ಜೀವನ್ ರಾಂ ನಿರ್ದೇಶನದ ಎರಡು ಪ್ರಸಿದ್ಧ ನಾಟಕಗಳು
ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ( ರಿ.) ಸುಳ್ಯ ಇದರ ಆಶ್ರಯದಲ್ಲಿ ಫೆಬ್ರವರಿ 1 ಮತ್ತು 2 ರಂದು ಸಂಜೆ 6.45 ಕ್ಕೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡುಬಿದಿರೆ ಅಭಿನಯಿಸುವ, ರಂಗಮಾಂತ್ರಿಕ ಡಾ| ಜೀವನ್ ರಾಂ ಸುಳ್ಯ ನಿರ್ದೇಶನದ ಎರಡು ಪ್ರಸಿದ್ಧ ನಾಟಕಗಳ " ಆಳ್ವಾಸ್ ರಂಗೋತ್ಸವ" ವನ್ನು ಏರ್ಪಡಿಸಲಾಗಿದೆ.
ಫೆ.01 ಶನಿವಾರದಂದು ಮಕ್ಕಳ ರಂಗಭೂಮಿಯಲ್ಲೇ ವಿಭಿನ್ನ ಪ್ರಯೋಗವೆನಿಸಿದ, ಶ್ರೀಮತಿ ವೈದೇಹಿ ರಚಿಸಿದ 'ನಾಯಿಮರಿ ನಾಟಕ' ಪ್ರದರ್ಶನಗೊಳ್ಳಲಿದೆ. ಮಕ್ಕಳಲ್ಲಿ ಪರಿಸರ ಹಾಗೂ ಪ್ರಾಣಿ ಪಕ್ಷಿಗಳ ಬಗ್ಗೆ ಪ್ರೀತಿ ಹೆಚ್ಚಿಸುವಂತೆ ಮಾಡುವ ವಿಭಿನ್ನ ಪ್ರಯೋಗವಿದು. ಈ ನಾಟಕ ಈಗಾಗಲೇ ರಾಜ್ಯದಾದ್ಯಂತ ಪ್ರದರ್ಶನ ಕಂಡು ಸುಳ್ಯದಲ್ಲಿ 115 ನೇ ಪ್ರದರ್ಶನವಾಗಿರುತ್ತದೆ.
ಫೆ.02 ಭಾನುವಾರದಂದು ನಾಡೋಜ ಹಂಪನಾ ವಿರಚಿತ ದೇಸೀಕಾವ್ಯ ಚಾರುವಸಂತ ಪ್ರದರ್ಶನಗೊಳ್ಳಲಿದೆ. ರಾಜ್ಯಾದ್ಯಂತ ಸಂಚಲನ ಮೂಡಿಸಿದ , ಕನ್ನಡ ರಂಗಭೂಮಿಯ ಶ್ರೇಷ್ಟ ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ನಾಟಕವನ್ನು ಡಾ.ನಾ.ದಾಮೋದರ ಶೆಟ್ಟಿಯವರು ರಂಗರೂಪಕ್ಕಿಳಿಸಿದ್ದಾರೆ. ವರ್ತಮಾನದ ಅನೇಕ ತಲ್ಲಣಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಕಟ್ಟಲ್ಪಟ್ಟ ಚಾರುವಸಂತದ 24 ನೇ ಪ್ರದರ್ಶನ ರಂಗಮನೆಯಲ್ಲಿ ನಡೆಯಲಿದೆ.
ಎರಡೂ ನಾಟಕಕ್ಕೆ ಸೊಗಸಾದ ಸಂಗೀತವನ್ನು ಮಾ| ಮನುಜ ನೇಹಿಗ ಸುಳ್ಯ, ಸುಮನಾ ಪ್ರಸಾದ್, ಇನ್ಸಾಫ್ ಹೊಸಪೇಟೆ, ಗೀತಂ ಗಿರೀಶ್ ಉಡುಪಿ ಹಾಗೂ ಜೀವನ್ ರಾಂ ಸುಳ್ಯ ನೀಡಿದ್ದಾರೆ. ಸುಳ್ಯದ ವಾಮನ ಕೊಯಿಂಗಾಜೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.
ಜೀವನ್ ರಾಂ ಮತ್ತು ಮನುಜ ನೇಹಿಗರು ರಂಗದಲ್ಲಿ..
ಚಾರುವಸಂತ ನಾಟಕದ ತಂದೆ ಭಾನುದತ್ತನ ಪಾತ್ರದಲ್ಲಿ ರಂಗಮನೆಯ ಜೀವನ್ ರಾಂ ಸುಳ್ಯ ಹಾಗೂ ನಾಯಿಮರಿ ನಾಟಕದ ಕಳ್ಳ ಮಂಗಾಣಿಯ ಪಾತ್ರದಲ್ಲಿ ರಂಗಮನೆಯ ಮನುಜ ನೇಹಿಗ ಕಾಣಿಸಿಕೊಳ್ಳಲಿದ್ದಾರೆ. ಅಪ್ಪ ಮಗ ಇಬ್ಬರೂ ರಂಗದಲ್ಲಿ ಅಭಿನಯಿಸುತ್ತಿರುವುದು ವಿಶೇಷವಾಗಿದೆ.
ಯಾವುದೇ ಸಭಾ ಕಾರ್ಯಕ್ರಮ ಇಲ್ಲದೆ ನಾಟಕ ಸಮಯಕ್ಕೆ ಸರಿಯಾಗಿ ಆರಂಭವಾಗಲಿದ್ದು , ಆಸಕ್ತರು ಸಮಯಕ್ಕೆ ಮುಂಚಿತವಾಗಿ ಬರಲು ಮತ್ತು ನಾಟಕಕ್ಕೆ ಪ್ರವೇಶ ಉಚಿತವಾಗಿರುತ್ತದೆ ಎಂದು ರಂಗಮನೆಯ ಕಾರ್ಯದರ್ಶಿಗಳಾದ ಕೆ.ಕೃಷ್ಣಮೂರ್ತಿ ತಿಳಿಸಿದ್ದಾರೆ.