ದೈವಾರಾಧನೆಯಲ್ಲಿ ಆಧುನಿಕತೆ ಸಲ್ಲದು – ತಮ್ಮಣ್ಣ ಶೆಟ್ಟಿ
ಬೆಳ್ಳಾರೆಯ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಇಂದು ನಡೆತುತ್ತಿದ್ದು, ಸಂಜೆ ಭಂಡಾರ ತೆಗೆದು, ಮೇಲೇರಿಗೆ ಅಗ್ನಿಸ್ಪರ್ಶ ನಡೆದ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಬೆಳ್ಳಾರೆ ಇದರ ಅಧ್ಯಕ್ಷ ಚಂದ್ರಹಾಸ ಮಣಿಯಾಣಿಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ತುಳುನಾಡ ದೈವಾರಾಧನೆ ಮತ್ತು ಸಾಂಸ್ಕೃತಿಕ ವಿಮರ್ಶಕರಾದ ತಮ್ಮಣ್ಣ ಶೆಟ್ಟಿಯವರು ಧಾರ್ಮಿಕ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಾವುದೇ ಅಷ್ಟಮಂಗಲ ಇಟ್ಟರೂ ಎಲ್ಲಿಯೂ ದೈವಗಳ ಆರಾಧನೆಯ ಬಗ್ಗೆ ಚಿಂತನೆ ಇಲ್ಲ. ಎಷ್ಟೋ ದೇವಸ್ಥಾನಗಳು ಲಕ್ಷ ಲಕ್ಷ ಖರ್ಚು ಮಾಡಿ ಬ್ರಹ್ಮ ಕಲಶ ಮಾಡುತ್ತಾರೆ. ಆದರೆ ಸರಳವಾಗಿ, ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ದೈವರಾಧನೆಯನ್ನು ಮಾಡುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ನಮ್ಮ ಪ್ರದರ್ಶನಕ್ಕಾಗಿ ಬಿಳಿ ಶಾಲು ಹಾಕಿ ಹಸಿರುಕಾಣಿಕೆ ಮೆರವಣಿಗೆ ಮಾಡಿ ಆಡಂಬರ ಮಾಡುವಂತದ್ದನ್ನೇ ಕಾಣುತ್ತೇವೆ. ದೈವಾರಧನೆ ಪ್ರಕೃತಿದತ್ತವಾಗಿ ನಡೆದುಬಂದಿರುವಂತದ್ದು. ಅದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕು ಎಂದರು. ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಅತಿಥಿಯಾಗಿ ಭಾಗವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಆನಂದ ರೈ ಪುಡ್ಕಜೆ ಮತ್ತು ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಪದ್ಮನಾಭ ಗೌಡ ಬೀಡು ವೇದಿಕೆಯಲ್ಲಿ ಗೌರವ ಉಪಸ್ಥಿಯಲ್ಲಿದ್ದರು. ಸೇವಾ ಸಮಿತಿಯ ಕಾರ್ಯದರ್ಶಿ ವಸಂತ ಗೌಡ ಪಡ್ಪು, ನಿಕಟಪೂರ್ವಾಧ್ಯಕ್ಷ ಬಾಲಕೃಷ್ಣ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಸದಸ್ಯ ಶಶಿಧರ ಮಣಿಯಾಣಿ ಪ್ರಾರ್ಥಿಸಿದರು.
ಸಮಿತಿಯ ಮಾಜಿ ಕಾರ್ಯದರ್ಶಿ ಸಂಜಯ್ ನೆಟ್ಟಾರು ಸ್ವಾಗತಿಸಿ, ಸಮಯ ಸದಸ್ಯ ಚೇತನ್ ಪಡ್ಪು ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.
ರಾತ್ರಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಕುಳಿಚಟ್ಟು ನಡೆಯಲಿದೆ. ಬಳಿಕ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಗೆಜ್ಜೆಗಿರಿ ಮೇಳ ಇವರಿಂದ ಯಕ್ಷಗಾನ ಬಯಲಾಟ ಕರಿಕಲ್ಲ ಬೈರವೆ ನಡೆಯಲಿದೆ. ಏ. 8 ರಂದು ಪ್ರಾತಃಕಾಲ 5.00 ಗಂಟೆಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಶ್ರೀ ಮಹಾಲಿಂಗೇಶ್ವರ ದೇವರ ಭೇಟಿ ನಂತರ ಮಾರಿಕಳ ನಡೆದು ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಮುಳ್ಳು ಗುಳಿಗ ದೈವದ ಕೋಲ ನಡೆಯಲಿದೆ.