ಪೋಲೀಸರಿಗೆ ಹಸ್ತಾಂತರ

ಅರಂತೋಡು – ಅಡ್ತಲೆ ರಸ್ತೆಯಲ್ಲಿ ಮಿತಿ ಮೀರಿ ಜಲ್ಲಿ, ಮರಗಳನ್ನು ಹೊತ್ತ ಲಾರಿ ಸಂಚಾರದಿಂದ ರಸ್ತೆ ಹಾಳಾಗುತ್ತಿರುವುದನ್ನು ಮನಗಂಡ ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆ ಯವರು ಲಾರಿಯನ್ನು ತಡೆದ ಘಟನೆ ವರದಿಯಾಗಿದೆ.
ಅಡ್ತಲೆ ರಸ್ತೆಯಲ್ಲಿ ಘನ ವಾಹನ ಸಂಚಾರದಿಂದ ರಸ್ತೆ ಬಿರುಕು ಬಿಡುತಿದ್ದು ಇದನ್ನು ತಡೆಯಬೇಕೆಂದು ನಾಗರಿಕ ಹಿತರಕ್ಷಣಾ ವೇದಿಕೆಯವರು ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯವರಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದರೆ ವಾಹನ ಓಡಾಟ ನಿಂತಿರಲಿಲ್ಲ. ಇದರಿಂದ ಬೇಸರ ಗೊಂಡ ವೇದಿಕೆಯ ಪದಾಧಿಕಾರಿಗಳು ಬೇಸರಗೊಂಡರು, ತಾವೇ ಸಮಾಲೋಚನೆ ನಡೆಸಿ ವಾಹನ ತಡೆಯಲು ನಿರ್ಧರಿಸಿದರು.
ಅದರಂತೆ ಮಾ.19ರಂದು ರಾತ್ರಿ ಸಾಮರ್ಥ್ಯಕ್ಕಿಂತ ಮಿತಿ ಮೀರಿ ಜಲ್ಲಿ ಹೇರಿಕೊಂಡು ಬಂದ ಲಾರಿಯನ್ನು ಅಡ್ತಲೆಯಲ್ಲಿ ವೇದಿಕೆಯ ಪದಾಧಿಕಾರಿಗಳು ತಡೆದರು. ಬಳಿಕ ಸುಳ್ಯ ಪೋಲೀಸರಿಗೆ ವಿಷಯ ತಿಳಿಸಲಾಯಿತು. ಎಸ್.ಐ. ಸಂತೋಷ್ ನೇತೃತ್ವದ ತಂಡ ಸ್ಥಳಕ್ಕೆ ಬಂದು ಲಾರಿಯನ್ನು ವಶಕ್ಕೆ ಪಡೆದರು.



ಮಾ.21ರಂದು ರಾತ್ರಿ ಇದೇ ರಸ್ತೆಯಲ್ಲಿ ಮರದ ಲೋಡ್ ನ ಲಾರಿಯೊಂದು ಬಂದಾಗ ಅದನ್ನು ಕೂಡಾ ವೇದಿಕೆಯವರು ತಡೆದು ಪೊಲೀಸ್ ಇಲಾಖೆಗೆ ತಿಳಿಸಿದ್ದು, ಕಲ್ಲುಗುಂಡಿ ಹೊರ ಠಾಣೆ ಪೊಲೀಸ್ ರವರು ಸ್ಥಳಕ್ಕೆ ಆಗಮಿಸಿ ವಾಹನವನ್ನು, ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಕುರಿತು ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರಿಪ್ರಸಾದರು, “ಹೋರಾಟದ ಮೂಲಕ ಈ ರಸ್ತೆ ಅಭಿವೃದ್ಧಿ ಆಗಿದೆ. ಈ ರಸ್ತೆಯಲ್ಲಿ ಮಿತಿಗಿಂತ ಹೆಚ್ಚು ಭಾರ ಹೊತ್ತು ವಾಹನ ಓಡಾಟ ಅವಕಾಶ ಇಲ್ಲ. ಆದರೂ ಪ್ರತಿನಿತ್ಯ ವಾಹನ ಓಡಾಡುತ್ತಿದೆ. ನಮ್ಮ ರಸ್ತೆಯನ್ನು ಉಳಿಸಲು ನಾವು ಅಧಿಕ ಭಾರದ ವಾಹನವನ್ನು ತಡೆದು ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡುತ್ತೇವೆ.ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.