ಕಾಮಗಾರಿ ಪೂರ್ಣಗೊಳ್ಳದ ಸುಳ್ಯದ ಅಂಬೇಡ್ಕರ್ ಭವನ, ದಲಿತರ ಜಾಗ ಒತ್ತುವರಿ ಮುಂತಾದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ
ಸುಳ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತಾಲೂಕು ಮಟ್ಟದ ಕುಂದು ಕೊರತೆ ಸಮಿತಿ ಸಭೆ ಡಿ ೨೨ ರಂದು ತಹಶೀಲ್ದಾರ್ ಮಂಜುಳಾ ರವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಕಳೆದ ಬಾರಿಯ ಸಭೆಯ ೬೧ ನಡವಳಿ ಪಾಲನೆಯ ಬಗ್ಗೆ ಗಂಭೀರ ಚರ್ಚೆಗಳು ನಡೆಯಿತು.
ಸಭೆಯ ಆರಂಭದಲ್ಲಿ ಕಲ್ಮಕಾರು ಗ್ರಾಮದ ಗುಳಿಕಾನ ಎಂಬಲ್ಲಿ ಪ್ರಕೃತಿ ವಿಕೋಪದಿಂದ ಗುಡ್ಡ ಕುಸಿತ ಉಂಟಾಗಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ನಿರಾಶ್ರಿತರಿಗೆ ನಿವೇಶನ ಒದಗಿಸಿದ ಸ್ಥಳವು ಅರಣ್ಯ ಇಲಾಖೆಯ ಆಕ್ಷೇಪಣೆಯಲ್ಲಿರುವುದರಿಂದ ಬದಲಿ ಸ್ಥಳವನ್ನು ಗುರುತಿಸುವ ಬಗ್ಗೆ ಕಳೆದ ಸಭೆಯಲ್ಲಿ ದಲಿತ ಮುಖಂಡ ಆನಂದ ಬೆಳ್ಳಾರೆ ಪ್ರಸ್ತಾಪಿಸಿದ ವಿಷಯಕ್ಕೆ ಚರ್ಚೆ ನಡೆದು ಇದಕ್ಕೆ ಉತ್ತರ ನೀಡಿದ ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿಗಳು ಕಂದಾಯ ಇಲಾಖೆಯಿಂದ ಸರ್ವೆನಂಬ್ರ
೧೦೩/೨ ರಲ್ಲಿ ೬೫.೭೬ ಎಕ್ರೆ
ಭಾಗ ಸುರಕ್ಷಿತ ಕಾಡು/ಗೋಮಾಳ/ಸಿ & ಡಿ ಲ್ಯಾಂಡ್ ಆಗಿದ್ದು
ಸರ್ವೆ ನಂ ೧೨೩/೧ ರಲ್ಲಿ ೦೬.೦೯ ಎಕ್ರೆ ೯ ಮಂದಿ ಪಲಾನುಭವಿಗಳಿಗೆ ಮಂಜೂರಾಗಿದ್ದು
ಸರ್ವೆ ನಂ ೧೨೩/೧ ರಲ್ಲಿ ೧೯.೬೮ ಎಕ್ರೆ ಭಾಗ ಸುರಕ್ಷಿತ ಕಾಡು/ಗೋಮಾಳ/ಸಿ & ಡಿ ಲ್ಯಾಂಡ್ ಹಾಗಿ ಒಟ್ಟು ೯೧.೫೩ ಎಕ್ರೆ ಜಾಗವಿರುತ್ತದೆ.
ಈ ಸರ್ವೆನಂಬ್ರದ ೯೧.೫೩ ಎಕ್ರೆ ಜಮೀನನ್ನು ವಿಂಗಡಣೆ ಪ್ರತ್ಯೇಕ ಪಹಣಿ ಮಾಡಿ ೦೯ ಮಂದಿಗೆ ಜಮೀನು ಮಂಜೂರಾತಿ ನೀಡುವ ಸಮಯದಲ್ಲಿ ಪಠ್ಯ ಇಲಾಖೆಯ ಅಭಿಪ್ರಾಯವನ್ನು ಪಡೆದಿರುವುದು ಕಂಡು ಬರುವುದಿಲ್ಲ.ಅಲ್ಲದೆ ಈ ಹಿಂದೆ ಕೊಲ್ಲಮೊಗ್ರು ಗ್ರಾಮದಲ್ಲಿ ಜರಗಿದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳವರು ಈ ಸ್ಥಳವನ್ನು ಎ.ಡಿ.ಎಲ್.ಆರ್. ಯವರಿಂದ ಮೋಜಣಿಗೆ ಒಳಪಡಿಸಿ ಇತ್ಯರ್ಥ ಮಾಡಲು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ದಲಿತ ಮುಖಂಡ ವಿಶ್ವನಾಥ್ ಅಲೆಕ್ಕಾಡಿಯವರು ‘ಮುರುಳ್ಳ ಗ್ರಾಮದ ಡಿ.ಸಿ ಮನ್ನಾ ಸ್ಥಳದಲ್ಲಿ ಮತ್ತು ಗ್ರಾಮ ಪಂಚಾಯತ್ ಕಛೇರಿ ಹಾಗೂ ಆಡಳಿತ ಕಛೇರಿಯ ೨೦೦ ಮೀಟರ್ ಅಂತರದಲ್ಲಿ ಎನ್.ಓ.ಸಿ ನೀಡಿದ ಬಗ್ಗೆ, ಹಾಗೂ ಡಿ.ಸಿ ಮನ್ನಾ ಭೂಮಿ ಖರೀದಿಸಿ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಅನಧಿಕೃತ ಕಟ್ಟಡದ ಕಾಮಗಾಗಿ ನಡೆಸಿರುವ ಬಗ್ಗೆ ಮತ್ತು,ಗುತ್ತಿಗಾರು ಗ್ರಾಮದ ಬಳ್ಳಕ್ಕೆ ಕುಮಾರ ರವರ ಕೃಷಿ ಭೂಮಿಯನ್ನು ಗ್ರಾಮ ಪಂಚಾಯತ್ ಹೆಸರಿಗೆ ಕಾದಿರಿಸಿದ ಜಾಗವೆಂದು ಅಧಿಕಾರಿಗಳು ಬಲತ್ಕಾರವಾಗಿ ನಾಶ ಮಾಡಿ ದ್ವಂಸ ಮಾಡಿರುವ ಬಗ್ಗೆ ಪಾಲನ ವರದಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಲತ್ಕಾರವಾಗಿ ಕೃಷಿ ನಾಶ ಮಾಡಿರುವುದಿಲ್ಲ ವೆಂದು ವರದಿ ನೀಡಿರುವ ಮತ್ತು ಮುರುಳ್ಯ ಗ್ರಾಮದ ಡಿ ಸಿ ಮನ್ನ ಸ್ಥಳದಲ್ಲಿ ಕಂದಾಯ ದಾಖಲೆಯಂತೆ ಯಾವುದೇ ರೀತಿಯ ಖರೀದಿ, ಮಾರಾಟ ಆಗಿರುವುದಿಲ್ಲ ಮತ್ತು ಎನ್ ಓ ಸಿ ನೀಡಿರುವ ಬಗ್ಗೆ ಜಾಗ ಸುಶೀಲಾ ರವರಿಗೆ ೧೯೮೨ ರಲ್ಲಿ ಡಿ ಸಿ ಮನ್ನ ಜಮೀನಿನಲ್ಲಿ ನಿವೇಶನಕ್ಕೆ ಮಂಜೂರು ಆಗಿದ್ದು ಸುಶೀಲಾರವರಿಂದ ರೂಪಾ ಕುಮಾರಿ ಎಂಬವರಿಗೆ ೨೦೧೫ ರಲ್ಲಿ ಕ್ರಯ ಪತ್ರವಾಗಿ ೯ ಮತ್ತು ೧೧ ಆಗಿ ಖಾತೆ ಬದಲಾವಣೆ ಆಗಿರುತ್ತದೆ. ಆದ್ದರಿಂದ ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ತಹಶೀಲ್ದಾರರು ಹೇಳಿದರು.
ಬಳಿಕ ಗುತ್ತಿಗಾರು ಗ್ರಾಮದ ಬಳ್ಳಕ್ಕ ಕುಮಾರವರ ಕೃಷಿ ಭೂಮಿಯನ್ನು ಗ್ರಾಮ ಪಂಚಾಯತಿಯರಿಗೆ ಕಾದಿರಿಸಿದ ಜಾಗವೆಂದು ಅಧಿಕಾರಿಗಳು ಬಲತ್ಕಾರವಾಗಿ ನಾಶಪಡಿಸಿ ದ್ವಂಶ ಮಾಡಿರುವ ಬಗ್ಗೆ ಪಾಲನಾ ವರದಿಯಲ್ಲಿ ಪುತ್ತೂರು ಸಹಾಯಕ ಆಯುಕ್ತರ ನಿರ್ದೇಶನದ ಮೇರೆಗೆ ಜಾಗದ ದಾಖಲೆಗಳನ್ನು ಪರಿಶೀಲಿಸಿ ಅದು ಸರ್ಕಾರದು ಎಂದು ತಿಳಿದು ಬಂದಾಗ ಕಂದಾಯ ಅಧಿಕಾರಿ ಮತ್ತು ಪೊಲೀಸ್ ಇಲಾಖೆಗಳು ಹಾಗೂ ಸಿಬ್ಬಂದಿಗಳ ಸಮಕ್ಷಮ ಜೆಸಿಬಿ ಮೂಲಕ ತೆರವುಗೊಳಿಸಿದ್ದೇವೆ ವಿನಹ ಬಲತ್ಕಾರವಾಗಿ ಕೃಷಿ ನಾಶ ಮಾಡಿರುವುದಿಲ್ಲ ಎಂಬ ಉತ್ತರವನ್ನು ಪಾಲನ ವರದಿಯಲ್ಲಿ ಕೇಳಿ ಆಕ್ರೋಶಗೊಂಡ ದಲಿತ ಮುಖಂಡರುಗಳು ಈ ರೀತಿಯ ಸುಮಾರು ಹತ್ತು ಎಕರೆ ಜಾಗ ಸುಬ್ರಹ್ಮಣ್ಯದಲ್ಲಿ ಇದೆ. ಅಲ್ಲಿ ವ್ಯಾಪಾರ ಮತ್ತು ಇನ್ನಿತರ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ ಅದನ್ನು ಏಕೆ ತೆರವುಗೊಳಿಸುವುದಿಲ್ಲ. ದಲಿತರು ಮತ್ತು ಅವರ ಜಾಗ ಎಂದರೆ ಯಾವ ಸಂದರ್ಭದಲ್ಲಿ ಬೇಕಾದ್ರೆ ಜೆಸಿಬಿ ಚಲಾಯಿಸಲು ನೀವು ಸಿದ್ಧರಾಗುತ್ತೀರಿ ಇದು ಏನು ಅರ್ಥ ಎಂದು ಕೇಳಿ ಆಕ್ರೋಶ ವ್ಯಕ್ತಪಡಿಸಿದರು.
ಸುಳ್ಯಕ್ಕೆ ಮೀಸಲಾತಿ ಬೇಡ ಅದನ್ನು ತೆಗೆಯಲು ಸರಕಾರಕ್ಕೆ ಮನವಿ ಮಾಡಿ
ಸುಳ್ಯ ವಿಧಾನ ಸಭಾ ಕ್ಷೇತ್ರ ಮೀಸಲಾತಿ ಇರುವ ಕಾರಣ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ದಲಿತರ ಮಾತಿಗೆ ಬೆಲೆ ಸಿಗುತ್ತಿಲ್ಲ. ಆದ್ದರಿಂದ ಮೊದಲು ಸುಳ್ಯವನ್ನು ಮೀಸಲಾತಿ ಕ್ಷೇತ್ರದಿಂದ ಕೈ ಬಿಡಲು ಸರಕಾರಕ್ಕೆ ಅಧಿಕಾರಿಗಳು ಹೇಳಿ ಎಂದು ಆನಂದ ಬೆಳ್ಳಾರೆ ಆಕ್ರೋಶ ವ್ಯಕ್ತ ಪಡಿಸಿದರು.
ಇದಕ್ಕೆ ಇತರ ದಲಿತ ಮುಖಂಡರುಗಳು ಮೀಸಲಾತಿ ತೆಗೆಯುವುದು ಬೇಡ ಆದರೆ ನಮ್ಮ ಕೆಲಸ ಕಾರ್ಯಗಳು ನಡೆಯಲಿ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ತಹಸೀಲ್ದಾರರು ಮೀಸಲಾತಿ ಬದಲಾವಣೆಯ ಬಗ್ಗೆ ಚರ್ಚಿಸುವ ಸಭೆ ಇದಲ್ಲ. ಇಂದಿನ ವಿಷಯಗಳು ಏನು ಅದರ ಬಗ್ಗೆ ಮಾತ್ರ ಚರ್ಚೆ ನಡೆಸೋಣ ಎಂದು ಸಭೆಯನ್ನು ಮುಂದುವರೆಸಿದರು.
ಕೆ ವಿ ಜಿ ಪುರಭವನ ಸರಿ ಪಡಿಸಿ
ಸುಳ್ಯದ ಬಡ ಜನತೆಗೆ ಮದುವೆ, ಇನ್ನಿತರ ಸಭೆ ಸಮಾರಂಭಕ್ಕೆ ಕೆ ವಿ ಜಿ ಪುರಭವನ ಒಂದು ಉತ್ತಮ ಸ್ಥಳವಾಗಿತ್ತು. ಇದೀಗ ಅಲ್ಲಿ ನೀರಿನ ಪೈಪ್ಗಳ ಗೋಡಾನ್ ಆಗೆ ಮಾಡಿದ್ದೀರಿ. ಅದರಿಂದ ಪಂಚಾಯತ್ ಗೆ ಸಣ್ಣ ಒಂದು ಆದಾಯ ಬರುತಿತ್ತು. ಅದನ್ನು ಕೂಡ ಇಲ್ಲದಾಗೆ ಮಾಡಿದ್ದೀರಿ. ಇದರ ಅರ್ಥ ಏನು? ಅಧಿಕಾರಿಗಳಿಗೆ ಒಂದು ಕಟ್ಟಡವನ್ನು ಉಳಿಸಿಕೊಳ್ಳಲು ಸಾಧ್ಯವಾಗುತಿಲ್ಲ ಏಕೆ ಎಂದು ನಂದರಾಜ್ ಸಂಕೇಶ್ ಅಧಿಕಾರಿಗಳನ್ನು ಕೇಳಿದರು.
ಈ ವೇಳೆ ನ. ಪಂ ಮುಖ್ಯಅಧಿಕಾರಿ ಸುಧಾಕರ್ ಉತ್ತರಿಸಿ ಈ ಬಗ್ಗೆ ನಮ್ಮ ಪಂಚಾಯತ್ ಸಭೆಯಲ್ಲಿ ಚರ್ಚೆಗಳು ನಡೆದಿದೆ. ಶೀಘ್ರದಲ್ಲಿ ಅದರ ದುರಸ್ಥಿ ಕಾರ್ಯ ನಡೆಯುತ್ತದೆ ಎಂದು ಹೇಳಿದರು.
ಸೋಣಂಗೇರಿ ವೃತ್ತಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ಇಡುವ ಕುರಿತು ಚರ್ಚೆ
ಜಾಲ್ಸೂರು ಗ್ರಾಮದ ಸೋಣಂಗೇರಿ ಸರ್ಕಲ್ ನಲ್ಲಿ ಡಾ.ಬಿ ಆರ್ ಅಂಬೇಡ್ಕರ್ ವೃತ್ತ ಹೆಸರನ್ನು ಇಡುವ ಕುರಿತು ನಡೆದ ಚರ್ಚೆಯ ಬಗ್ಗೆ ಪಾಲನ ವರದಿಯಲ್ಲಿ ರಸ್ತೆಗಳ ವೃತಕ್ಕೆ ಹೆಸರು ನೀಡುವ ನಿಯಮ ತಾಲೂಕು ಆಡಳಿತಕ್ಕೆ ಇಲ್ಲ. ಸಂಬಂಧಪಟ್ಟ ಗ್ರಾಮ ಅಥವಾ ನಗರ ಆಡಳಿತಕ್ಕೆ ಇರುತ್ತದೆ ಅವರು ಆ ಕ್ರಮವನ್ನು ಕೈಗೊಳ್ಳಬೇಕೆಂದು ತಹಶೀಲ್ದಾರರು ಹೇಳಿದರು.
ಇದೇ ಸಂದರ್ಭದಲ್ಲಿ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ರವರು ಮಾತನಾಡಿ ಅಲ್ಲಿ ಬೇರೆ ಬೇರೆ ಸಂಘಟನೆಗಳು ಇರುವ ಕಾರಣ ಬೇರೆ ಬೇರೆ ಚರ್ಚೆಗಳನ್ನು ಮಾಡಿರುತ್ತಾರೆ.ಆದ್ದರಿಂದ ನಾವುಗಳು ಯಾವುದೇ ನಿರ್ಣಯವನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಗ್ರಾಮ ಮಟ್ಟದಲ್ಲಿ ಚರ್ಚೆ ನಡೆಯಲಿ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಆನಂದರವರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಈ ದೇಶಕ್ಕೆ ಸಂವಿಧಾನವನ್ನು ನೀಡಿದವರು. ನಾವು ನಮ್ಮ ಫೋಟೋ ಅಥವಾ ನಮ್ಮ ಹೆಸರಿನ ವೃತ್ತವನ್ನು ಮಾಡಲು ಹೇಳುತ್ತಿಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹೆಸರನ್ನು ಹೇಳುತ್ತಿದ್ದೇವೆ ಅದನ್ನು ಮಾಡಲೇಬೇಕು. ಇಲ್ಲದಿದ್ದರೆ ಅದು ಮಾಡದಿದ್ದರೆ ಬೇರೆ ಯಾವುದನ್ನು ಕೂಡ ಯಾರಿಗೂ ಮಾಡಲು ನಾವು ಬಿಡುವುದಿಲ್ಲ.
ಗ್ರಾಮ,ನಗರಗಳಲ್ಲಿ ಬೇರೆ ಬೇರೆ ಹೆಸರುಗಳ ವೃತ್ತಗಳು ರಸ್ತೆಗಳು ಇದೆ.ನಾವು ಯಾವುದಕ್ಕೂ ಅಡ್ಡಿಪಡಿಸಿಲ್ಲ. ಆದ್ದರಿಂದ ಏಪ್ರಿಲ್ ೧೪ರ ಒಳಗೆ ಆ ಕೆಲಸ ಕಾರ್ಯಗಳು ಮುಗಿಸಬೇಕು ಇಲ್ಲದಿದ್ದರೆ ನಾವು ಅಲ್ಲಿ ಪ್ರತಿಭಟನೆ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಾವೇರಿದ ಸುಳ್ಯ ಅಂಬೇಡ್ಕರ್ ಭವನದ ಚರ್ಚೆ
ಸುಳ್ಳದ ಅಂಬೇಡ್ಕರ್ ಭವನ ನಿರ್ಮಾಣದ ಕಾಮಗಾರಿಯ ಕುರಿತು ಚರ್ಚೆಗಳು ನಡೆದು ಆಕ್ರೋಶಗೊಂಡ ನಂದರಾಜ್ ಸಂಕೇಶ್ ಇದು ಸುಳ್ಯದ ಒಂದು ದುರದೃಷ್ಟಕರ ಸಂಗತಿಯಾಗಿದೆ. ಕಳೆದ ೧೫ ವರ್ಷಗಳಿಂದ ಈ ಒಂದು ಕಾಮಗಾರಿ ಕುಂಟುತ್ತಲೆ ಸಾಗುತ್ತಿದೆ.ಪ್ರಸ್ತುತ ಸಂಧರ್ಭದಲ್ಲಿ ಅದು ಒಂದು ಅನೈತಿಕ ಚಟುವಟಿಕೆಯ ಕೇಂದ್ರ ವಾಗಿದೆ.
ಒಂದು ಭವನಕ್ಕಾಗಿ ನಿರಂತರ ಹೋರಾಟ ಮಾಡುವ ದುಃಸ್ಥಿತಿ ನಮಗೆ ಬಂದಿದೆ.ಇದರ ಬಗ್ಗೆ ಆಲೋಚನೆ ಮಾಡಿದಾಗ ತುಂಬಾ ನೋವು ತರುತ್ತದೆ. ಇದೀಗ ಅಂಬೇಡ್ಕರ್ ಭವನವನ್ನು ಹಣ ಮಾಡುವ ಯಂತ್ರವಾಗಿ ಬದಲಾಯಿಸುತ್ತಿದ್ದಾರೆ. ಲೋಕಾಯುಪಯೋಗಿ ಇಲಾಖೆಗೆ ಇದನ್ನು ಹಸ್ತಾಂತರಿಸಲು ಕಾರಣವೇ ಹಣ ಕಮಿಷನ್ ಒಡೆಯಲು ಎಂದು ಆರೋಪ ವ್ಯಕ್ತಪಡಿಸಿದ್ದರು. ಶಾಸಕರು ಕೇವಲ ಪತ್ರಿಕಾ ಪ್ರಕಟಣೆ ನೀಡಿದರೆ ಮಾತ್ರ ಭವನ ನಿರ್ಮಾಣ ಆಗುದಿಲ್ಲ. ಒಂದೇ ಹಂತದಲ್ಲಿ ಕಟ್ಟಲು
ಸಾಧ್ಯವಾಗದೆ ಇದ್ದರೆ ಒಂದು ಅಂತಸ್ತನ್ನಾದರೂ ಸರಿ ಮಾಡಿ ಕೊಡಲಿ. ಮತ್ತೆ ನಿಧಾನಕ್ಕೆ ಬಾಕಿ ಕಾಮಗಾರಿ ಮಾಡಲಿ.
ಅದನ್ನು ಬಿಟ್ಟು ಕೋಟಿ ಕೋಟಿ ಬೇಕೆಂದು ಕೂತರೆ ಭವನ ಆಗುವುದೂ ಇಲ್ಲ. ನೋಡುವ ಭಾಗ್ಯ ನಮಗೆ ಬರುಹುದೂ ಇಲ್ಲ ಎಂದು ಆನಂದ ಬೆಳ್ಳಾರೆ ಹೇಳುದರು.
ಇನ್ನೂ ಇದರ ಕುರಿತು ನಾವು ಇಲ್ಲಿ ಚರ್ಚೆ ಮಾಡುವುದಿಲ್ಲ ಸಂಬಂಧಪಟ್ಟ ಸಚಿವರ ಬಳಿಯೇ ನಾವು ತೆರಳಿ ಇದಕ್ಕೆ ಬೇಕಾದ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ಅಂಬೇಡ್ಕರ್ ನಿಗಮದ ಅಧಿಕಾರಿಯ ಬಗ್ಗೆ ಚರ್ಚೆ ನಡೆದು ಆ ಅಧಿಕಾರಿ ಯಾರು? ಅವರ ವಿಳಾಸ ಏನು?ಅವರ ಫೋನ್ ನಂಬರ್ ಏನು? ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ಮುಖಂಡರುಗಳು ಪ್ರಶ್ನಿಸಿದ ಪ್ರಸಂಗವೂ ನಡೆಯಿತು.
ಈ ವೇಳೆ ತಹಶೀಲ್ದಾರ್ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿ ಪ್ರತೀ ತಿಂಗಳ ಒಂದು ದಿನ ಅಂಬೇಡ್ಕರ್ ನಿಗಮದ ಅಧಿಕಾರಿ ಸುಳ್ಯ ಕಚೇರಿಗೆ ಬರುವಂತೆ ಮಾಡಿ ಎಂದು ಸೂಚನೆ ನೀಡಿದರು.
ಕೆ ಎಸ್ ಆರ್ ಟಿ ಸಿ ನಿಲ್ದಾಣದಲ್ಲಿ ಮಳಿಗೆ ಮತ್ತು ಬಸ್ಸ್ ಕುರಿತು
ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದಲ್ಲಿ ಎಸ್ಸಿ ಎಸ್ಟಿ ಮೀಸಲಾತಿಯಲ್ಲಿ ಸ್ಟಾಲ್ ನೀಡಿರುವ ಕುರಿತು ಚರ್ಚೆ ನಡೆದಾಗ ಉತ್ತರಿಸಿದ ಕೆ ಎಸ್ ಆರ್ ಟಿ ಸಿ ವಿಭಾಗದ ಡಿಪೋ ಸಹ ಅಧಿಕಾರಿ ೨ ಸ್ಟಾಲ್ ಗಳನ್ನು ಎಸ್ಸಿ ಎಸ್ಟಿ ಪಂಗಡದವರಿಗೆ ನೀಡಿದ್ದೇವೆ ಎಂದರು. ಅದರಲ್ಲಿ ಅವರೇ ವ್ಯಾಪಾರ ಮಾಡುತ್ತಿದ್ದಾರಾ ಎಂದು ತಹಸೀಲ್ದಾರ್ ಕೇಳಿದಾಗ ಇಲ್ಲ. ಬೇರೆಯವರು ನಡೆಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು.
ಇದಕ್ಕೆ ತಹಶೀಲ್ದಾರ್ ರವರು ಅದು ಹಾಗೆ ಬೇರೆಯವರಿಗೆ ಕೊಡಬಹುದೇ. ಆಗಾದರೆ ದಲಿತ ಸಮುದಾಯದವರು ಸ್ವ ಉದ್ದಿಮೆ ಮಾಡಿ ಮುಂದೆ ಬರುಹುದು ಹೇಗೆ ಎಂದು ಕೇಳಿದರು.ಅದಕ್ಕೆ ಅವರ ಉತ್ತರ ಮೌನ ವಾಗಿತ್ತು.
ಗ್ರಾಮೀಣ ಭಾಗಕ್ಕೆ ಸುಳ್ಯ ಬಸ್ಸು ನಿಲ್ದಾಣದಿಂದ ಸರಿಯಾಗಿ ಬಸ್ಸು ಗಳೇ ಇಲ್ಲ. ಇದ್ದರು ಆದರ ರೂಟ್ ಬೋರ್ಡ್ ಮುಂದೆ ಮಾತ್ರ ಇರುತ್ತೆ. ಹಿಂದೆ ಇರುವುದೇ ಇಲ್ಲ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತೆ ಎಂದರು.
ಈ ವೇಳೆ ಸರಸ್ವತಿ ಬೊಳಿಯ ಮಜಲು ಮಾತನಾಡಿ ಬಸ್ಸಿನಲ್ಲಿ ಅಂಗವಿಕಲರಿಗೆ ಎಂದು ಸೀಟ್ ಕಾದಿರಿಸಿರುತ್ತಾರೆ. ಆದರೆ ಅದನ್ನೇ ಬಸ್ಸಿನವರು ಬೇರೆಯವರಿಗೆ ರಿಜರ್ವೇಷನ್ ಟಿಕೆಟ್ ನಲ್ಲಿ ಕೊಡುತ್ತಾರೆ. ಈ ಪದ್ಧತಿ ನಿಲ್ಲಿಸಬೇಕು ಎಂದು ಕೇಳಿದರು.
ಪೊಲೀಸ್ ಇಲಾಖೆ
ಪೊಲೀಸ್ ಇಲಾಖೆಗೆ ಸಂಭಂದಿಸಿದ ಚರ್ಚೆಯಲ್ಲಿ ಪ್ರತಿ ತಿಂಗಳಿಗೊಮ್ಮೆ ಪೋಲೀಸ್ ಠಾಣೆಗಳಲ್ಲಿ ಜನಸಂಪರ್ಕ ಸಭೆ ಕರೆಯುವುದು ಹಾಗೂ ಬೀಟ್ ಪೋಲೀಸ್ ಸಭೆ ನಡೆಸುವ ಬಗ್ಗೆ ನಂದರಾಜ್ ಸಂಕೇಶ ಹಾಗೂ ಆನಂದ ಬೆಳ್ಳಾರೆಯವರು ಪ್ರಸ್ತಾಪಿಸಿದ್ದ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಎಸ್ ಐ ಸರಸ್ವತಿ ಬಿ ಟಿ ಮಾತನಾಡಿ
ಪ್ರತಿ ತಿಂಗಳು ಜನಸಂಪರ್ಕ ಸಭೆಯನ್ನು ಠಾಣೆಗಳಲ್ಲಿ ಮತ್ತು ಗ್ರಾಮಗಳಲ್ಲಿ ನಡೆಸಲಾಗುವುದು. ಆದರೆ ಠಾಣೆಗಳಲ್ಲಿ ಸಭೆ ಯಶಸ್ವಿಯಾದರೆ ಗ್ರಾಮದಲ್ಲಿ ಕೆಲವು ಭಾರಿ ಎರಡೋ ಮೂರೋ ಜನ ಬರ್ತಾರೆ.ಹಾಗೂ ಬೀಟ್ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ಆಯಾ ಗ್ರಾಮ ಬೀಟ್‌ನಲ್ಲಿ ತಪ್ಪದೇ ಬೀಟ್ ಪೋಲೀಸ್ ಸಭೆ ನಡೆಸುವಂತೆ ಸೂಚಿಸಿದ್ದೇವೆ.
ಅಲ್ಲದೇ ಪೊಲೀಸ್ ಇಲಾಖೆಯಿಂದ ಸಮುದಾಯದ ಜನತೆಗೆ ನೀಡುವ ವಿಶೇಷ ಸೂಚನೆ ಏನೆಂದರೆ ಅತ್ಯಂತ ಹೆಚ್ಚಾಗಿ ಪೋಸ್ಕೊ ಪ್ರಕರಣ ದಲಿತ ಸಮುದಾಯದ ಮಕ್ಕಳಲ್ಲಿ ಹೆಚ್ಚಾಗಿ ನಡೆಯುತ್ತದೆ. ಇದಕ್ಕೆ ಕಾರಣ ಮಕ್ಕಳು ಶಾಲೆಯಿಂದ ಹೊರ ಉಳಿಯುವುದು ಮತ್ತು ಪೋಷಕರು ಮನೆಯಲ್ಲಿ ಇರದೇ ಇರುವುದು. ಆದ್ದರಿಂದ ಮಕ್ಕಳು ಶಾಲೆಗೆ ಕಡ್ಡಾಯವಾಗಿ ಹೋಗುವಂತೆ ಪೋಷಕರು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಮಾತನಾಡಿದ ಮೋನಪ್ಪ ಮಂಡೆಕ್ಕೋಲು ಪೊಲೀಸರು ಗ್ರಾಮಗಳಲ್ಲಿ ಸಭೆ ನಡೆಸುವಾಗ ಕೇವಲ ಇಬ್ಬರೋ ಮೂವರಿಗೋ ಹೇಳಿರುತ್ತೀರಿ. ಕಳೆದ ಹಲವು ತಿಂಗಳುಗಳಿಂದ ನನಗೆ ಯಾವುದೇ ಸಭೆಯ ಮಾಹಿತಿ ಬರಲಿಲ್ಲ. ಹಾಗೆ ಮಾಡಿದರೆ ಸಭೆಯ ಪ್ರಯೋಜನ ಏನು ಎಂದು ಕೇಳಿದರು. ಅಲ್ಲದೆ ಕೆಲವು ಪೋಸ್ಕೊ ಪ್ರಕರಣ ರಾಜಿಯಲ್ಲಿ ಮುಗಿಯುವುದೂ ಉಂಟು. ಆಗಾದರೆ ತಪ್ಪು ಮಾಡಿದವರಿಗೆ ಶಿಕ್ಷೆ ಇಲ್ಲವೇ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಎಸ್ ಐ ಪೋಸ್ಕೊ ಪ್ರಕರಣ ರಾಜಿಯಲ್ಲಿ ಮುಗಿಯುವಂತದ್ದು ಅಲ್ಲ. ಆ ರೀತಿಯ ಘಟನೆ ನಮ್ಮಲ್ಲಿ ಆಗಿಯೂ ಇಲ್ಲ ಎಂದರು.
ಮಕ್ಕಳು ಶಾಲೆಯಿಂದ ಹೊರಗೆ ಇರುವ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ ಬಾಲಕೃಷ್ಣ ಮರ್ಕಂಜ ‘ಶಾಲೆಗಳಲ್ಲಿ ಮೊದಲೇ ಶಿಕ್ಷಕರು ಕಡಿಮೆ ಇರುತ್ತಾರೆ. ಅದರಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆ ತರಲು ಶಾಲೆಯಲ್ಲಿ ಇರುವ ಶಿಕ್ಷಕರು ಹೋದರೆ ಅಲ್ಲಿ ಇರುವ ಮಕ್ಕಳಿಗೆ ಪಾಠ ಹೇಳಿ ಕೊಡುವವರು ಯಾರು ಎಂದು ಪ್ರಶ್ನೆ ಮಾಡಿದರು.ಅದಕ್ಕೆ ಬದಲಾಗಿ ಒಂದು ನಿರ್ದಿಷ್ಟ ದಿನ ಮತ್ತು ಅಧಿಕಾರಿಗಳು ಶಾಲೆಗೆ ಬರದ ಮಕ್ಕಳ ಮನೆಗೆ ತೆರಳಿ ಅವರನ್ನು ಶಾಲೆಗೆ ಬರುವಂತೆ ಮಾಡಿದರೆ ಒಳ್ಳೆಯದು ಎಂದು ಸಲಹೆ ನೀಡಿದರು.
ಗುತ್ತಿಗಾರು ಗ್ರಾಮದ ದೇವಸ್ಯ ಬಳಿ ೦೪ ಪರಿಶಿಷ್ಟ ಜಾತಿ ಸಮುದಾಯದ ಮನೆಗಳಿಗೆ ನೀರಿನ ಸಂಪರ್ಕ ಇಲ್ಲದೇ ಇರುವ ಮತ್ತು ನೀರಿನ ಸಂಪರ್ಕ ಒದಗಿಸಿಕೊಡುವ ಕುರಿತು ಪರಮೇಶ್ವರ ಕೆಂಬಾರೆ ರವರು ಮಾಡಿದ್ದ ಮನವಿ ಬಗ್ಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಪಾಲನ ವರದಿಗೆ ಸುಳ್ಳು ಹೇಳಿದ್ದಾರೆ. ಅಲ್ಲಿ ಯಾವುದೇ ನೀರಿನ ಸಂಪರ್ಕ ಕಲ್ಪಿಸಿಕೊಡಲಾಗಿಲ್ಲ ಎಂದು ಅಧಿಕಾರಿಗಳಲ್ಲಿ ಆಕ್ರೋಶಗೊಂಡರು.
ಇದಕ್ಕೆ ತಹಶೀಲ್ದಾರರು ನೀರು ಸರಬರಾಜು ಇಲಾಖೆಯ ಅಧಿಕಾರಿಗೆ ಸೂಚನೆನೀಡಿ ಈ ಬಗ್ಗೆ ಸತ್ಯ ಸತ್ಯತೆಯ ವರದಿ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ಉಬರಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮ ಲತಾ ರವರು ನಮ್ಮ ಗ್ರಾಮದಲ್ಲಿ ಎಸ್ಟಿ ಸಮುದಾಯದ ಮಲೆಕುಡಿಯ ಜನಾಂಗದ ಕೆಲವು ಮನೆಗಳು ಇದ್ದು ಈ ಪ್ರದೇಶಕ್ಕೆ ರಸ್ತೆ ಸಂಪರ್ಕ ಸರಿಯಾಗಿ ಇಲ್ಲದೆ ಸಮಸ್ಯೆಯಲ್ಲಿದ್ದಾರೆ ಕೂಡಲೇ ಸರಿ ಪಡಿಸಿಕೊಡುವಂತೆ ಕೇಳಿ ಕ್ಕೊಂಡರು.
ಸುಳ್ಯ ಹಾಗೂ ಅಜ್ಜಾವರ ಗ್ರಾಮದ ಸಂಪರ್ಕದ ದೊಡ್ಡೇರಿ ತೂಗುಸೇತುವೆಯ ತಡೆ ಬೇಲಿ ಮುರಿದು ಜನ ಸಾಮಾನ್ಯರು ಮತ್ತು ಮಕ್ಕಳಿಗೆ ನಡೆದಾಡಲು ಸಮಸ್ಯೆ ಆಗಿದ್ದು ಅದನ್ನು ಕೂಡಲೇ ದುರಸ್ಥಿ ಪಡಿಸಿ ಕೊಡುವಂತೆ ಬಾಲಕೃಷ್ಣ ದೊಡ್ಡೇರಿ ಅಗ್ರಹಿಸಿದರು.
ಸ್ಮಶಾನದ ಜಾಗವನ್ನು ಒತ್ತುವರಿ ಮಾಡಲಾಗುತ್ತಿದೆ ಕೂಡಲೇ ಕ್ರಮ ಕೈಗೊಳ್ಳ ಬೇಕೆಂದು ಸತೀಶ್ ಬೂಡು ಮಕ್ಕಿ ಸಭೆಯಲ್ಲಿ ಅಗ್ರಹಿಸಿದರು.
ವೇದಿಕೆಯಲ್ಲಿ ಸಿ ಇ ಓ ರಾಜಣ್ಣ, ಸಮಾಜ ಕಲ್ಯಾಣ ಅಧಿಕಾರಿ ಉಮಾ ದೇವಿ ಉಪಸ್ಥಿತರಿದ್ದರು.
ಉಮಾ ದೇವಿ ಸ್ವಾಗತಿಸಿ ರಾಜಣ್ಣ ವಂದಿಸಿದರು.
ಸಭೆಯಲ್ಲಿ ತಾಲೂಕು ಆರೋಗ್ಯಧಿಕಾರ ಡಾ. ಸುಳ್ಯ ಮತ್ತು ಸುಬ್ರಮಣ್ಯ ವಲಯ ಅರಣ್ಯಧಿಕಾರಿಗಳು,ಕ್ಷೇತ್ರ ಶಿಕ್ಷಣಾ ಧಿಕಾರಿ ,ಎ ಡಿ ಎಲ್ ಆರ್, ಸಾರಿಗೆ ಇಲಾಖೆ, ನಗರ ಪಂಚಾಯತ್ ಮುಖ್ಯ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.