ಎಡಮಂಗಲ: ಇತ್ತಂಡಗಳ ಮಧ್ಯೆ ವಾಗ್ವಾದ ನಡೆದು ಹಲ್ಲೆ – ಪೊಲೀಸ್ ದೂರು

0

ರಸ್ತೆ ಬದಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅದನ್ನು ಆಕ್ಷೇಪಿಸಿದರೆಂಬ ಕಾರಣಕ್ಕೆ ಇತ್ತಂಡಗಳ ಮಧ್ಯೆ ವಾಗ್ವಾದ ನಡೆದು, ಆಕ್ಷೇಪಿಸಿದ ವ್ಯಕ್ತಿ ತನ್ನ ಮೇಲೆ ಮತ್ತು ಪುಟ್ಟ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾರೆಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲ್ಪಟ್ಟಿರುವ ಘಟನೆ ನಿನ್ನೆ ಸಂಜೆ ಎಡಮಂಗಲ ಗ್ರಾಮದ ಮರ್ಧೂರಿನಿಂದ ವರದಿಯಾಗಿದೆ.

ಎಡಮಂಗಲ ಗ್ರಾಮದ ಮರ್ದೂರು ನಿವಾಸಿ ಗಣೇಶ್ ಎಂಬವರು ತಮ್ಮ ಮನೆಯ ಸಮೀಪ ಹಾದು ಹೋಗುವ ಕಾಂಕ್ರೀಟ್ ರಸ್ತೆಯ ಬದಿಗೆ ಕಲ್ಲು ಇರಿಸಿ ಕಂಪೌಂಡ್ ರಚಿಸಲು ಉದ್ಯುಕ್ತರಾಗಿದ್ದರೆನ್ನಲಾಗಿದೆ. ಅದನ್ನು ಕಂಡ ಸ್ಥಳೀಯರಾದ ನಾಗೇಶ್ ಎಂಬವರು ಆಕ್ಷೇಪಿಸಿದರೆಂದೂ, ಆ ಸಂದರ್ಭ ಮಾತಿಗೆ ಮಾತು ಬೆಳೆದು ನಾಗೇಶ್ ರವರು ಗಣೇಶರಿಗೆ ಕತ್ತಿ ಹಿಡಿದು ಹಲ್ಲೆ ಮಾಡಲು ಮುಂದಾದರೆಂದೂ ಆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಗಣೇಶರ ಜೊತೆಗಿದ್ದ ಅವರ ಪತ್ನಿಯನ್ನು ನಾಗೇಶರು ದೂಡಿ ಬೀಳಿಸಿದರಲ್ಲದೆ ಮಗಳು ಚಾರ್ವಿಗೆ ಮೆಟ್ಟಿದರೆಂದು ಗಣೇಶರು ಬೆಳ್ಳಾರೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿದ ಬೆಳ್ಳಾರೆ ಪೊಲೀಸರು ನಾಗೇಶರನ್ನು ಠಾಣೆಗೆ ಕರೆಸಿ ವಿಚಾರಿಸಿರುವುದಾಗಿ ತಿಳಿದುಬಂದಿದೆ.


ಈ ಬಗ್ಗೆ ನಾಗೇಶರನ್ನು ಸಂಪರ್ಕಿಸಿ ವಿಚಾರಿಸಿದಾಗ ” ರಸ್ತೆ ಬದಿ ಕಾಂಪೌಂಡ್ ಕಟ್ಟಿರುವ ಬಗ್ಗೆ ಪ್ರಶ್ನೆ ಮಾಡಿದ್ದೆ. ಹಲ್ಲೆ ಮಾಡಿಲ್ಲ” ಎಂದು ತಿಳಿಸಿದ್ದಾರೆ.