ಹಜ್ ಯಾತ್ರಿಕರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿದ್ದ ವ್ಯವಸ್ಥೆಯನ್ನು ಬದಲಿಸಿ ಕೇರಳದ ಕಣ್ಣೂರಿಗೆ ನೀಡಿರುವುದು ಖಂಡನೀಯ: ಟಿ.ಎಂ. ಶಹೀದ್

0

ಮುಸಲ್ಮಾನರ ಪವಿತ್ರ ತೀರ್ಥ ಯಾತ್ರೆಯಾದ ಹಜ್ಜ್ ನಿರ್ವಹಿಸಲು ಮಂಗಳೂರು ವಿಮಾನ ನಿಲ್ದಾಣದಲ್ಲಿದ್ದ ವ್ಯವಸ್ಥೆಯನ್ನು ಬದಲಿಸಿ ಕೇರಳದ ಕಣ್ಣೂರಿಗೆ ನೀಡಿರುವುದು ಖಂಡನೀಯ ಎಂದು ಕೆಪಿಸಿಸಿ ವಕ್ತಾರ ಟಿ.ಎಂ. ಶಹೀದ್ ಹೇಳಿದ್ದಾರೆ.


ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಇತ್ತೀಚಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮುಸಲ್ಮಾನರ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಾ ಬರುತ್ತಿದೆ. ಹಲವಾರು ವರ್ಷಗಳಿಂದ ಇದ್ದ ಹಜ್ ಯಾತ್ರಿಕರಿಗೆ ಮಂಗಳೂರು ವಿಮಾನ ನಿಲ್ದಾಣದಿಂದ ತೆರಳಲು ಇದ್ದ ವ್ಯವಸ್ಥೆಯನ್ನು ಕೇರಳದ ಕಣ್ಣೂರು ಗೆ ಬದಲಿಸಿರುವ ಕಾರಣ ಯಾತ್ರಿಕರಿಗೆ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂದು ಹೇಳಿದರು. ಅಲ್ಲದೆ ಇದರಿಂದಾಗಿ ಮಂಗಳೂರು ಭಾಗದ ನಾನಾ ರೀತಿಯ ಉದ್ಯಮಿಗಳಿಗೆ, ಪ್ರವಾಸೋದ್ಯಮ ಕೇಂದ್ರಗಳಿಗೆ ಇದರಿಂದ ನಷ್ಟವೇ ಹೊರತು ಲಾಭವೇನು ಇಲ್ಲ.ಕಾರಣ ಹಜ್ಜ್ ಯಾತ್ರಿಕರನ್ನು ಬೀಳ್ಕೊಡಲು ನೂರಾರು ಮಂದಿ ಮಂಗಳೂರು ಪರಿಸರಕ್ಕೆ ಬರುತ್ತಿದ್ದರು.ಈ ಕಾರಣದಿಂದ ವ್ಯಾಪಾರ ವಹಿವಾಟುಗಳಲ್ಲಿ ಅಭಿವೃದ್ಧಿ ಕಾಣುತ್ತಿತ್ತು.


ಅಲ್ಲದೆ ಯಾವುದೇ ಧರ್ಮದಲ್ಲಿ ಪುಣ್ಯಕ್ಷೇತ್ರಗಳಿಗೆ ತೆರಳುವ ಯಾತ್ರಿಕರು ಅವರವರ ರಾಜ್ಯ ಮತ್ತು ಜಿಲ್ಲೆಗಳಿಂದ ತೆರಳುವುದೇ ಹೆಮ್ಮೆಯ ವಿಷಯವಾಗಿರುತ್ತದೆ.
ಆದರೆ ನಮ್ಮ ರಾಜ್ಯದಲ್ಲಿ ಮತ್ತು ನಮ್ಮ ಜಿಲ್ಲೆಯಲ್ಲಿ ವ್ಯವಸ್ಥೆಗಳು ಇದ್ದಾಗ ಅದನ್ನು ಉಪಯೋಗಿಸದೆ ಬೇರೆ ರಾಜ್ಯಗಳಿಗೆ ಅದನ್ನು ನೀಡುವುದು ಎಷ್ಟು ಸರಿ ಎಂದು ಅವರು ಕೇಳಿದರು.


ಮಂಗಳೂರು ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ಜನರಿಗೆ ಹೆಚ್ಚು ಅನುಕೂಲ ಆಗಿತ್ತು. ಆದರೆ ಈಗ ಮಂಗಳೂರಿನಿಂದ ಹಜ್ ಯಾತ್ರೆ ಕೈಗೊಳ್ಳಲು ಅವಕಾಶ‌ ಇಲ್ಲದೆ ಮಂಗಳೂರಿನ ಬದಲು ಕಣ್ಣೂರಿಗೆ ಹೋಗಲು ಸೂಚಿಸಲಾಗಿದೆ. ಇದರಿಂದ ಜಿಲ್ಲೆಯಿಂದ ಹಜ್ ಯಾತ್ರೆ ಕೈಗೊಳ್ಳುವ 800ಕ್ಕೂ ಅಧಿಕ ಯಾತ್ರಿಕರಿಗೆ ಸಮಸ್ಯೆ ಆಗಿದ್ದು ಖರ್ಚು ವೆಚ್ಚಕೂಡ 50 ಸಾವಿರ ಹೆಚ್ಚು ನೀಡಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಸ್.ಎಂ.ಕೃಷ್ಣ ಕೇಂದ್ರ ವಿದೇಶಾಂಗ ಸಚಿವರಾಗಿದ್ದ ಸಂದರ್ಭದಲ್ಲಿ ನಮ್ಮೆಲ್ಲರ ಪ್ರಯತ್ನದಿಂದ ಮಂಗಳೂರಿನಲ್ಲಿ ಎಂಬಾರ್ಕೇಷನ್ ಸೆಂಟರ್
ಆರಂಭಗೊಂಡು 2009ರಲ್ಲಿ ಪ್ರಥಮ ಹಜ್ ವಿಮಾನ ಆರಂಭವಾಗಿತ್ತು
.

ಬಳಿಕ ಪ್ರತಿ ವರ್ಷ ದ.ಕ.ಹಾಗೂ ಸಮೀಪದ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ಹಾಸನ, ಕೊಡಗು ಜಿಲ್ಲೆ ಸೇರಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ‌ ಮಂದಿ ಹಜ್ ಯಾತ್ರಿಕರು ಇಲ್ಲಿಂದ‌ ಯಾತ್ರೆ ಕೈಗೊಳ್ಳುತ್ತಿದ್ದರು. ಕೇರಳದ ಕಾಸರಗೋಡು ಮುಂತಾದ ಕಡೆಗಳಿಂದ ಯಾತ್ರಿಕರು ಮಂಗಳೂರಿನಿಂದಲೇ ಹೆಚ್ಚಾಗಿ ಹೊರಡುತ್ತಿದ್ದರು. ಆದ್ದರಿಂದ ಹಜ್ ಯಾತ್ರಿಕರಿಗೆ ಆಗಿರುವ ಸಮಸ್ಯೆ ಪರಿಹರಿಸಲು ಮಂಗಳೂರಿನಿಂದ ಎಂಬಾರ್ಕೇಷನ್ ಅಗಬೆಕು ಎಂದು ಒತ್ತಾಯಿಸಿದ ಅವರು ಈ ವಿಚಾರವನ್ನು ಹಜ್ ಕಮಿಟಿ ಅಧ್ಯಕ್ಷ ಅಬ್ದುಲ್ಲ ಕುಟ್ಟಿ ಅವರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.


ಮಸ್ಲೀಂ ಸಮುದಾಯದ ಬಹಳ ಪ್ರಮುಖವಾದ ಹಜ್ ಯಾತ್ರೆಗೆ ಆಗಿರುವ ಈ ಸಮಸ್ಯೆಯನ್ನು ಪರಿಹರಿಸಲು ಸರಕಾರ ಹಾಗು ಜಿಲ್ಲೆಯ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ. ರಾಜ್ಯ ಹಾಗೂ ಕೇಂದ್ರಲ್ಲಿ ಬಿಜೆಪಿ ಸರ್ಕಾರದಲ್ಲಿ ಒಬ್ಬರೇ ಒಬ್ಬ ಮುಸ್ಲಿಂ ಸಮುದಾಯದ ಸಚಿವ ಇಲ್ಲ.
ಇದು ಕೂಡ ಮುಸ್ಲಿಂ ಸಮುದಾಯದವರಿಗೆ ತುಂಬಾ ಹಿನ್ನಡೆಯಾಗಿದೆ. ಹಿಂದೂ ಧರ್ಮದ ಸಚಿವರುಗಳಿಗೆ ಹಜ್ಜ್ ಕ್ರಮಗಳ ಬಗ್ಗೆ ಏನು ಗೊತ್ತು?
ಉದಾಹರಣೆಗೆ ನಮ್ಮಂತವರನ್ನು ಮುಜರಾಯಿ ಇಲಾಖೆಗೆ ಸಚಿವರನ್ನಾಗಿ ಮಾಡಿದರೆ ಅದರಿಂದ ಏನು ಲಾಭ ಎಂದು ಕೇಳಿದರು.


ಕೇಂದ್ರ ಹಾಗೂ ರಾಜ್ಯ ಸರಕಾರ ಮಂಗಳೂರನ್ನು ಕಡೆಗಣಿಸುತ್ತಿದೆ. ತಿರುವನಂತಪುರದಿಂದ ಕಣ್ಣೂರಿಗೆ ಇದ್ದ ವಂದೇ ಮಾತರಂ ಭಾರತ್ ಎಕ್ಸ್‌ಪ್ರೆಸ್‌ ರೈಲನ್ನು ಕಾಸರಗೋಡಿಗೆ ವಿಸ್ತರಿಸಲಾಗಿದೆ.ಅದನ್ನು ಜನರ ಅನುಕೂಲದ ದೃಷ್ಟಿಯಿಂದ ಮಂಗಳೂರಿನ ತನಕ ವಿಸ್ತರಿಸಿದ್ದರೆ ಕರ್ನಾಟಕದ ಜನತೆಗೆ ಅದರಿಂದ ಒಳಿತಾಗುತ್ತಿತ್ತು.
ಈ ವ್ಯವಸ್ಥೆಗಳನ್ನೆಲ್ಲ ನಮ್ಮ ಕ್ಷೇತ್ರದ ಸಂಸದರಾಗಿರುವವರು ಮಾಡಿಕೊಡಬೇಕಾಗಿತ್ತು. ಆದರೆ ಈ ರೀತಿಯ ಜನಪಯೋಗಿ ಕೆಲಸ ಕಾರ್ಯಗಳನ್ನು ಅವರು ಮಾಡುತ್ತಿಲ್ಲ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ಅಡ್ವಕೇಟ್ ಮೂಸಾ ಕುಂಞಿಪೈಂಬೆಚ್ಚಾಲ್, ಅಡ್ವಕೇಟ್ ಅಬೂಬಕ್ಕರ್ ಅಡ್ಕಾರ್, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ ಉಪಸ್ಥಿತರಿದ್ದರು.