿಭಾಗದಲ್ಲಿ ನಿರಂತರವಾಗಿ ಹಗಲಿರುಳು ದೇಶವನ್ನು ಕಾಯುವ  ಖಾಕಿ ಸಮವಸ್ತ್ರಧಾರಿ ಸೈನಿಕರು  ನಮ್ಮ ಗೃಹರಕ್ಷಕರು ಎಂದರೆ ಅತಿಶಯೋಕ್ತಿÀಯಾಗಲಾರದು.

ಯಾರು ಸೇರಬಹುದು?

     ಸ್ವಯಂಸೇವಾ ಮನೋಭಾವ ಇರುವ ದೇಶಕ್ಕಾಗಿ ಏನಾದರೂ ಸೇವೆ ಸಲ್ಲಿಸಬೆಕು ಎಂಬ ತುಡಿತ ಇರುವ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಇರುವ ಸಮಾಜದ ಎಲ್ಲಾ ಸ್ತರದ  ವ್ಯಕ್ತಿಗಳು  ಯಾವುದೇ ಜಾತಿ, ಮತ, ಧರ್ಮ ಪಂಗಡ ಹಾಗೂ ಲಿಂಗಬೇಧವಿಲ್ಲದೆ ಈ ಗೃಹರಕ್ಷಕ ದಳವನ್ನು ಸೇರಬಹುದಾಗಿದೆ. ಕನಿಷ್ಟ 19 ವರ್ಷ ವಯಸ್ಸಾಗಿರಬೇಕು, 50 ವರ್ಷದ ಒಳಗಿನವರಾಗಿರಬೇಕು. ಕನಿಷ್ಠ ಎಸ್‍ಎಸ್‍ಎಲ್‍ಸಿ ಆಗಿರಬೇಕು. ಯಾವುದೇ ಅಪರಾಧದ ಹಿನ್ನೆಲೆ ಇರಬಾರದು. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ಅಂಗವಿಕಲರಾಗಿ ಸೇರಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು, ವಕೀಲರು, ವೈದ್ಯರು, ಕೃಷಿಕರು, ಕೂಲಿಕಾರ್ಮಿಕರು, ಶಿಕ್ಷಕರು, ಇಂಜಿನಿಯರ್‍ಗಳು, ಸರ್ಕಾರಿ ನೌಕರರು ಹೀಗೆ ಯಾರು ಬೇಕಾದರೂ ಗೃಹರಕ್ಷಕ ದಳ ಸೇರಬಹುದಾಗಿದೆ. ತಮ್ಮ ವೃತ್ತಿಯ ಜೊತೆಗೆ ದೇಶಕ್ಕಾಗಿ ಒಂದಿಷ್ಟು ಸಮಯ ನೀಡಲು  ಸದಾ ಸಿದ್ಧರಾಗಿರುವ ಮನೋಭಾವನೆ ಇರುವವರು ಮಾತ್ರ ಸೇರಬಹುದಾಗಿದೆ. ಏನೂ ಕೆಲಸವಿಲ್ಲದೆ, ಹೊಟ್ಟೆಪಾಡಿಗಾಗಿ ಗೃಹರಕ್ಷಕ ಇಲಾಖೆ ಸೇರಿ ಸೇವೆ ಮಾಡುವವವರು ಹುಂಬತನ ಹಾಗೂ ಅತೀಬುದ್ಧಿವಂತಿಕೆ ಇರುವ ವ್ಯಕ್ತಿಗಳಿಂದ ಗೃಹರಕ್ಷಕ ಇಲಾಖೆಗೆ ಏನೂ ಪ್ರಯೋಜನ ಆಗಲಾರದು. ಒಮ್ಮೆ ಸೇರಿದ ಬಳಿಕ ಪ್ರತೀ ಮೂರು ವರ್ಷಕ್ಕೊಮ್ಮೆ ನವೀಕರಣ ಮಾಡಿಸತಕ್ಕದು. ಹೀಗೆ ಸೇರಿದ ವ್ಯಕ್ತಿಗಳಿಗೆ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ನೀಡಿ ಅಗತ್ಯವಿದ್ದಾಗಲೆಲ್ಲಾ ಸೇವೆಗೆ ಬಳಸಿಕೊಳ್ಳಲಾಗುತ್ತದೆ. ಗೃಹರಕ್ಷಕ ಇಲಾಖೆಗೆ ಸೇರಲು ಬೇಕಾದಾಗ ಸರ್ಕಾರವೇ ನಿಗದಿಪಡಿಸಿದ ಎ, ಬಿ, ಡಿ, ಅರ್ಜಿ ನಮೂನೆಗಳು ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಲಭ್ಯವಿರುತ್ತದೆ. ಈ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಅರ್ಜಿಯ ಜೊತೆಗೆ ವಿದ್ಯಾರ್ಹತೆ, ವಯಸ್ಸಿನ ದಾಖಲೆ, ವೈದ್ಯರ ಪ್ರಮಾಣ ಪತ್ರ,  ಫೋಟೋ ಮತ್ತು ವಾಸ ಸ್ಥಳಗಳ  ದಾಖಲೆಗಳ ನಕಲು ಪ್ರತಿ ನೀಡಬೇಕಾಗುತ್ತದೆ. ಆ ಬಳಿಕ ನೀವು ನೀಡಿದ ದಾಖಲೆಗಳನ್ನು ಪರಿಶೀಲನೆ ನಡೆಸಿ ನಿಮ್ಮ ಮೇಲೆ ಯಾವುದೇ ಅಪರಾಧದ ಕೇಸು ಇಲ್ಲವೆಂದು ದೃಢೀಕರಿಸಿ ಗುಣನಡತೆಯ  ಪ್ರಮಾಣ ಪತ್ರ ಪೊಲೀಸ್ ಇಲಾಖೆ ನೀಡುತ್ತದೆ. ಇದರ ಬಳಿಕ ಸಂದರ್ಶನ ಪ್ರಕ್ರಿಯೆ ನಡೆದು ನಿಮ್ಮನ್ನು ಇಲಾಖೆಗೆ ಸಿ ಪ್ರಮಾಣಪತ್ರ ನೀಡಿ ಸೇರಿಸಿಕೊಳ್ಳಲಾಗುತ್ತದೆ. ನೇಮಕಾತಿ ಸಮಿತಿಯಾದ ಅಪರ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾ ಸಮಾದೇಷ್ಟರು ಇರುತ್ತಾರೆ. ಒಮ್ಮೆ ಸೇರಿದ ಬಳಿಕ ನಿಮ್ಮ ಮೇಲೆ ಪೊಲೀಸರು ಕೇಸು ದಾಖಲಾದಲ್ಲಿ ನಿಮ್ಮನ್ನು ಇಲಾಖೆಯಿಂದ ತೆಗೆದುಹಾಕಲಾಗುತ್ತದೆ. ಸ್ವಚರಿತ್ರ ಮತ್ತು ನಿಷ್ಟಾವಂತರು ಮತ್ತು ಇಲಾಖೆಯಲ್ಲಿ ಕೆಲಸ ನಿರ್ವಹಿಸಲು ಅವಕಾಶ ನೀಡಲಾಗುತ್ತದೆ. ಈ ರೀತಿ ಆಯ್ಕೆಯಾದ ಗೃಹರಕ್ಷಕರು 10 ದಿನಗಳ ಮೂಲ ತರಬೇತಿ ಶಿಬಿರ ನಡೆಸಲಾಗುತ್ತದೆ. ಈ ತರಬೇತಿ ಶಿಬಿರದಲ್ಲಿ ಗೃಹರಕ್ಷಕರು ತಮ್ಮ ಕೆಲಸವನ್ನು ಶಿಸ್ತುಬದ್ಧವಾಗಿ, ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಗೃಹರಕ್ಷಕರಿಗೆ ಬೇಕಾದ ಪ್ರಥಮ ಚಿಕಿತ್ಸೆ ತರಬೇತಿ, ಪ್ರವಾಹ ರಕ್ಷಣಾ ತರಬೇತಿ, ಅಗ್ನಿಶಮನ ತರಬೇತಿ, ಸಂಚಾರ ನಿಯಂತ್ರಣ ತರಬೇತಿ, ಶಸ್ತ್ರಾಸ್ತ್ರ ತರಬೇತಿ ಮತ್ತು ನಿಸ್ತಂತು ತರಬೇತಿ ಮೊದಲಾದ ಅತೀ ಅಗತ್ಯ ತರಬೇತಿಗಳನ್ನು ನೀಡಿ ತಮ್ಮನ್ನು ರಕ್ಷಿಸುವುದರ ಜೊತೆಗೆ ಜನರನ್ನು ರಕ್ಷಿಸುವ ಕೌಶಲ್ಯ ತರಬೇತಿ ಮತ್ತು ನಿಪುಣತೆಯನ್ನು ಕಲಿಸಿಕೊಡಲಾಗುತ್ತದೆ. ಒಟ್ಟಿನಲ್ಲಿ ಗೃಹರಕ್ಷಕರಿಗೆ ಬೇಕಾದ ಎಲ್ಲಾ ಮೂಲ ತರಬೇತಿ ನೀಡಿ ಖಾಕಿ ಸಮವಸ್ತ್ರ ಮತ್ತು ಲಾಠಿಯನ್ನು ನೀಡಿ ದೇಶ ಸೇವೆಗೆ ಸಜ್ಜುಗೊಳಿಸಲಾಗುತ್ತದೆ.

ಕೊನೆಮಾತು

     ಗೃಹರಕ್ಷಕದಳ ಎನ್ನುವುದು, ಸರಕಾರಿ ಪ್ರಾಯೋಜಿತವಾದ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಸಮುದಾಯದ ಎಲ್ಲಾ ಜಾತಿ ಧರ್ಮ ಮತ್ತು ವರ್ಗದ ಜನರಿಗೆ ಮುಕ್ತವಾಗಿ ತೆರೆದಿರುತ್ತದೆ. ಯಾವುದೇ ಲಾಭ ನಷ್ಡದ ಲೆಕ್ಕಾಚಾರವಿಲ್ಲದೆ, ಯಾವುದೇ ಫಲಾಪೇಕ್ಷೆ ಇಲ್ಲದೆ, ದೇಶಕ್ಕಾಗಿ ಏನಾದರೂ ಸೇವೆ ಸಲ್ಲಿಸುವ ಮನೋಭಾವನೆ ಇರುವ ಸ್ವಚರಿತ್ರ ವ್ಯಕ್ತಿಗಳಿಗೆ ಗೃಹರಕ್ಷಕ ದಳ ಒಂದು ಉತ್ತಮವಾದ ವೇದಿಕೆ ಎಂದರೆ ತಪ್ಪಾಗಲಾರದು. ಅವರು ಮಾಡುವ ಕೆಲಸಕ್ಕೆ ಸಂಬಳವಿಲ್ಲದಿದ್ದರೂ ಸರಕಾರವೇ ನಿಗದಿಪಡಿಸಿದ ಗೌರವ ಧನವನ್ನು ನೀಡಿ ಅವರ ಸೇವೆಯನ್ನು ಸ್ಮರಿಸಲಾಗುತ್ತದೆ. ಇದು ಖಾಯಂ ನೌಕರಿಯಲ್ಲದ ಕಾರಣದಿಂದ ಯಾವುದೇ ಪಿಂಚಣಿ, ನಿವೃತ್ತಿ ಭತ್ಯೆ ಮತ್ತು ಇತರ ಸೌಲಭ್ಯಗಳು ದೊರಕುವುದಿಲ್ಲ. ಕರ್ತವ್ಯ ಸಮಯದಲ್ಲಿ ಏನಾದರೂ ಅಪಘಾತವಾದಲ್ಲಿ ಕೋರಿಕಾ ಪ್ರಾಧಿಕಾರಿ ಅವರ ಖರ್ಚನ್ನು ಭರಿಸುತ್ತದೆ. ಗೃಹರಕ್ಷಕರ ಕ್ಷೇಮವನ್ನು ಕಾಪಾಡಲು ಗೃಹರಕ್ಷಕರ ಕ್ಷೇಮಾಭಿವೃದ್ಧಿ ನಿಧಿ ಕೂಡಾ ಲಭ್ಯವಿದೆ. ನಮ್ಮ ದೇಶದಲ್ಲಿ ಸುಮಾರು ಆರು ಲಕ್ಷ ಗೃಹರಕ್ಷಕರು ದೇಶದ 28 ರಾಜ್ಯ ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಷ್ಕಾಮ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 30 ಸಾವಿರ ಗೃಹರಕ್ಷಕರು ಕೆಲಸ ಮಾಡುತ್ತಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುಮಾರು 800 ಗೃಹರಕ್ಷಕರು ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಮ್ಮೆ ಇಲಾಖೆಗೆ ಸೇರಿದ ಬಳಿಕ 60 ವರ್ಷ ವಯಸ್ಸಿನ ವರೆಗೆ ಸೇವೆ ಮಾಡಲು ಅವಕಾಶವಿದೆ. ಅದೇನೇ ಇರಲಿ ನಮ್ಮ ದೇಶದ ಆರ್ಥಿಕ, ಸಾಮಾಜಿಕ, ಸಾಂಸ್ಕøತಿಕ, ನೈತಿಕ ಸರ್ವಾಂಗೀಣ ಬೆಳವಣಿಗೆಗೆ ಹಾಗೂ ಭದ್ರತೆಗೆ ಗೃಹರಕ್ಷಕ ದಳ ತನ್ನದೇ ಆದ ಅಳಿಲು ಸೇವೆ ಹಲವಾರು ದಶಕಗಳಿಂದ ಸಲ್ಲಿಸುತ್ತಾ ಬಂದಿದೆ. ಇಂತಹ ನಿಸ್ವಾರ್ಥ, ಪ್ರಾಮಾಣಿಕ, ದೇಶ ಪ್ರೇಮಿ, ನಿಷ್ಖಳಂಕ, ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರಿಗೆ ಗೃಹರಕ್ಷಕ ದಳದ ರೈಸಿಂಗ್ ದಿನದಂದು ಇರಲಿ ಒಂದು ಸಲಾಮ್…........  ಜೈಹಿಂದ್

ಡಾ|| ಮುರಲೀಮೋಹನ್ ಚೂಂತಾರು