ಕಡಬ : ದೈವದ ಮೊರೆ ಹೋದ ಕಾಂಗ್ರೆಸ್ ನಿಂದ ಉಚ್ಚಾಟನೆಗೊಂಡ ಮುಖಂಡರು

0

ತಾವು ಪಕ್ಷ ವಿರೋಧಿ ಕೆಲಸ ಮಾಡಿಲ್ಲವೆಂದು ದೈವದ ಮುಂದೆ ಹರಕೆ

ಕಾಂಗ್ರೆಸ್ ನಿಂದ ಉಚ್ಚಾಟನೆಗೊಂಡ ಕಡಬ ಭಾಗದ ಮುಖಂಡರು ದೈವದ ಮೊರೆ ಹೋಗಿ ಚುನಾವಣಾ ಸಂದರ್ಭದಲ್ಲಿ ತಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡಿಲ್ಲ ಎಂದು ದೈವದ ಮುಂದೆ ಹೇಳಿಕೊಂಡಿರುವರಲ್ಲದೆ ತಮ್ಮ ಮೇಲೆ ಆರೋಪ ಮಾಡಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ಸೋತಿರುವ ಜಿ.ಕೃಷ್ಣಪ್ಪ ಅವರು ದೈವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ದೈವದ ಮುಂದೆ ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೋಡಿಂಬಾಳದ ಪ್ರಸಿದ್ಧ ಮಜ್ಜಾರು ಕ್ಷೇತ್ರಕ್ಕೆ ತೆರಳಿ ಪ್ರಾರ್ಥನೆ ಮಾಡಿಕೊಂಡಿರುವ ಮುಖಂಡರುಗಳು ಪ್ರಸಿದ್ಧ ಮಜ್ಜಾರು ರಾಜನ್ ದೈವದ ಸನ್ನಿಧಿಯಲ್ಲಿ ಹರಕೆ ಹೇಳಿದ್ದು, ತಮ್ಮನ್ನು ಪಕ್ಷದಿಂದ ಪಕ್ಷ ವಿರೋಧಿ ನೆಪ ಹೇಳಿ ಉಚ್ಛಾಟನೆ ಮಾಡಲಾಗಿದ್ದು, ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಓಟಿಗೆ ನಿಂತು ಪರಾಜಿತಗೊಂಡಿರುವ ಜಿ.ಕೃಷ್ಣಪ್ಪ ಅವರ ಮಾತನ್ನು ಕೇಳಿ ತಮ್ಮನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಕೃಷ್ಣಪ್ಪ ಅವರು ದೈವಸ್ಥಾನಕ್ಕೆ ಬಂದು ನಾವು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದಾಗಿ ಪ್ರಮಾಣ ಮಾಡಲಿ ಎಂದು ಆಗ್ರಹಿಸಿದ್ದಾರೆ.

” ನಾವು ನಂದಕುಮಾರ್ ಅವರನ್ನು ಬೆಂಬಲಿಸಿದ್ದರಲ್ಲಿ ತಪ್ಪು ಏನಿದೆ? ಅವರೇನು ಕಾಂಗ್ರೆಸ್ ಪಕ್ಷದ ವ್ಯಕ್ತಿಯಲ್ಲವೇ ? ಎಂದು ಪ್ರಶ್ನಿಸಿರುವ ಅವರು
ನಂದಕುಮಾರ್ ಅವರನ್ನು ಬೆಂಬಲಿಸಿದ್ದೇವೆ ಎನ್ನುವ ಕಾರಣದಿಂದ ನಮ್ಮನ್ನು ಪಕ್ಷ ವಿರೋಧಿಗಳು ಎಂದು ಹೇಳಲಾಗುತ್ತಿದೆ. ಕಡಬ ತಾಲೂಕಿನಲ್ಲಿ ಕಾಂಗ್ರೆಸ್ ಬಲಪಡಿಸಲು ನಾವು ಸತತವಾಗಿ ದುಡಿದಿದ್ದೇವೆ.

ಪಕ್ಷಕ್ಕಾಗಿ ನಾವು ಹಗಲಿರುಳೆನ್ನದೆ ಕೆಲಸ ಮಾಡಿದ್ದೇವೆ” ಎಂದು ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಬಳ್ಳೇರಿ, ಸುಧೀರ್ ದೇವಾಡಿಗ, ಶ್ರೀಮತಿ ಉಷಾ ಅಂಚನ್,ಶ್ರೀಮತಿ ಆಶಾ ಲಕ್ಷ್ಮಣ್ ಮೊದಲಾದವರು ದೈವದ ಮೊರೆ ಹೋಗಿ ದೈವದ ಮುಂದೆ ಕಣ್ಣೀರಿಟ್ಟು ಬೇಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.