ರಂಗಮನೆಯಲ್ಲಿ ತುಂಬಿದ ಪ್ರೇಕ್ಷಾಂಗಣ

0

ಶ್ರೇಷ್ಠತೆಯನ್ನು ಮರೆದ ನೀನಾಸಂ ನಾಟಕೋತ್ಸವ

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯ ಇದರ ಆಶ್ರಯದಲ್ಲಿ ನಡೆದ ನೀನಾಸಂ ನಾಟಕೋತ್ಸವಕ್ಕೆ ರಂಗಮನೆಯ ಪ್ರೇಕ್ಷಾಂಗಣವು ತುಂಬಿ ತುಳುಕಿತು. ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ಎನ್.ಗೋವಿಂದ ಉತ್ಸವವನ್ನು ಉದ್ಘಾಟಿಸಿ ‘ ಆಧುನಿಕ ರಂಗಭೂಮಿಯ ಹುಟ್ಟಿಗೆ ಕಾರಣವಾದ ನೀನಾಸಮ್ ಸಂಸ್ಥೆ ಜಗತ್ತಿನ ಶ್ರೇಷ್ಠ ಕೃತಿಗಳನ್ನು ಕನ್ನಡದಲ್ಲಿ ರಂಗಕ್ಕೆ ತರುವ ಮೂಲಕ ಸದಭಿರುಚಿಯ ಪ್ರೇಕ್ಷಕ ಬಳಗವನ್ನು ಸೃಷ್ಟಿಸಿದೆ.’ ಎಂದರು.


ರಂಗಮನೆಯ ಅಧ್ಯಕ್ಷರಾದ ಡಾ| ಜೀವನ್ ರಾಂ ಸುಳ್ಯ ಮಾತನಾಡಿ ‘ ನನ್ನಂತಹ ನೂರಾರು ರಂಗಕರ್ಮಿಗಳಿಗೆ ಬದುಕು ತೋರಿಸಿದ ಸಂಸ್ಥೆ ನೀನಾಸಮ್ ಗೆ ಇದೀಗ 75 ನೇ ವರ್ಷದ ಸಂಭ್ರಮ..ನೀನಾಸಮ್ ತಿರುಗಾಟಕ್ಕೆ 40 ರ ಸಡಗರ.
ರಂಗವನ್ನು ತಾವೇ ಸಿದ್ಧಪಡಿಸಿಕೊಂಡು, ತಾವೇ ರಂಗದಲ್ಲಿ ರಾರಾಜಿಸುವ ಈ ತರಹದ ವೃತ್ತಿನಿರತ ಕಲಾವಿದರ ತಂಡ ಮತ್ತೊಂದಿಲ್ಲ.” ಎಂದರು.
ವೇದಿಕೆಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸಾಹಿತಿ ಕುಮಾರಸ್ವಾಮಿ ತೆಕ್ಕುಂಜ, ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶಿವರಾಮ ಶಾಸ್ತ್ರಿ, ರಂಗಮನೆಯ ಸದಸ್ಯರಾದ ಲತಾ ಮಧುಸೂದನ, ರವೀಶ್ ಪಡ್ಡಂಬೈಲು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೀನಾಸಮ್ ತಿರುಗಾಟದ ಸಂಚಾಲಕರಾದ ರಾಘವೇಂದ್ರ ಪುರಪ್ಪೆಮನೆಯವರನ್ನು ಸನ್ಮಾನಿಲಾಯಿತು.


ಈ ವರ್ಷ ನೀನಾಸಂ ತಿರುಗಾಟದ ಶ್ರೇಷ್ಠ ನಾಟಕಗಳೆಂದು ಪ್ರಸಿದ್ಧಿ ಪಡೆದ ಮಾಲತಿ ಮಾಧವ ಮತ್ತು ಅಂಕದ ಪರದೆ ನಾಟಕಗಳು
ಪ್ರದರ್ಶನಗೊಂಡವು. ಎರಡೂ ದಿನವೂ ರಂಗಮನೆಯ ಪ್ರೇಕ್ಷಾಂಗಣ ತುಂಬಿ ತುಳುಕಿತ್ತು.