ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಮಕ್ಕಳ ರಕ್ಷಣೆ ಕುರಿತು ಸಂವಾದ
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ಡಿ.27 ರಂದು ಸುಳ್ಯಕ್ಕೆ ಭೇಟಿ ನೀಡಿದರು.
ಸುಳ್ಯದ ಐ ಬಿ ಯಲ್ಲಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಅವರು ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಮಕ್ಕಳ ರಕ್ಷಣೆಯಲ್ಲಿ ಯಾವುದೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬುವುದರ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಿದರು.ಶಾಲೆಗಳು , ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಸುರಕ್ಷತೆಯ ಉದ್ದೇಶದಿಂದ ಸಹಾಯವಾಣಿ ಸಂಖ್ಯೆ 1098 ಹಾಗೂ 112 ಸಂಖ್ಯೆಯನ್ನು ಕಡ್ಡಾಯವಾಗಿ ಎಲ್ಲರಿಗೂ ಕಾಣುವಂತೆ ಬರಹ ಮೂಲಕ ಮಾಡಿರಬೇಕು.ಹಾಗೂ ಮಕ್ಕಳಿಗೆ ಇರುವ ದೂರು ಬಾಕ್ಸ್ ಅನ್ನು ಸಿ ಸಿ ಟಿ ವಿ ಇರುವ ಜಾಗದಲ್ಲಿ ಅಳವಡಿಸಿ ಅವರಿಗೆ ದೂರು ನೀಡಲು ಭಯ ಪಡುವ ಹಾಗೆ ಮಾಡಬಾರದು. ಈ ರೀತಿಯಲ್ಲಿ ಮಕ್ಕಳಿಗೆ ನೇರವಾಗ ಬೇಕು ಎಂದರು. ಅದರಲ್ಲಿ ಸಲ್ಲಿಕೆಯಾಗುವ ಸಲಹೆಗಳ ಬಗ್ಗೆ ಸಮಾಲೋಚನೆ ನಡೆಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆಗಳಲ್ಲಿ ಹಾಗೂ ಹಾಸ್ಟೇಲ್‌ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಶಾಲಾ ವಾಹನದಲ್ಲೂ ಸುರಕ್ಷತೆ ಕಡೆಗೆ ಗಮನ ನೀಡಬೇಕು. ವಾಹನದ ಚಾಲಕರ ಬಗ್ಗೆ ಗಮನ ವಹಿಸಿ ಎಂದು ಸಲಹೆ ನೀಡಿದರು.ಸಮಿತಿಗಳ ಸಭೆ ನಡೆಸಿ: ಮಕ್ಕಳ ಹಕ್ಕುಗಳ ರಕ್ಷಣಾ ಸಂಬಂಧಿಸಿದ ತಾಲೂಕು ಮಟ್ಟದ ಸಮಿತಿಗಳ ಸಭೆಯನ್ನು ಎರಡು ತಿಂಗಳಿಗೊಮ್ಮೆ ಪ್ರಮುಖ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಿ, ತಾಲೂಕಿನ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಬೇಕು.
ತಾಲೂಕು ಮಟ್ಟದ ಸಭೆ ಮಕ್ಕಳ ಹಕ್ಕುಗಳ ರಕ್ಷಣೆಗೆ ಪೂರಕವಾಗಲಿದೆ ಎಂದ ಅವರು ಗ್ರಾಮ ಮಟ್ಟದ ಮಕ್ಕಳ ಕಾವಲು ಪಡೆಯನ್ನು, ಮಕ್ಕಳ ಗ್ರಾಮ ಸಭೆಯನ್ನು ಸಮರ್ಪಕವಾಗಿ ನಡೆಸುವಂತೆ ಸೂಚಿಸಿದರು. ಬಳಿಕ ಮಕ್ಕಳ ರಕ್ಷಣೆಯ ಬಗ್ಗೆ ಈ ಭಾಗದಲ್ಲಿ ಸಭೆ ನಡೆಸಲಾಗಿದೆಯಾ ಎಂದು ಅಧಿಕಾರಿಗಳಲ್ಲಿ ಮಾಹಿತಿ ಪಡೆದರು. ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಕ್ಷಣ ಇಲಾಖೆ ಗಮನ ಹರಿಸಬೇಕು. ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಯಾವುದೇ ದೂರುಗಳು ಸಲ್ಲಿಕೆಯಾದರೂ ಆ ಬಗ್ಗೆ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಬಾಲ್ಯ ವಿವಾಹ ನಡೆಯದಂತೆ ತಡೆಯಬೇಕು. ಬಾಲ್ಯ ವಿವಾಹವನ್ನು ಕಾರ್ಯಕ್ರಮ ದಿನವೇ ತಡೆಯುವ ಬದಲು, ಅದಕ್ಕೂ ಮೊದಲೇ ಸಂಬಂಧಿಸಿದವರ ಮನೆ ಭೇಟಿ ಮಾಡಿ, ಅವರಿಗೆ ಕಾನೂನಿನ ಅರಿವು ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.
ಶಾಲೆ,ಹಾಸ್ಟೇಲ್‌ಗಳಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಪೋಕ್ಸೋ, ಸೈಬರ್ ಕ್ರೈಂ,ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಗಾರವನ್ನು ನಡೆಸಬೇಕು ಎಂದು ಸಲಹೆ ನೀಡಿದರು.೧೪ ವರ್ಷದೊಳಗಿನ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಅಂತಹ ಮಕ್ಕಳನ್ನು ಕಂಡು ಬಂದಲ್ಲಿ ಅವರ ಮನೆಗೆ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಭೇಟಿ ಮಾಡಿ, ಶಾಲೆಗೆ ಬರಲು ಸೂಚಿಸಬೇಕು. ಈ ವೇಳೆ ತರಗತಿ ನಡೆಸಲು ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ವಿದ್ಯಾರ್ಥಿ ನಿಲಯಗಳಲ್ಲಿ ನಿಲಯದ ಅಧಿಕಾರಿಗಳು ಆಡಳಿತಾತ್ಮಕ ಕೆಲಸ ಮಾಡುವ ಜೊತೆಗೆ ಮಕ್ಕಳ ಕಲಿಕೆಯ ಬಗ್ಗೆ, ಕಲಿಕಾ ಗುಣಮಟ್ಟದ ಬಗ್ಗೆಯೂ ಗಮನ ಹರಿಸಬೇಕು ಎಂದರು.೧೪ ವರ್ಷದೊಳಗಿನ ಮಕ್ಕಳ ಬಗ್ಗೆ ಶಿಕ್ಷಣ ಇಲಾಖೆ ಗಮನ ಹರಿಸುತ್ತದೆ. ಆದರೆ ೧೫ ವರ್ಷದ ಬಳಿಕ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಹೆಚ್ಚಿನ ಕಡೆ ಗಮನಹರಿಸಲು ಸಾಧ್ಯವಾಗದೇ ಇರುವುದರಿಂದ ಮನೆಯಲ್ಲಿಯೇ ಇರುವ ಹೆಣ್ಣು ಮಕ್ಕಳನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗಿ ನಡೆಯುತ್ತಿದೆ ಎಂದು ಸಭೆಯಲ್ಲಿ ಸುಳ್ಯ ಠಾಣಾ ಎಸ್ ಐ ಸರಸ್ವತಿಯವರು ಪ್ರಸ್ತಾಪ ಮಾಡಿದರು.ಈ ಬಗ್ಗೆ ಮಾತನಾಡಿದ ನಾಗಣ್ಣ ಅವರು, ೧೫ ವರ್ಷದ ಬಳಿಕವೂ ಅವರಿಗೆ ಶಿಕ್ಷಣ ನೀಡಬೇಕು, ಇದಕ್ಕೆ ಪೂರಕವಾಗಿ ಡಿಡಿಪಿಐ ಮಟ್ಟದಲ್ಲಿ ಗಮನ ಹರಿಸುವ ಕೆಲಸ ಆಗಬೇಕು ಎಂದ ಅವರು, ಮಕ್ಕಳಿಗೆ ಸರಕಾರದಿಂದ ತಲುಪಬೇಕಾದ ಸೌಲಭ್ಯಗಳನ್ನು ಅವರಿಗೆ ತಲುಪುವಂತೆ ಅಧಿಕಾರಿಗಳು ಮಾಡಬೇಕು ಎಂದರು.
ಈ ಸಂಧರ್ಭದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ದ ಕ ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಅಡ್ಕಾರ್, ದಕ್ಷಿಣ ಕನ್ನಡ ಜಿಲ್ಲಾ ಸಹಾಯವಾಣಿ ವಿಭಾಗದ ಜಸ್ಮಿತಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕುಮಾರ್, ನಾಸಿರ್, ಸುಳ್ಯ ತಹಶೀಲ್ದಾರ್ ಮಂಜುನಾಥ್, ಸಿಡಿಪಿಒ ಶೈಲಜಾ, ಬಿಇಒ ಕಛೇರಿಯ ಶಿಕ್ಷಣ ಸಂಯೋಜಕಿ ಸಂದ್ಯಾ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ., ತಾ.ಪಂ. ಪ್ರಭಾರ ಸಹಾಯಕ ನಿರ್ದೇಶಕ ರವಿಚಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಜಯ್ , ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ, ಪ್ರವೀಣ್, ದ ಕ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಉಪಾಧ್ಯಕ್ಷ ಹಸೈನಾರ್ ಜಯನಗರ ಉಪಸ್ಥಿತರಿದ್ದರು.ದ ಕ ಜಿಲ್ಲಾ ಸಮಿತಿ ಸದಸ್ಯ ಅಡ್ವಕೆಟ್ ಅಬೂಬಕ್ಕರ್ ಅಡ್ಕಾರ್ ವಂದಿಸಿದರು.