ಪುತ್ತೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು ೨೩ ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಮತ್ತು ಕಡಬ ತಾಲೂಕಿನಲ್ಲಿರುವ ೧೪ ಶಾಖೆಗಳ ಮೂಲಕ ನೀಡಿಕೊಂಡು ಬರುತ್ತಿದ್ದು, ೨೦೨೪-೨೫ ನೇ ಸಾಲಿನ ಆರ್ಥಿಕ ವರ್ಷದಲ್ಲಿ ತನ್ನ ಸಂಘದ ಸದಸ್ಯರ ಸಹಕಾರದಿಂದ ಅತ್ಯುತ್ತಮ ಕಾರ್ಯದಕ್ಷತೆಯನ್ನು ಸಾಧಿಸಿ ಸಂಘವು ೮೧೩.೩೩ ಕೋಟಿ ರೂ. ಗಳ ದಾಖಲೆಯ ವ್ಯವಹಾರವನ್ನು ನಡೆಸಿ ರೂ.೨.೦೧ ಕೋಟಿ ರೂ. ಗಳಷ್ಟು ಲಾಭವನ್ನು ಗಳಿಸಿರುತ್ತದೆ ಎಂದು ಸಂಘದ ಅಧ್ಯಕ್ಷರಾದ ಸವಣೂರು ಕೆ.ಸೀತಾರಾಮ ರೈ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸಂಘದ ೨೦೨೪-೨೫ ನೇ ಆರ್ಥಿಕ ಸಾಲಿನ ಅಂತ್ಯಕ್ಕೆ ಸಂಘದಲ್ಲಿ ಒಟ್ಟು ೮೯೧೭ ಸದಸ್ಯರಿದ್ದು ಒಟ್ಟು ೩.೩೯ ಕೋಟಿ ರೂ. ಗಳಷ್ಟು ಪಾಲು ಬಂಡವಾಳವನ್ನು ಹೊಂದಿರುತ್ತದೆ. ಸಂಘವು ೧೫೦.೪೦ ಕೋಟಿ ರೂ. ಠೇವಣಿಯನ್ನು ಹೊಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ ೧೪ ರಷ್ಟು ಹೆಚ್ಚಳವಾಗಿದೆ. ರೂ. ೧೩೩.೨೧ ಕೋಟಿ ರೂ.ಗಳಷ್ಟು ಹೊರಬಾಕಿ ಸಾಲ ಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.೨೧.೫೦ ರಷ್ಟು ಹೆಚ್ಚಳವಾಗಿದೆ. ಸಂಘವು ೩.೦೨ ಕೋಟಿ ರೂ.ಗಳಷ್ಟು ಕ್ಷೇಮ ನಿಧಿ ಮತ್ತು ೨.೮೪ ಕೋಟಿ ರೂ. ಗಳಷ್ಟು ಇತರ ನಿಧಿಗಳನ್ನು ಹೊಂದಿ, ರೂ. ೧೬೧ ಕೋಟಿಗಳಷ್ಟು ದುಡಿಯುವ ಬಂಡವಾಳವನ್ನು ಹೊಂದಿರುತ್ತದೆ. ಸಂಘವು ಸ್ಥಾಪನೆಗೊಂಡ ವರ್ಷದಿಂದ ತನ್ನ ಸದಸ್ಯರಿಗೆ ಡಿವಿಡೆಂಡ್ ನೀಡಿಕೊಂಡು ಬರುತ್ತಿರುವ ಮತ್ತು ಆಡಿಟ್ ವರ್ಗದಲ್ಲಿ ಸತತವಾಗಿ ಎ ತರಗತಿಯನ್ನು ಕಾಯ್ದುಕೊಂಡು ಬಂದಿರುವ ಏಕೈಕ ಸಂಘವಾಗಿರುತ್ತದೆ.
ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡವನ್ನು ಹೊಂದುವ ಉದ್ದೇಶದಿಂದ ಕಡಬ ತಾಲೂಕಿನ ಸವಣೂರು ಗ್ರಾಮದಲ್ಲಿ ೦.೭೫ ಸೆಂಟ್ಸ್ ನಿವೇಶನವನ್ನು ಸಂಘದ ಹೆಸರಿನಲ್ಲಿ ಖರೀದಿಸಿದ್ದು, ಸದ್ರಿ ನಿವೇಶನದಲ್ಲಿ ನೂತನ ಕೇಂದ್ರ ಕಚೇರಿಯ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ ೨೦೨೫-೨೬ ನೇ ಸಾಲಿನಲ್ಲಿ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಮತ್ತು ಮಂಗಳೂರಿನಲ್ಲಿ ಹೊಸ ಶಾಖೆಯನ್ನು ತೆರೆಯುವ ಯೋಜನೆಯನ್ನು ರೂಪಿಸಲಾಗಿದೆ. ಸಂಘದಲ್ಲಿ ಪ್ರಸ್ತುತ ೬೪ ಸಿಬ್ಬಂದಿಗಳು ಮತ್ತು ೧೭ ನಿತ್ಯ ನಿಧಿ ಸಂಗ್ರಾಹಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಘದ ಪ್ರಗತಿ ಮತ್ತು ಸೇವೆಯನ್ನು ಪರಿಗಣಿಸಿ ಮಂಗಳೂರಿನಲ್ಲಿ ನಡೆದ ೬೪ ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘ ವೆಂದು ಪ್ರಶಸ್ತಿ ಪತ್ರ ಮತ್ತು ೨೦೨೩-೨೪ ನೇ ಸಾಲಿನಲ್ಲಿ ಮಂಗಳೂರಿನಲ್ಲಿ ನಡೆದ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆಯ ಸಂದರ್ಭದಲ್ಲಿ ಸಂಘಕ್ಕೆ ಉತ್ತಮ ಸಹಕಾರಿ ಸಂಘ ಎಂದು ಪ್ರಶಸ್ತಿ ಗಳಿಸಿರುತ್ತದೆ. ಮಾತ್ರವಲ್ಲದೆ ತನ್ನ ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿದ ಹಾಗೂ ಬ್ಯಾಂಕಿನೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಇವರಿಂದ ೫ ಬಾರಿ ಸಾಧನಾ ಪ್ರಶಸ್ತಿ ಪಡೆದುಕೊಂಡು ಸಹಕಾರಿ ಕ್ಷೇತ್ರದಲ್ಲಿ ತನ್ನ ಗರಿಮೆಯನ್ನು ಹೆಚ್ಚಿಸಿಕೊಂಡಿರುತ್ತದೆ.
ಸಂಘವು ತನ್ನ ಸಾಮಾಜಿಕ ಕಾರ್ಯದ ಮೂಲಕ ಶಾಖೆಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಲ್ಲಿ ೫ ರಿಂದ ೧೦ ನೇ ತರಗತಿಗಳಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ತನ್ನ ಧರ್ಮಾರ್ಥ ಮತ್ತು ವಿದ್ಯಾಸಂಸ್ಥೆ ನಿಧಿಯಿಂದ ಸಹಾಯಧನವನ್ನು ಮಹಾಸಭೆಯ ದಿನದಂದು ನೀಡಿಕೊಂಡು ಬರುತ್ತಿದ್ದು, ಈವರೆಗೆ ಒಟ್ಟು ರೂ.೨೬,೨೯,೦೦೦ ಮೊತ್ತವನ್ನು ಒಟ್ಟು ೧,೨೯೫ ವಿಧ್ಯಾರ್ಥಿಗಳಿಗೆ ಗಣ್ಯರ ಉಪಸ್ಥಿತಿಯಲ್ಲಿ ವಿತರಿಸಿರುತ್ತೇವೆ ಮಾತ್ರವಲ್ಲದೆ ಹಲವಾರು ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ನೀಡಿರುತ್ತೇವೆ. ಸಂಘದಲ್ಲಿ ಗ್ರಾಹಕರಿಗೆ ತ್ವರಿತ ಮತ್ತು ಪಾರದರ್ಶಕ ಸೇವೆಯನ್ನು ನೀಡುವ ಸಲುವಾಗಿ ನೆಫ್ಟ್, ಆರ್.ಟಿ.ಜಿ.ಎಸ್ ಸೌಲಭ್ಯ, ಎಸ್.ಎಂ.ಎಸ್ ಸೌಲಭ್ಯಗಳನ್ನು ಒದಗಿಸಲಾಗಿದೆ ಹಾಗೂ ಸದಸ್ಯರಿಗೆ ಸೋಲಾರ್ ವಾಟರ್ ಹೀಟರ್ ಮತ್ತು ಸೋಲಾರ್ ಲೈಟ್ ಅಳವಡಿಸಳು ಶೂನ್ಯ ಬಡ್ಡಿದರದಲ್ಲಿ ರೂ.೨,೦೦,೦೦೦/- ಸಾಲವನ್ನು ವಿತರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಈ ಸಾಧನೆಗೆ ಸಹಕರಿಸಿದ ಆಡಳಿತ ಮಂಡಳಿ ನಿರ್ದೇಶಕರಿಗೆ, ಸಿಬ್ಬಂದಿ ವರ್ಗಕ್ಕೆ, ಎಲ್ಲಾ ವರ್ಗದ ಗ್ರಾಹಕರಿಗೆ ಅಧ್ಯಕ್ಷರಾದ ಸವಣೂರು ಕೆ.ಸೀತಾರಾಮ ರೈ ಕೃತಜ್ಞತೆಯನ್ನು ಸಲ್ಲಿಸಿದರು.