ಕೆಲವೆಡೆ ಹೂವು ಅರಳಿದೆ, ಇನ್ನೂ ಕೆಲವೆಡೆ ಹಣ್ಣು ಹಂಪಲ ಘಮ..ಘಮ ..!
ವೃತ್ತದ ಸುತ್ತ ಒಂದೂವರೆ ತಾಸು 650 ಕ್ಕೂ ಅಧಿಕ ಭಜಕರಿಂದ ಕುಣಿತ ಭಜನೆ..!
ಪೆರುವಾಜೆ ಶ್ರೀ ಜಲದುರ್ಗಾದೇವಿಯ ಬ್ರಹ್ಮರಥೋತ್ಸವ ಸಾಗಲಿರುವ ರಥಬೀದಿ ತುಂಬೆಲ್ಲಾ ಬಣ್ಣ-ಬಣ್ಣದ ಚಿತ್ತಾರ ಅರಳಿವೆ. ಹಾಗಂತ ಒಂದೆರಡೂ ಅಲ್ಲ, ಬರೋಬ್ಬರಿ 55 ವೃತ್ತಕಾರದ ರಂಗೋಲಿಗಳು. ಇವು ಬರೀ ರಂಗೋಲಿ ಅಲ್ಲ. ವಿಶಿಷ್ಟ, ವಿಭಿನ್ನವಾಗಿ ಮೂಡಿರುವ ಕಲಾಕೃತಿ. ದೇವಾಲಯಕ್ಕೆ ಬರುತ್ತಿರುವ ಭಕ್ತರು ಒಮ್ಮೆ ರಥಬೀದಿಯನ್ನು ನಿಂತು ದಿಟ್ಟಿಸುವಂತಿದೆ ಇಲ್ಲಿನ ಸೊಬಗು..!
ಇಂತಹ ಅಪೂರ್ವ ದೃಶ್ಯ ಕಾವ್ಯವೊಂದು ಧರೆಗಿಳಿದು ಭಕ್ತ ಸಮೂಹವನ್ನು ಆಕರ್ಷಿಸುತ್ತಿರುವುದು ವಾರ್ಷಿಕ ಜಾತ್ರಾ ಸಂಭ್ರಮದಲ್ಲಿರುವ ಪೆರುವಾಜೆ ಶ್ರೀ ಜಲದುರ್ಗಾದೇವಿಯ ರಥ ಬೀದಿ.
ಸುಮಾರು ನೂರು ವರ್ಷದ ಬಳಿಕ ಬ್ರಹ್ಮರಥ ನಿರ್ಮಾಣಗೊಂಡು ಕಳೆದ ವರ್ಷದ ಜಾತ್ರೆಯ ಸಂದರ್ಭದಲ್ಲಿ ಸಮರ್ಪಣೆಗೊಂಡಿತ್ತು. ಇದೀಗ ಎರಡನೇ ವರ್ಷದ ಜಾತ್ರಾ ಸಂಭ್ರಮ. ಜ.19 ರಂದು ಬ್ರಹ್ಮರಥವೂ ರಥ ಬೀದಿಯಲ್ಲಿ ಸಾಗಲಿದ್ದು ಇದಕ್ಕಾಗಿ ಭಕ್ತವೃಂದ ರಥ ಬೀದಿಯನ್ನು ಭಕ್ತಿಭಾವದಿಂದ ಶೃಂಗರಿಸಿದೆ. ಅದರ ಪ್ರತಿಫಲವೇ ಈ ಸುಂದರ ದೃಶ್ಯ.
ಕರಸೇವೆಯಲ್ಲಿ ಮೂಡಿದ 55 ವೃತ್ತ..!
ಸುಮಾರು 2೦೦ ಮೀಟರ್ ದೂರದ ರಥ ಬೀದಿಯಲ್ಲಿ 55 ರಂಗೋಲಿ ವೃತ್ತಗಳನ್ನು ರಚಿಸಲಾಗಿದೆ. ಈ ಸುಂದರ ಪರಿಕಲ್ಪನೆಯ ನೇತೃತ್ವ ವಹಿಸಿದ್ದು ಕ್ಷೇತ್ರದ ಪರಮ ಭಕ್ತ ಶಿವಪ್ರಕಾಶ್ ಆಚಾರ್ಯ ಪೆರುವಾಜೆ. ಅವರೊಂದಿಗೆ ಕ್ಷೇತ್ರಕ್ಕೆ ಕರಸೇವೆಗೆ ಬಂದ ಭಕ್ತವೃಂದವೂ ಕೈ ಜೋಡಿಸಿತ್ತು. ಸಂಜೆ ಶುರುವಾದ ಕೆಲಸ ತಡರಾತ್ರಿ ದಾಟಿಯು ನಡೆಯಿತು. ಸರಿ ಸುಮಾರು 40 ಕ್ಕೂ ಅಧಿಕ ಮಂದಿ ಪೈಂಟ್ನಿಂದ ರಂಗೋಲಿ ಬಿಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಅಂದ ಹಾಗೆ ಇದು ಭಕ್ತರ ಉಚಿತ ಸೇವೆ.
ಗಮನ ಸೆಳದ ಚಿತ್ತಾರ..!
ಒಂದೊಂದು ವೃತ್ತದ ರಂಗೋಲಿಯಲ್ಲಿಯು ವಿಶಿಷ್ಟತೆ ಎದ್ದು ಕಾಣುತ್ತಿದೆ. ಕೆಲವೆಡೆ ಹೂವು ಅರಳಿದರೆ, ಇನ್ನೂ ಕೆಲವೆಡೆ ಹಣ್ಣು ಹಂಪಲುಗಳು ಮೂಡಿವೆ. ರಥದ ಮುಂಭಾಗದಲ್ಲಿ ಶ್ರೀ ದೇವರ ಬಲಿ ಹೊರಟು ಬರುವ ಸ್ಥಳದಲ್ಲಿ ದೊಡ್ಡ ರಂಗೋಲಿ ಬಿಡಿಸಲಾಗಿದೆ. ಅನಂತರ ರಥ ಸಾಗುವ ಕೊನೆಯ ಹಂತದ ತನಕವೂ ಒಂದೇ ಅಳತೆಯ ವೃತ್ತಗಳಿವೆ. ಹೀಗೆ ಪ್ರತಿ ವೃತ್ತವನ್ನು ಅತ್ಯಂತ ಆಸಕ್ತಿದಾಯಕವಾಗಿಯೇ ರೂಪಿಸಲಾಗಿದೆ.
ವೃತ್ತದ ಸುತ್ತ 650 ಭಜಕರಿಂದ ಕುಣಿತ ಭಜನೆ.!
ಈ ವೃತ್ತದ ಸುತ್ತ ಜ.19 ರಂದು ರಾತ್ರಿ ವೇಳೆ ಭಜನೆಯ ಇಂಪು ಮೊಳಗಲಿದೆ. ರಮೇಶ್ ಮೆಟ್ಟಿನಡ್ಕ ಅವರ ಧ್ವನಿಗೆ 55 ವೃತ್ತಗಳಲ್ಲಿ ಒಟ್ಟು 650 ಮಂದಿ ಭಜಕರು ಹೆಜ್ಜೆ ಹಾಕಲಿದ್ದಾರೆ. ಸಂಜೆ 7.30 ರಿಂದ ರಾತ್ರಿ 9 ಗಂಟೆ ತನಕ ಕುಣಿತ ಭಜನೆ ನಡೆಯಲಿದೆ. ಕಾಸರಗೋಡು, ಪುತ್ತೂರು, ಸುಳ್ಯ, ಕಡಬ ತಾಲೂಕಿನ 31 ಕ್ಕೂ ಅಧಿಕ ಭಜನ ತಂಡಗಳು ಸೇವಾರೂಪದಲ್ಲಿ ಕುಣಿತ ಭಜನಯಲ್ಲಿ ಪಾಲ್ಗೊಳ್ಳಲಿದೆ. ಭಜಕರು ಭಕ್ತಿ ಭಾವ ಪರವಶರಾಗಿ ಕುಣಿತ ಭಜನೆಗೈಯಲ್ಲಿರುವ ಕ್ಷಣಕ್ಕೆ ದಿನಗಣನೆಯಷ್ಟೇ ಬಾಕಿ ಉಳಿದಿದೆ..!