ಸದಸ್ಯರು ಹಾಗೂ ಅಧ್ಯಕ್ಷರು ಮಾಡಿದ ನಿರ್ಣಯಕ್ಕೆ ಬೆಲೆ ಇಲ್ಲದಿದ್ದರೆ ಇಂತಹ ಸಭೆ ಬೇಕೆ? ಕೆ.ಎಸ್. ಉಮ್ಮರ್ ಪ್ರಶ್ನೆ
ಕಚೇರಿಯ ಎಲ್ಲಾ ಹುದ್ದೆಯನ್ನು ಓರ್ವ ಸಿಬ್ಬಂದಿಗೆ ನೀಡಿ ವ್ಯವಸ್ಥೆಯನ್ನು ಹಾಳು ಮಾಡಿರುವುದು ಸರಿಯಲ್ಲ: ಶರೀಫ್ ಕಂಠಿ
ಆಡಳಿತ ನಡೆಸಲು ಬರುವುದಿಲ್ಲವಾದರೆ ಅಧಿಕಾರದಿಂದ ಕೆಳಗೆ ಬನ್ನಿ :ಸಿದ್ದೀಕ್ ಕೊಕ್ಕೋ
ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಗೆ ಅಧಿಕಾರಿಗಳ ಗೈರು ಹಿನ್ನಲೆ ಸಭೆ ಮುಂದೂಡಿದ್ದು ಈ ವೇಳೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಸಮರ ನಡೆಯಿತು.
ಇಂದಿನ ಸಭೆಯಲ್ಲಿ ಗಂಭೀರವಾಗಿ ಚರ್ಚೆಮಾಡಲಿರುವ ವಿಷಯಕ್ಕೆ ಸಂಭಂದಿಸಿದ ಅಧಿಕಾರಿಗಳು ಬಾರದೆ ಇರುವ ಕಾರಣ ಸಭೆಯನ್ನು ಮುಂದೂಡಿರುವುದಾಗಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಯವರು ಮಾಧ್ಯಮದವರಿಗೆ ಹೇಳಿಕೆ ನೀಡಿದರು.
ಈ ಸಂದರ್ಭ ಎದ್ದು ನಿಂತ ಸದಸ್ಯ ಉಮ್ಮರ್ ಕೆ ಎಸ್ ರವರು ಪಂಚಾಯತ್ ಕಚೇರಿಗೆ ಅಧಿಕಾರಿಗಳನ್ನು ಬರುವಂತೆ ಮಾಡ ಬೇಕಾದದ್ದು ಯಾರು? ಅದು ನೀವೇ ಅಲ್ಲವೇ ಅಧ್ಯಕ್ಷರೇ? ಎಂದು ಪ್ರಶ್ನೆ ಮಾಡಿದರು. ಆಡಳಿತ ಸ್ಥಾನದಲ್ಲಿ ಕುಳಿತು ಪಂಚಾಯತ್ ಸಭೆಗೆ ಸಂಭಂದಪಟ್ಟ ಅಧಿಕಾರಿಗಳನ್ನು ಬರಿಸಲು ಸಾಧ್ಯವಿಲ್ಲ ಎಂದಾದರೆ ನಗರದ ಅಭಿವೃದ್ಧಿ ಮಾಡುವುದಾದರೂ ಹೇಗೆ? ಎಂದು ಕೇಳಿದರು. ಸಭೆಯಲ್ಲಿ ಸದಸ್ಯರು ಹಾಗೂ ಅಧ್ಯಕ್ಷರು ಸೇರಿ ಮಾಡಿದ ನಿರ್ಣಯಕ್ಕೆ ಬೆಲೆ ಇಲ್ಲದಿದ್ದರೆ ಇಂತಹ ಸಭೆ ಏತಕ್ಕಾಗಿ ಮಾಡುವುದು? ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಈ ಸಭೆಯಿಂದ ಅಧ್ಯಕ್ಷರು ವೇದಿಕೆಯಲ್ಲಿ ಇರುವಾಗ ಆಡಳಿತ ಸಮಿತಿ ಸದಸ್ಯರು ಎದ್ದು ಹೋಗುತ್ತಾರೆ. ಆದರೆ ನಾವು ವಿರೋಧ ಪಕ್ಷದ ಎಲ್ಲಾ ಸದಸ್ಯರು ಇಲ್ಲೇ ಕೂತಿದ್ದೇವೆ, ಕಾರಣ ನಮಗೆ ಅಭಿವೃದ್ಧಿ ಬೇಕು ಎದ್ದು ಹೋದವರಿಗೆ ಅಭಿವೃದ್ಧಿ ಬೇಡ ಎಂದು ಕುಟುಕಿದರು.

ಈ ವೇಳೆ ಮತ್ತೋರ್ವ ಸದಸ್ಯ ಶರೀಫ್ ಕಂಠಿ ಮಾತನಾಡಿ ‘ಕಚೇರಿಯ ಎಲ್ಲಾ ಹುದ್ದೆಯನ್ನು ಕಚೇರಿಯ ಓರ್ವ ಸಿಬ್ಬಂದಿಯೇ ಅವರಿಗೆ ಬೇಕಾದ ಹಾಗೆ ಮಾಡುತ್ತಿದ್ದು ಇಡೀ ವ್ಯವಸ್ಥೆಯನ್ನು ಹಾಳು ಮಾಡಿರುವುದು ಸರಿಯಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿಗಳಿಗೆ ಅಧಿಕಾರಿಗಳ ಕೊರತೆಯ ಬಗ್ಗೆ ಪತ್ರ ಬರೆಯುವಾಗ ಈ ಸಿಬ್ಬಂದಿಯ ಬಗ್ಗೆಯು ಅದರಲ್ಲಿ ಉಲ್ಲೇಖ ಮಾಡಿ ಎಂದು ಆಗ್ರಹಿಸಿದರು.
ಇದೇ ವೇಳೆ ನಾಮ ನಿರ್ದೇಶಕ ಸದಸ್ಯ ಸಿದ್ದೀಕ್ ಕೊಕ್ಕೋರವರು ನಿಮಗೆ ಆಡಳಿತ ನಡೆಸಲು ಸಾಧ್ಯವಾಗದೇ ಇದ್ದರೆ ಅಧ್ಯಕ್ಷರೇ ಆ ಸ್ಥಾನದಿಂದ ನೀವು ಕೆಳಗೆ ಇಳಿಯಿರಿ ಎಂದು ಹೇಳಿದ್ದು, ಈ ವೇಳೆ ಅಧ್ಯಕ್ಷರು ಮತ್ತು ಆಡಳಿತ ಸಮಿತಿಯ ಸದಸ್ಯರುಗಳು ಅವರ ಮಾತನ್ನು ತೀವ್ರವಾಗಿ ಖಂಡಿಸಿದ ಘಟನೆ ನಡೆಯಿತು.
ಬೀರಮಂಗಿಲ ವಾರ್ಡಿನಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ತೋಡುತ್ತಿರುವ ಕಣಿಗಳನ್ನು ಅಸಮರ್ಪಕವಾಗಿ ಮುಚ್ಚುತ್ತಿದ್ದು, ಇದರಿಂದ ಈ ಭಾಗದಲ್ಲಿ ಓಡಾಡುವ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಇದನ್ನು ಕೇಳುವವರು ಯಾರು? ಎಂದು ಸದಸ್ಯ ಧೀರ ಕ್ರಾಸ್ತ ಮತ್ತು ಗಾಂಧಿ ನಗರ ಮುಖ್ಯ ರಸ್ತೆಯಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ರಾಜು ಪಂಡಿತ್ ರವರು ಆಕ್ರೋಶ ವ್ಯಕ್ತಪಡಿಸಿದರು.
ಕೊನೆಯಲ್ಲಿ ನಗರ ಪಂಚಾಯತಿನಲ್ಲಿರುವ ಅಧಿಕಾರಿಗಳ ಕೊರತೆಯ ಬಗ್ಗೆ ಡಿಸಿ ಅವರಿಗೆ ಪತ್ರ ಮೂಲಕ ತಿಳಿಸಿ ಕೂಡಲೇ ಅಧಿಕಾರಿಗಳನ್ನು ನೇಮಕ ಮಾಡುವಂತೆ ಹಾಗೂ ಈಗಿನ ಎಚ್ ಐ ರವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡುವುದಾಗಿ ಸಭೆಯಲ್ಲಿ ತೀರ್ಮಾನಿಸಿ ಸಭೆಯನ್ನು ನಿಲ್ಲಿಸಲಾಯಿತು.