ಕಾಡೆಲ್ಲಾ ಹುಡುಕಾಡಿದರೂ ಆ ಜಾಗ ಹುಡುಕುವ ಪ್ರಯತ್ನ ಮಾಡದೇ ಇದ್ದದ್ದು ಯಾಕೆ?
ಈಗ ಅಜ್ಜನ ಕಳೆಬರ ಸಿಕ್ಕಿದ್ದು ಹೇಗೆ?
ನಿಗೂಢವಾಗಿ ಕಾಣೆಯಾಗಿದ್ದ ವೃದ್ಧನ ಬಗ್ಗೆ ಜ್ಯೋತಿಷ್ಯರ ಮಾತು ನಿಜವಾಯಿತೇ?
ಕಳೆಬರ ಸಿಕ್ಕಿದ ಜಾಗಕ್ಕೆ ಇದೀಗ ಪೋಲೀಸರ ಆಗಮನ
ಸೆ.9ರಂದು ನಿಗೂಢವಾಗಿ ಕಾಣೆಯಾಗಿದ್ದ ದೇವಚಳ್ಳ ಗ್ರಾಮದ ಸೇವಾಜೆ ಬೆಳ್ಯಪ್ಪ ಗೌಡರ ಕಳೆಬರ ಪತ್ತೆಯಾಗಿದ್ದು, ಸ್ಥಳಕ್ಕೆ ಪೋಲೀಸರು ಆಗಮಿಸಿದ್ದಾರೆ. ಆದರೆ 3 ತಿಂಗಳಿನಿಂದ ತೀವ್ರ ಹುಡುಕಾಡ ನಡೆಸಿದ್ದರೂ ಬೆಳ್ಯಪ್ಪ ಗೌಡರ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಕಳೆಬರ ಪತ್ತೆಯಾದ ಸ್ಥಿತಿಯೂ ನಿಗೂಢತೆಯಿಂದ ಕೂಡಿದೆ.
ಬೆಳ್ಯಪ್ಪ ಗೌಡರ ಕಾಣೆಯಾದ ಬಗ್ಗೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಅವರ ಮಗ ಸುಬ್ರಹ್ಮಣ್ಯರವರು ದೂರನ್ನು ದಾಖಲಿಸಿದ್ದರು. ದೂರು ನೀಡುವ ಮೊದಲು ಮತ್ತು ನಂತರ ಊರಿನವರು ಸಂಘಸಂಸ್ಥೆಯವರು ಸೇರಿ ಸಮೀದ ಹೊಳೆ, ತೋಡು ಕಾಡು ಗುಡ್ಡ ಎಲ್ಲ ಕಡೆಯೂ ನಿರಂತರ ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ.
ಜ್ಯೋತಿಷ್ಯರ ಮೊರೆ :
ಬೆಳ್ಯಪ್ಪ ಗೌಡರ ಮಗ ಸುಬ್ರಹ್ಮಣ್ಯರು ಹಲವು ಕಡೆ ಜ್ಯೋತಿಷ್ಯರ ಮೊರೆ ಹೋಗಿದ್ದರು. ಆಗ ಅವರು ನಿಮ್ಮ ಮನೆಯ ಉತ್ತರ ದ ಕಡೆ ಹುಡುಕಿ ಎಂದು ಹೇಳಿದ್ದರು. ಹೀಗಾಗಿ ಅದೇ ಕಡೆ ಎರಡೆರಡು ಮೂರು ಮೂರು ಬಾರಿ ಹುಡುಕಿದ್ದರು. ಹಾಗಿದ್ದರೂ ಪತ್ತೆಯಾಗಿರಲೇ ಇಲ್ಲ. ಇದೀಗ ಅದೇ ಭಾಗದಲ್ಲಿ ಕಳೆಬರ ಪತ್ತೆಯಾದ ಕಾರಣ ಜ್ಯೋತಿಷ್ಯರ ಮಾತನ್ನು ಅಲ್ಲಗಲೆಯುವಂತಿಲ್ಲ ಎನ್ನಲಾಗಿದೆ.
ಕಳೆಬರ ಪತ್ತೆ
ಸುಬ್ರಹ್ಮಣ್ಯರ ಮನೆಯ ಪಕ್ಕದ ಉಮೇಶ ಹೊನ್ನೆಮೂಲೆಯವರ ಮನೆ ಇದೆ. ಇವರ ರಬ್ಬರ್ ತೋಟದ ಬದಿ ದಟ್ಟ ಪೊದೆಯೊಳಗೆ ಕಳೆಬರ ಪತ್ತೆಯಾಗಿದೆ. ಉಮೇಶರವರು ರಬ್ಬರ್ ಮಳೆಗಾಲದಲ್ಲಿ ರಬ್ಬರ್ ಟ್ಯಾಪಿಂಗ್ ಮಾಡಿರಲಿಲ್ಲ. ಹೀಗಾಗಿ ರಬ್ಬರ್ ತೋಟ ಕಾಡು ತುಂಬಿತ್ತು. ಇದನ್ನು ಲೀಸ್ ಗೆ ಕೊಡುವ ಉದ್ದೇಶದಿಂದ ಕಾಡು ಕಡಿಯಲು ಆರಂಬಿಸಿದ್ದರು. ರಬ್ಬರ್ ಒಂದು ಬದಿಯಿಂದ ಕಾಡು ಕಡಿಯುತ್ತಿದ್ದ ವೇಳೆ ಬೈರಾಸ್ ಒಂದು ಪತ್ತೆಯಾತು. ಅದರ ಸ್ವಲ್ಪ ಕೆಳಭಾಗದಲ್ಲಿ ಪೊದೆಯೊಳಗೆ ತಲೆಬುರುಡೆ ಕಂಡು ಬಂತು. ಬಳಿಕ ಕಾಡು ಕಡಿಯುತ್ತಿದ್ದವರು ಮನೆಯವರಿಗೆ ವಿಷಯ ತಿಳಿಸಿದರೆನ್ನಲಾಗಿದೆ.
ಮನೆಯವರು ಬಂದು ನೋಡಿದಾಗ ಬೈರಾಸ್ ಇದ್ದ ಭಾಗದಿಂದ ಸ್ವಲ್ಪ ಕೆಳಭಾಗದಲ್ಲಿ ಅಂಗಿ ಪೊದೆಗಂಟಿಗೆ ಸಿಲುಕಿಕೊಂಡಂತಿತ್ತು. ಅದರ ಸ್ವಲ್ಪ ಕೆಳಭಾಗದಲ್ಲಿ ದೇಹದ ಮೂಲೆ ಇನ್ನು ಸ್ವಲ್ಪ ಕೆಳಭಾಗದಲ್ಲಿ ತಲೆಬುರುಡೆ ಇತ್ತು. ಬೆಳ್ಯಪ್ಪ ಗೌಡರು ಮೃತಪಟ್ಟ ಬಳಿಕ ಯಾವುದಾದರೂ ಪ್ರಾಣಿಗಳು ಎಳೆದುಕೊಂಡು ಹೋಗಿರಬಹುದೆಂದು ಅಂದಾಜಿಸಲಾಗಿದೆ.
ಹುಡುಕಾಡಿದರೂ ಪತ್ತೆಯಾಗಿಲ್ಲ ಏಕೆ?
ಬೆಳ್ಯಪ್ಪ ಗೌಡರು ಕಾಣೆಯಾದ ಬಳಿಕ ನಿರಂತ ಹುಡುಕಾಟ ನಡೆಸಿದ್ದರು. ಈಗ ಕಳೆಬರ ಪತ್ತೆಯಾದ ಸ್ಥಳದ ವರೆಗೂ ಹುಡುಕಾಡಿದ್ದರು. ಆದರೆ ಈಗ ಕಳೆಬರ ಪತ್ತೆಯಾದ ಜಾಗ ತುಂಬಾ ಮುಳ್ಳಿನ ಪೊದೆಗಳು ತುಂಬಿದ ಕಾರಣ ಮತ್ತು ಬೆಳ್ಯಪ್ಪ ಗೌಡರು ಸರಿ ದಾರಿಯಲ್ಲಿಯೇ ನಡೆಯಲು ಅಸಕ್ತರಿದ್ದ ಕಾರಣ ಹಾಗೂ ಆ ಮುಳ್ಳಿನ ಪೊದೆಯೊಳಗೆ ಹೋಗಲು ಸಾಧ್ಯವೇ ಇಲ್ಲದ ಕಾರಣ ಮತ್ತು ಮೃತಪಟ್ಟ ಬಳಿಕ ಯಾವುದೇ ವಾಸನೆಯೂ ಬರುತ್ತಿರಲಿಲ್ಲವಾದ ಕಾರಣ ಆ ದಟ್ಟ ಮುಳ್ಳುನ ಪೊದೆಯ ಭಾಗದಲ್ಲಿ ಹುಡುಕಾಟವನ್ನು ಮಾಡಿರಲಿಲ್ಲ. ಇದೀಗ ಕಾಡು ಕಡಿಯುವಾಗ ಅಲ್ಲಲ್ಲಿ ಬಿದ್ದ ಕುರುಹುಗಳಿಂದ ಬೆಳ್ಯಪ್ಪ ಗೌಡರದ್ದೆ ಕಳೆಬರ ಎಂದು ದೃಢಪಡಿಸಲಾಗಿದೆ.
ಪೋಲೀಸರ ಆಗಮನ
ಬೆಳ್ಯಪ್ಪ ಗೌಡರ ಕಳೆಬರ ಪತ್ತೆಯಾದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೋಲೀಸರು ಸ್ಥಳಕ್ಕೆ ಬಂದಿದ್ದಾರೆ. ಹಾಗೂ ಫೋರೆನಿಕ್ಸ್ ತಜ್ಞರು ಸ್ಥಳಕ್ಕೆ ಬಂದ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದೆ.
ಆ ಜಾಗಕ್ಕೆ ಬರಲು ಬೆಳ್ಯಪ್ಪ ಗೌಡರಿಗೆ ಹೇಗೆ ಸಾಧ್ಯ :
ಬೆಳ್ಯಪ್ಪ ಗೌಡರ ಮನೆಯ ಉತ್ತರ ಭಾಗಕ್ಕೆ ಎತ್ತರದ ಗುಡ್ಡೆ ಇದೆ. ಮತ್ತು ಅವರದ್ದೆ ರಬ್ಬರ್ ತೋಟ ಇದೆ. ಬೆಳ್ಯಪ್ಪ ಗೌಡರ ಅದೇ ದಾರಿಯಲ್ಲಿ ಸುಮಾರು ಅರ್ಧ ಕಿ.ಮೀ. ಬಂದು ಉಮೇಶರವರ ರಬ್ಬರ್ ತೋಟದೊಳಗೆ ಬಂದು, ಉಮೇಶರವರ ರಬ್ಬರ್ ತೋಟದ ಬದಿಯಾಗಿ ಇಳಿಯಲು ಯತ್ನಿಸಿದ್ದಾರೆಯೇ? ಆ ಸಂದರ್ಭ ಅವರು ಅಲ್ಲಿಯೇ ಬಿದ್ದು ಮೃತಪಟ್ಟಿರಬಹುದೇ? ಬಳಿಕ ಪ್ರಾಣಿಗಳು ಇವರ ದೇಹದ ಭಾಗವನ್ನು ಎಳೆದೊಯ್ದಿರಬಹುದೇ ಎಂಬುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಒಟ್ಟಾಗಿ ಮೂರು ತಿಂಗಳ ಹಿಂದೆ ಕಾಣೆಯಾದ ಪ್ರಕರಣವೊಂದು ಅಂತ್ಯ ಕಂಡಂತಾಗಿದೆ.