ಸಭೆಗೆ ಹಾಜರಾದ ಅಧಿಕಾರಿಗಳ ಸಮಯ ಪಾಲನೆಗೆ ಅಧ್ಯಕ್ಷರಿಂದ ಪ್ರಸಂಸೆ
ಸರಕಾರದ ಸುತ್ತೋಲೆಯಂತೆ ಕೆಲಸ ನಿರ್ವಹಿಸಲು ತಾ.ಪಂ ಆಡಳಿತಾಧಿಕಾರಿ ಜಯಲಕ್ಷ್ಮಿಯವರಿಂದ ಅಧಿಕಾರಿಗಳಿಗೆ ನಿರ್ದೇಶನ
ಸುಳ್ಯ ತಾಲೂಕು ಪಂಚಾಯತ್ ಅಧಿಕಾರಿಗಳ ಸಾಮಾನ್ಯ ಸಭೆ ಮಾ 28 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯತ್ ಆಡಳಿತಾಧಿಕಾರಿಯಾದ ಶ್ರೀಮತಿ ಜಯಲಕ್ಷ್ಮಿ ಯವರು ವಹಿಸಿದ್ದರು.

ಸಭಾ ಅಧ್ಯಕ್ಷರು ಸಭೆಗೆ ಬಂದಾಗ ವಿವಿಧ ಇಲಾಖಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದು ಸಭಾಂಗಣದಲ್ಲಿ ಉಪಸ್ಥಿತರಿದ್ದದ್ದನ್ನು ಗಮನಿಸಿ ಅಧಿಕಾರಿಗಳ ಸಮಯ ಪಾಲನೆ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು.

ಬಳಿಕ ತಾ.ಪಂ ಮುಖ್ಯ ಕಾರ್ಯನಿರ್ಹಣಾಧಿಕಾರಿ ರಾಜಣ್ಣ ರವರು ಜ 23 ರಂದು ನಡೆದ ತಾ ಪಂ ಸಾಮಾನ್ಯ ಸಭೆಯ ನಡವಳಿಗೆಯ ಪಾಲನಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ಆರಂಭದಲ್ಲಿ ಸುಳ್ಯ ನಗರದ ಘನ ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ದುಗಲಡ್ಕದಲ್ಲಿ ಗುರುತಿಸಿ ರುವ ಜಾಗದ ಅರಣ್ಯ ಇಲಾಖೆಯವರ ಆಕ್ಷೇಪದ ಬಗ್ಗೆ ಮತ್ತು ಕಳೆದ ಸಭೆ ಯಲ್ಲಿ ತೀರ್ಮಾನ ಕೈ ಗೊಂಡ ವಿಷಯದ ಬಗ್ಗೆ ಪ್ರಸ್ತಾಪ ನಡೆಯಿತು.
ಈ ಬಗ್ಗೆ ತಹಶೀಲ್ದಾರರು ನೀಡಿರುವ ಮಾಹಿತಿಯ ಪ್ರಕಾರ ಸಹಾಯಕ ಆಯುಕ್ತರು ಪುತ್ತೂರು ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರವನ್ನು ಪಡೆಯುವಂತೆ ಹಾಗೂ ಆಕ್ಷೇಪಣೆ ಇದ್ದಲ್ಲಿ ಬದಲಿ ಜಾಗ ಗುರುತಿಸಿ ಕಡತ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿ ಕಡತವನ್ನು ಹಿಂತಿರುಗಿಸಿರುತ್ತಾರೆ ಹಾಗೂ ಈ ಬಗ್ಗೆ ವಲಯ ಅರಣ್ಯಾಧಿಕಾರಿ ಸುಳ್ಯ ವಲಯ ಇವರು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ಇವರಿಗೆ 08.11.2024ರಂದು ನಿರಾಕ್ಷೇಪಣಾ ದೃಢಪತ್ರವನ್ನು ನೀಡುವ ಬಗ್ಗೆ ಮುಂದಿನ ಕ್ರಮದ ಬಗ್ಗೆ ಬರೆದ ಪತ್ರದ ಪ್ರತಿಯನ್ನು ಈ ಕಛೇರಿಗೆ ನೀಡಿರುವ ಬಗ್ಗೆ ವರದಿಯನ್ನು ಮಂಡಿಸಿ ದರು.
ಈ ವೇಳೆ ಅರಣ್ಯ ಅಧಿಕಾರಿ ಮಂಜುನಾಥ್ ರವರು ಉತ್ತರ ನೀಡಿ ಸುಳ್ಯ ಪಟ್ಟಣ ಪಂಚಾಯತ್ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸುಳ್ಯ ಕಸಬಾ ಗ್ರಾಮದ ಸ.ನಂ 89/1ರಲ್ಲಿ ಜಮೀನು ಕಾಯ್ದಿರಿಸುವ ಸಂಬಂಧ ಇಲಾಖಾ ನಿರಾಕ್ಷೇಪಣಾ ದೃಢಪತ್ರ ಕೋರಿರುವ ಬಗ್ಗೆ ಕಡತಕ್ಕೆ ಸಂಬಂಧಿಸಿ ವರದಿಯನ್ನು ಕಛೇರಿಯಿಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ಉಪ ವಿಭಾಗ ಸುಳ್ಯ ಇವರ ಮುಖಾಂತರ ಇಲಾಖಾ ನಿರಾಕ್ಷೇಪಣಾ ದೃಢಪತ್ರ ನೀಡಲು ಅಧಿಕಾರ ಹೊಂದಿರುವ ಸಲ್ಲಿಸಲಾಗಿದೆ. ಇದರ ಪ್ರತಿಯನ್ನು ತಹಶೀಲ್ದಾರರಿಗೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಘನತ್ಯಾಜ್ಯ ವಿಲೇವಾರಿಗೆ ಜಮೀನು ನಿಗದಿಪಡಿಸುವ ಬಗ್ಗೆ ಈ ಹಿಂದಿನ ಸಭೆಯಲ್ಲಿ ಅರಣ್ಯಾಧಿಕಾರಿ, ಕಂದಾಯ ಇಲಾಖೆ, ಭೂ ದಾಖಲೆಗಳ ಇಲಾಖೆ, ಸುಳ್ಯ ನ.ಪಂ. ಜಂಟಿ ಸ್ಥಳ ಪರಿಶೀಲಿಸಲಾಗಿದ್ದು, ಆ ಜಮೀನಿನ ಪಹಣಿಯಲ್ಲಿ ಸರಕಾರಿ ಎಂದು ನಮೂದಾಗಿದ್ದು ಅರಣ್ಯ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ನೀಡುವ ಬಗ್ಗೆ ಸೂಚಿಸಲಾಗಿತ್ತು. ಈ ಬಗ್ಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಸುಳ್ಯ ನ.ಪಂ.ಮುಖ್ಯಾಧಿಕಾರಿ ಸುಧಾಕರ್ ತಿಳಿಸಿದರು.
ಆಡಳಿತಾಧಿಕಾರಿ ಜಯಲಕ್ಷಿ ಮಾತನಾಡಿ, ಅರಣ್ಯ ಇಲಾಖೆಯ ನೋಡೆಲ್ ಅಧಿಕಾರಿ ನಾನೇ ಆಗಿದ್ದರೂ ಇಲ್ಲಿನ ಸಮಸ್ಯೆ ಬೇರೆಯದೇ ಇದೆ. ಈ ಬಗ್ಗೆ ಪುತ್ತೂರು ಸಹಾಯಕ ಆಯುಕ್ತರ ಜೊತೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದರು.
ಶಿಥಿಲ ಅಂಗನವಾಡಿಗೆ ಹೊಸ ಕಟ್ಟಡಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸಲು ಸೂಚನೆ
ತಾಲೂಕಿನ ಶಿಥಿಲ ಅಂಗನವಾಡಿ ಕೇಂದ್ರಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಸುಳ್ಯ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಅವರು ಸಿಡಿಪಿಒ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಸುಳ್ಯ ತಾಲೂಕಿನ ಅಂಗನವಾಡಿಗಳ ಪರಿಸ್ಥಿತಿಗಳ ಬಗ್ಗೆ ಸಿಡಿಪಿಒ ಅವರಲ್ಲಿ ಮಾಹಿತಿ ಕೇಳಿದ ಸಂದರ್ಭದಲ್ಲಿ ಉತ್ತರಿಸಿದ ಸಿಡಿಪಿಒ ಶೈಲಜಾ ಅವರು ಸುಳ್ಯ ತಾಲೂಕಿನಲ್ಲಿ ಒಟ್ಟು 150 ಅಂಗನವಾಡಿ ಕೇಂದ್ರ ಗಳಿದ್ದು ಅದರಲ್ಲಿ 147 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿದ್ದು ಅದರಲ್ಲಿ 109 ಆರ್ ಸಿ ಸಿ ಚಾವಣಿ ಹೊಂದಿರುವ 41 ಕೇಂದ್ರ ಗಳು ಹಂಚಿನ ಚಾವಣಿ ಹೊಂದಿರುವು ದಾಗಿದೆ ಎಂದು ಮಾಹಿತಿ ನೀಡಿದರು. ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ, ಬೆಳ್ಳಾರೆ ಗ್ರಾಮದ ಪಾಟಾಜೆ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಶಿಥಿಲಗೊಂಡಿದೆ.ಇಲ್ಲಿಗೆ ಹೊಸ ಕಟ್ಟಡ ಅವಶ್ಯಕತೆಯಿದೆ. ಮಳೆಗಾಲ ಆರಂಭದಲ್ಲಿ ಕೇಂದ್ರವನ್ನು ಸಮೀಪದ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮ ವಹಿಸಲಾಗುವುದು ಎಂದರು.
ಈ ವೇಳೆ ಮಾತನಾಡಿದ ಆಡಳಿತಾಧಿಕಾರಿ ಜಯಲಕ್ಷಿ ರವರು ಅಂಗನವಾಡಿಗಳಿಗೆ ಹೊಸ ಕಟ್ಟಡಕ್ಕೆ ನರೇಗಾ ಯೋಜನೆಯಲ್ಲಿ ಅವಕಾಶ ಇದೆ. ನೀವು ನನಗೆ ಎರಡೂ ಅಂಗನವಾಡಿಗಳ ಪ್ರಸ್ತಾವನೆಯನ್ನು ಇಂದೇ ಸಲ್ಲಿಸಿ, ನಾನು ನರೇಗಾ ಯೋಜನೆಯಲ್ಲಿ ಅನುದಾನ ಮಂಜೂರು ಮಾಡುತ್ತೇನೆ. ಆದಷ್ಟು ಬೇಗ ಹೊಸ ಕಟ್ಟಡ ಆಗಲಿ ಎಂದರು.
ಮಾಹಿತಿ ನೀಡದೇ ಗೈರಾದವರಿಗೆ ನೋಟೀಸ್
ತಾಲೂಕು ಪಂಚಾಯತ್ ಸಾಮಾನ್ಯ ಸಭೆ ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸಿ ಮಾಡುವ ಸಭೆ. ಈ ಸಭೆಗೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಾಗಬೇಕು. ನಮಗೆ ಮಾಹಿತಿ ನೀಡದೇ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ತಾ.ಪಂ. ಇ ಒ ರಾಜಣ್ಣ ಅವರಿಗೆ ಆಡಳಿತಾಧಿಕಾರಿ ನಿರ್ದೇಶನ ನೀಡಿದ ಘಟನೆಯೂ ಸಭೆ ಯಲ್ಲಿ ನಡೆಯಿತು.



ಸುತ್ತೋಲೆಯಂತೆ ಕೆಲಸ ಮಾಡಿ
ಇಲಾಖೆಗಳಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ತಿಳಿಸಿ ಎಂದು ಆಡಳಿತಾಧಿಕಾರಿ ಅಧಿಕಾರಿಗಳಲ್ಲಿ ತಿಳಿಸಿದಾಗ ಈ ವೇಳೆ ಮಾತನಾಡಿದ ಪಂಚಾಯತ್‌ರಾಜ್ ಇಂಜೀನಿಯರಿಂಗ್ ವಿಭಾಗದ ಅಧಿಕಾರಿ ಅವರು ನಮ್ಮಲ್ಲಿ ಇಂಜೀನಿಯರ್‌ಗಳ ಕೊರತೆಯಿಂದ ನರೇಗಾ ಯೋಜನೆಯ ಕಾಮಗಾರಿಗೆ ದಿನಂಪ್ರತಿ ಭೇಟಿ ನೀಡಿ ಹಾಜರಾತಿ ಪಡೆಯಲು ಕಷ್ಟವಾಗುತ್ತಿದ್ದು, ಇದನ್ನು ಆಯಾ ಗ್ರಾಮದ ಪಿಡಿಒ ಅವರಲ್ಲಿ ಮಾಡಿಸಲು ಸೂಚಿಸಬಹುದೇ ಎಂದು ಕೇಳಿದರು.
ಈ ವೇಳೆ ಮಾತನಾಡಿದ ಜಯಲಕ್ಷಿ ರವರು ಅದು ನಿಮ್ಮ ಕರ್ತವ್ಯ. ಅದನ್ನು ನೀವೇ ಮಾಡಬೇಕು. ಸರಕಾರದ ಸುತ್ತೋಲೆಯೂ ಕೂಡ ಹಾಗೇಯೇ ಇದೆ. ಅದನ್ನು ಹೊರತು ಪಡಿಸಿ ಸುಳ್ಯಕ್ಕೊಂದು ಮಾರ್ಗಸೂಚಿಸಿ ಮಾಡಲು ಸಾಧ್ಯವಾಗುತ್ತಿಲ್ಲ. ಸಿಬ್ಬಂದಿ ಕೊರೆತೆ ರಾಜ್ಯದಲ್ಲೇ ಇದೆ. ಅನುಸರಿಸಿಕೊಂಡು ನಮ್ಮ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ವಿವಿಧ ವಿಚಾರ, ಇಲಾಖೆಗಳ ಪ್ರಗತಿ, ವಾರ್ಷಿಕ ವೆಚ್ಚಗಳ ಬಗ್ಗೆ ಆಡಳಿತಾಧಿಕಾರಿ ಅವರು ಇಲಾಖಾ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಸುಳ್ಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಸ್ವಾಗತಿಸಿ, ವಂದಿಸಿದರು.