ಸುಬ್ರಹ್ಮಣ್ಯದಲ್ಲಿ ಡಿ.27 ರಿಂದ ಮೂರು ದಿನ ವಿಶ್ವ ಹೃದಯ ಸಮ್ಮೇಳನ ೨೦೨೪

0

ಸಂತರ ಸಮಾಗಮ, ಸಂಸ್ಥಾನ ಪೂಜಾ, ಧನ್ಯತಾ ಪುರಸ್ಕಾರ, ಆಶೀರ್ವಚನ


ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಟ್ರಸ್ಟ್ ಬೆಂಗಳೂರು ಇದರ ಆಶ್ರಯದಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ವಿಶ್ವ ಹೃದಯ ಸಮ್ಮೇಳನ ೨೦೨೪ ಮೂರು ದಿನಗಳ ಕಾಲ ನಡೆಯಲಿದೆ. ಸಮ್ಮೇಳನದಲ್ಲಿ ವಿವಿಧ ಸಂತರಿಂದ ಆಶೀರ್ವಚನ, ಸಂಸ್ಥಾನ ಪೂಜಾ, ಗುರುಪೂಜಾ, ಭಜನೆ, ಧ್ಯಾನ, ಸತ್ಸಂಗ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ.ಸರ್ವರನ್ನೂ ಸಮ್ಮೇಳನಕ್ಕೆ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ ಎಂದು ಡಿ.23 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಟ್ರಸ್ಟ್‌ನ ಕಾರ್ಯದರ್ಶಿ ಸತ್ಯನಾರಾಯಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪಾದಯಾತ್ರೆ


ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದಿಂದ ಸಿದ್ಧಿ ಯೋಗ ಮಾಡಿದ ಸ್ವಯಂಸೇವಕರು ಮಂಗಳೂರಿನ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಶಾಖೆಯಿಂದ ಡಿ.23 ರಂದು ಪಾದಯಾತ್ರೆ ಆರಂಭಿಸಿದ್ದಾರೆ.ಇವರು 25ರಂದು ಸುಬ್ರಹ್ಮಣ್ಯಕ್ಕೆ ತಲುಪಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಆರೋಗ್ಯ ಸಮೃದ್ಧಿಗಾಗಿ ಪಾದಯಾತ್ರೆಯನ್ನು ಇವರು ಕೈಗೊಳ್ಳುತ್ತಿದ್ದಾರೆ.ಮಾನಸಿಕ ನೆಮ್ಮದಿ, ಪರಿಸರ ಅಧ್ಯಯನ ಮತ್ತು ಆರೋಗ್ಯ ಸಮೃದ್ಧಿಯ ದೃಷ್ಠಿಯಿಂದ ಸುಮಾರು ೧೦೦ ಮಂದಿ ಪಾದಯಾತ್ರೆಯನ್ನು ಮಂಗಳೂರಿನಿಂದ ಆರಂಭಿಸಿದ್ದಾರೆ ಎಂದರು.

ಸರ್ವಧರ್ಮ ಸಮಭಾವ:


ಸರ್ವ ಧರ್ಮ ಸಮಭಾವ ಎಂಬ ಧ್ಯೇಯ ವ್ಯಾಖ್ಯೆಯೊಂದಿಗೆ ವಿಶ್ವ ಹೃದಯ ಸಮ್ಮೇಳನ ನಡೆಯಲಿದೆ. ಆಧ್ಯಾತ್ಮಿಕ ಚಿಂತನೆಗಾಗಿ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಸಮ್ಮೇಳನ ನಡೆಯಲಿದೆ.ಸಮ್ಮೇಳನದಲ್ಲಿ ವಿವಿಧ ಸ್ವಾಮೀಜಿಗಳು, ಯತಿಗಳು, ಸಂತರು, ವಿದ್ವಾಂಸರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಸುಮಾರು ೧೦೦೦ ಮಂದಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದವರು ಮಾಹಿತಿ ತಿಳಿಸಿದರು.

ತ್ರ್ರಿದಿನ ಸಮ್ಮೇಳನ


ಡಿ.೨೭ರಂದು ಶುಕ್ರವಾರ ಉದ್ಘಾಟನಾ ಸಮಾರಂಭದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಹೊಸದುರ್ಗದ ಸದ್ಗುರು ಸೇವಾಶ್ರಮದ ಶ್ರೀ ಶ್ರೀಕಂಠಾನಂದ ಸರಸ್ವತಿ ಮಹರಾಜ್, ಶಿವಮೊಗ್ಗದ ಸದ್ಗುರು ಶ್ರೀಸತ್ ಉಪಾಸಿ ದಿವ್ಯಾಶ್ರಮದ ಶ್ರೀ ಬ್ರಹ್ಮಾನಂದ ತೀರ್ಥ ಬಿಕ್ಷುರವರು, ಹಿರಿಯೂರು ಶ್ರೀ ದತ್ತಾಶ್ರಮದ ಶ್ರೀ ಸುಬೊಧಾನಂದ ಸ್ವಾಮೀಜಿಯವರು, ಬೆಂಗಳೂರಿನ ಲಲಿತ ಮಂದಿರದ ಶ್ರೀಕಂಠ ಗುರೂಜಿ, ಆಶೀರ್ವಚನ ನೀಡಲಿದ್ದಾರೆ.ಸಮಾರಂಭದ ಅಧ್ಯಕ್ಷತೆಯನ್ನು ದೊಡ್ಡಮರಳವಾಡಿಯ ಶ್ರೀ ಮಾತಾ ಅನ್ನಪೂರ್ಣೇಶ್ವರಿ ಋಷಿ ತಪೋಕ್ಷೇತ್ರದ ಧರ್ಮಾಧಿಕಾರಿ ಪಿ.ಜಿ.ಆರ್.ಸಿಂಧ್ಯಾ ವಹಿಸಲಿದ್ದಾರೆ.ಸುಬ್ರಹ್ಮಣ್ಯ ಮಠದ ದಿವಾನ ಸುದರ್ಶನ ಜೋಯೀಸ ಮುಖ್ಯ ಅತಿಥಿಗಳಾಗಿದ್ದಾರೆ.ಬಳಿಕ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದ ಸಿದ್ಧಿ ಯೋಗ ಚಟುವಟಿಕೆಯ ಬಗ್ಗೆ ವಿಮರ್ಶೆ ನಡೆಯಲಿದೆ.ಈ ಮೊದಲು ಅನ್ನಪೂರ್ಣೇಶ್ವರಿ ಆರತಿ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ. ಸಂಜೆ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶಿತವಾಗಲಿದೆ ಎಂದು ಹೇಳಿದರು.

ರಾಧಾಕೃಷ್ಣ ನೃತ್ಯ:


ಡಿ.೨೮ರಂದು ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಶ್ರೀ ಪ್ರವೀಣ್ ಗುರೂಜಿ ಹಾಸನ, ಬೆಂಗಳೂರಿನ ಶ್ರೀ ಲಲಿತ ವಿದ್ಯಾಮಂದಿರದ ಶ್ರೀ ಶ್ರೀಕಂಠೇಶ್ವರ ಗುರೂಜಿ, ಚಲನಚಿತ್ರ ನಟ ಡಾ.ಶ್ರೀಧರ್ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಮಠದ ದಿವಾನ ಸುದರ್ಶನ ಜೋಯೀಸ ವಹಿಸಲಿದ್ದಾರೆ.ಸಂಜೆ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ರಾಧಾಕೃಷ್ಣ ನೃತ್ಯ ಮತ್ತು ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.

ಧನ್ಯತಾ ಪುರಸ್ಕಾರ:


ಡಿ.೨೯ರಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಂದ ಆಶೀರ್ವಚನ ಮತ್ತು ಸಂಸ್ಥಾನ ಪೂಜಾ ನೆರವೇರಲಿದೆ.ಅಲ್ಲದೆ ಈ ದಿನ ಶಿವಮೊಗ್ಗದ ಶ್ರೀ ಬಾಲಜ್ಞಾನಿ ಶಾಮಶಂಕರ್ ಭಟ್ಟ ಭಾಗವಹಿಸಲಿದ್ದಾರೆ.ಸಮಾರಂಭದಲ್ಲಿ ಪೇಜಾವರ ಶ್ರೀಗಳಿಗೆ ಧನ್ಯತಾ ಪುರಸ್ಕಾರ ಪ್ರಧಾನ ಮಾಡಲಾಗುವುದು ಅಲ್ಲದೆ ಶ್ರೀಗಳ ಪಾದಪೂಜೆ, ಪುಷ್ಪವೃಷ್ಠಿ ನಡೆಯಲಿದೆ.ಸಂಜೆ ಕಲಾವಿದ ಕೆ.ಯಜ್ಞೇಶ್ ಆಚಾರ್ ಮತ್ತು ಬಳಗದಿಂದ ದಾಸವಾಣಿ ನಡೆಯಲಿದೆ ಎಂದರು.

ವಿವಿಧೆಡೆ ಸಮ್ಮೇಳನ


ಶ್ರೀ ಋಷಿ ಪ್ರಭಾಕರ್‌ಜೀ ಅವರ ಸಂಕಲ್ಪದಂತೆ ಹಾಗೂ ಗುರುಮಾತಾ ರಮಾದೇವಿಯರ ಆಶೀರ್ವಾದದೊಂದಿಗೆ ಹೊಸದುರ್ಗದ ಶ್ರೀ ಸದ್ಗುರು ಸೇವಾಶ್ರಮದ ಸಂಸ್ಥಾಪಕ ಶ್ರೀ ಶ್ರೀಕಾಂತಾನಂದ ಭಗವಾನ್ ಸರಸ್ವತಿ ಮಹಾರಾಜ್ ಅವರ ನೇತೃತ್ವದಲ್ಲಿ ಡಿ.೨೭ರಿಂದ ೨೯ರ ತನಕ ಮೂರು ದಿನ ಸಮ್ಮೇಳನ ನೆರವೇರಲಿದೆ.ಪ್ರತಿ ವರ್ಷ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದ ವತಿಯಿಂದ ಬೇರೆ ಬೇರೆ ರಾಜ್ಯಗಳಲ್ಲಿ ಮತ್ತು ಬೇರೆ ಬೇರೆ ದೇಶಗಳಲ್ಲಿ ವಿಶ್ವ ಹೃದಯ ಸಮ್ಮೇಳನ ನಡೆಸಿಕೊಂಡು ಬರುತ್ತಿದ್ದೇವೆ.ಈ ವರ್ಷ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಮ್ಮೇಳನ ಆಯೋಜನೆಯಾಗಿದೆ.ಸುಮಾರು ೪೦ ವರ್ಷದ ಹಿಂದೆ ಗುರುಗಳಾದ ಶ್ರೀ ಋಷಿ ಪ್ರಭಾಕರ್‌ಜೀ ಅವರು ಆರಂಭಿಸಿದ್ದು ಅವರ ಸಂಕಲ್ಪದಂತೆ ಪ್ರತಿವರ್ಷವೂ ಈ ಸಮ್ಮೇಳನ ನಡೆಯುತ್ತಾ ಬರುತ್ತಿದೆ.ಪ್ರತಿವರ್ಷ ತೀರ್ಥ ಕ್ಷೇತ್ರದಲ್ಲಿ ಸಮ್ಮೇಳನ ನಡೆಸುತ್ತಾ ಬಂದಿದ್ದೇವೆ.ತಿರುಪತಿ, ಪುರಿ, ಪಂಡರಾಪುರ, ದ್ವಾರಕ, ಧರ್ಮಸ್ಥಳ, ಉಡುಪಿ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಸಮ್ಮೇಳನ ನಡೆಸಲಾಗಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಮುರಳಿಕೃಷ್ಣ ಕಾಮತ್ ಸುಬ್ರಹ್ಮಣ್ಯ, ಚಂದ್ರಶೇಖರ ನಾಯರ್ ಉಪಸ್ಥಿತರಿದ್ದರು.