ಭವ್ಯ ರಥದ ಸ್ವಾಗತಕ್ಕೆ ಭರ್ಜರಿ ಸಿದ್ಧತೆ : ಕುಣಿತ ಭಜನೆಯೊಂದಿಗೆ ಮೆರವಣಿಗೆ, ಚೆನ್ನಕೇಶವ ದೇವಸ್ಥಾನದ ಮುಂಭಾಗ ಧಾರ್ಮಿಕ ಸಭೆ
ನಂದಿಯ (ಗೋವು) ಬಗ್ಗೆ ಹಾಗೂ ಅದರ ಉತ್ಪನ್ನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ನಂದಿ ರಥಯಾತ್ರೆ ನಡೆಯುತ್ತಿದ್ದು ಮಾ.೧೫ರಂದು ಸಂಜೆ 3.30ಗಂಟೆಗೆ ಸುಳ್ಯಕ್ಕೆ ನಂದಿ ರಥಯಾತ್ರೆ ಪುರಪ್ರವೇಶ ಮಾಡಲಿದೆ. ಈ ಭವ್ಯ ರಥದ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಗೋ ಸೇವಾ ಗತಿನಿಧಿ ಕರ್ನಾಟಕ, ರಾಧ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಇವರ ಸಹಯೋಗದೊಂದಿಗೆ ನಂದಿ ರಥಯಾತ್ರೆ ನಡೆಯುತ್ತಿದೆ. ಇಂದು ಬೆಳಗ್ಗೆ ಸುಬ್ರಹ್ಮಣ್ಯದಿಂದ ರಥಯಾತ್ರೆ ಸುಳ್ಯದತ್ತ ಹೊರಡಲಿದೆ. ಮಧ್ಯಾಹ್ನದ ವೇಳೆ ಎಲಿಮಲೆಗೆ ರಥಯಾತ್ರೆ ತಲುಪಲಿದ್ದು, ಅಲ್ಲಿ ಕೆಲ ಸಮಯ ವಿಶ್ರಾಂತಿಯ ಬಳಿಕ ಮಧ್ಯಾಹ್ನ ೩.೩೦ – 4 ಗಂಟೆ ಸಮಯಕ್ಕೆ ಸುಳ್ಯ ತಲುಪುವುದು. ಸುಳ್ಯ ಜ್ಯೋತಿ ಸರ್ಕಲ್ ಬಳಿಯಲ್ಲಿ ಸಾವಿರಾರು ಮಂದಿ ಸೇರಿ ನಂದಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು. ಬಳಿಕ ಕುಣಿತ ಭಜನೆ, ಮೆರವಣಿಗೆಯಲ್ಲಿ ರಥಯಾತ್ರೆಯನ್ನು ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗಕ್ಕೆ ಬರಮಾಡಿಕೊಳ್ಳಲಾಗುವುದು.
ಅಲ್ಲಿ ಸಭಾ ಕಾರ್ಯಕ್ರಮ ನಡೆಯುವುದು. ರಾಷ್ಟ್ರೀಯ ಗೋ ಸೇವಾ ಸಂಸ್ಥಾನ್ ಟ್ರಸ್ಟ್ ನ ಅಧ್ಯಕ್ಷರಾದ ಭಕ್ತಿಭೂಷನ್ ದಾಸ್ ಹಾಗೂ ಬಂಟ್ವಾಳ ಶಾಸಕರಾದ ರಾಜೇಶ್ ನಾಕ್ ಉಳಿಪಾಡಿ ಒಡ್ಡೂರು ಫಾರ್ಮ್ ರವರು ನಂದಿಯ ಮಹತ್ವದ ಕುರಿತು ಮಾತನಾಡಲಿದ್ದಾರೆ.