ಜಾಲ್ಸೂರು ಗ್ರಾ.ಪಂ. ಮೀಸಲಾತಿಯಲ್ಲಿ ಮಹಿಳೆಯರದ್ದೇ ಪಾರುಪತ್ಯ

0

ಹಿಂದುಳಿದ ವರ್ಗ ಎ ಮಹಿಳೆಗೆ ಅಧ್ಯಕ್ಷ ಸ್ಥಾನ

ಹಿಂದುಳಿದ ವರ್ಗ ಬಿ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಮೀಸಲು

ಜಾಲ್ಸೂರು ಗ್ರಾಮ ಪಂಚಾಯತಿ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದ್ದು, ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡೂ ಮಹಿಳೆಯರಿಗೆ ಹಂಚಿಕೆಯಾಗಿದೆ.

ಒಟ್ಟು 17 ಸದಸ್ಯ ಬಲದ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತ 11 ಮಂದಿ ಸದಸ್ಯರು, ಕಾಂಗ್ರೆಸ್ ಬೆಂಬಲಿತ 3 ಮಂದಿ ಸದಸ್ಯರು ಹಾಗೂ ಬಿಜೆಪಿ ಬಂಡಾಯವಾಗಿ ಗೆದ್ದು ಸದಸ್ಯರಾಗಿ ಆಯ್ಕೆಯಾಗಿರುವ 3 ಮಂದಿ ಸದಸ್ಯರುಗಳಿದ್ದಾರೆ.

ಪ್ರಸ್ತುತ ಪರಿಶಿಷ್ಟ ಜಾತಿ ಸ್ಥಾನದಿಂದ ಆಯ್ಕೆಯಾಗಿರುವ ಕೆ.ಎಂ. ಬಾಬು ಕದಿಕಡ್ಕ ಅವರು ಅಧ್ಯಕ್ಷರಾಗಿದ್ದು, ಹಿಂದುಳಿದ ವರ್ಗ ಎ ಮಹಿಳಾ ಸ್ಥಾನದಿಂದ ಆಯ್ಕೆಯಾಗಿರುವ ಶ್ರೀಮತಿ ಲೀಲಾವತಿ ಅವರು ಉಪಾಧ್ಯಕ್ಷರಾಗಿದ್ದಾರೆ.

ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಇದೀಗ ಮೀಸಲಾತಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದೆ. ಹಿಂದುಳಿದ ವರ್ಗ ಎ ಮಹಿಳಾ ಸ್ಥಾನದಿಂದ ಬಿಜೆಪಿ ಬೆಂಬಲಿತರಾಗಿ ಆಯ್ಕೆಯಾಗಿರುವ ಪ್ರಸ್ತುತ ಉಪಾಧ್ಯಕ್ಷರಾಗಿರುವ ಶ್ರೀಮತಿ ಲೀಲಾವತಿ ವಿನೋಬನಗರ, ಶ್ರೀಮತಿ ತಿರುಮಲೇಶ್ವರಿ ಮರಸಂಕ ಹಾಗೂ ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು ಅವರಿದ್ದು, ಈ ಮೂವರ ಪೈಕಿ ಒಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗಿದೆ.

ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿ ಬೆಂಬಲಿತರಾಗಿ ಈ ಸ್ಥಾನದಿಂದ ಆಯ್ಕೆಯಾದ ಅಭ್ಯರ್ಥಿಗಳಿಲ್ಲ. ಆದರೆ ಬಿಜೆಪಿ ಬಂಡಾಯವಾಗಿ ಆಯ್ಕೆಯಾಗಿರುವ ಶ್ರೀಮತಿ ಗೀತಾ ಗೋಪಿನಾಥ್ ಬೊಳುಬೈಲು ಹಾಗೂ ಕಾಂಗ್ರೆಸ್ ಬೆಂಬಲಿತರಾಗಿ ಆಯ್ಕೆಯಾಗಿರುವ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ ಅವರಿಗೆ ಉಪಾಧ್ಯಕ್ಷರಾಗುವ ಅರ್ಹತೆಯಿದ್ದು, ಮುಂದೆ ಯಾರಿಗೆ ಅದೃಷ್ಟ ಕೂಡಿ ಬರಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.