ಇಂದು ನಾಗರ ಪಂಚಮಿ

0

ನಾಗನನ್ನು ದೇವರು ಎಂದು ಆರಾಧಿಸುವುದೇತಕ್ಕೆ…??

ನಾಗ ಪೂಜೆಯ ವಿಶೇಷತೆ ಏನು…??

ಪಂಚಮಿಯ ನಂತರ ಕೃಷ್ಣ ಪಕ್ಷದಲ್ಲಿ ಚಂದ್ರನು ಕ್ಷೀಣ ಗತಿಗೆ, ಶುಕ್ಲ ಪಕ್ಷದಲ್ಲಿ ವೃದ್ಧಿ ಗತಿಯತ್ತ ಸಾಗುತ್ತಾನೆ. ‘ ಚಂದ್ರ ಮಾಮನಸೋ ಜಾತಶ್ಚಕ್ಷೋ ಸೂರ್ಯೋ ಆಜಾಯತ’ ಎಂದಿದೆ ವೇದ ಸೂಕ್ತಗಳು. ಮನೋ ಕಾರಕ ಚಂದ್ರನ ಆಧಾರದಲ್ಲಿ ಬುದ್ಧಿಶಕ್ತಿ ಇರುವ ಮನುಜನ ಧೀ ಶಕ್ತಿಯು ವೃದ್ಧಿ ಕ್ಷಗಳನ್ನು ಉಂಟುಮಾಡುತ್ತದೆ. ಅಮವಾಸ್ಯೆಯಿಂದ ಶುದ್ಧ ಪಂಚಮಿಯ ವರೆಗೆ ಚಂದ್ರನು ಪೂರ್ಣ ಕ್ಷೀಣನಾಗಿ ವೃದ್ಧಿಯತ್ತ, ಹುಣ್ಣಿಮೆಯಿಂದ ಬಹುಳ ಪಂಚಮಿಯ ವರೆಗೆ ಸಾಗುವ ಈ ಸಮಯವು ಮನಸ್ಸಿನ ಹತೋಟಿಯನ್ನು ಕಳೆದುಕೊಳ್ಳುವ ಸಮಯವಾಗಿದೆ. ಅಂದರೆ, ಆಯಾ ವ್ಯಕ್ತಿಯ ಜಾತಕಕ್ಕೆ ಅನುಗುಣವಾಗಿ ಆಯಾಯ ವ್ಯಕ್ತಿಯಲ್ಲಿ ಇರುವ ಮನೋಭಾವನೆಗಳು ತೀವ್ರತೆಯನ್ನು ಪಡೆದುಕೊಳ್ಳುವ ಕಾಲ ಇದಾಗಿದೆ. ಇಂತಹ ಸಂದರ್ಭಗಳಲ್ಲಿ ಮನಸ್ಸಿನ ನಿಯಂತ್ರಣಕ್ಕಾಗಿ ವೃತಗಳ ಮೂಲಕ ಪರಿಹಾರ ಕಂಡುಕೊಂಡರು. ಇಂತಹ ವ್ರತ, ಹಬ್ಬಗಳಲ್ಲಿ ನಾಗರ ಪಂಚಮಿಯೂ ಒಂದು.

ನಮ್ಮ ಪ್ರಾಚೀನ ಋಷಿ ಮುನಿಗಳು ಪ್ರತಿಯೊಂದು ತಿಥಿಯೂ ಮಾಸ, ವರ್ಷವನ್ನು ಆಧರಿಸಿರುವಂತೆ ಮಾಡಿದ್ದರು. ಇದರಲ್ಲಿ ಪಂಚಮಿ ತಿಥಿಯೂ ಒಂದು. ಶ್ರಾವಣ ಮಾಸದ ಪಂಚಮಿ ತಿಥಿಯಂದು ನಾಗ ದೇವತೆಗಳನ್ನು ಆರಾಧಿಸಲಾಗುತ್ತದೆ. ನಾಗನು ಮೋಹ ನಿಯಂತ್ರಕನೂ ಹೌದು, ಮೋಹ ಸೃಷ್ಟಿಕರ್ತನೂ ಹೌದು. ನಾಗದೇವರು ಮಹಾ ಚೈತನ್ಯದ ( ವಿಷ್ಣು) ಸಂಕರ್ಷಣಾ ಶಕ್ತಿ. ಸಂಕರ್ಷಣಾ ಶಕ್ತಿ ಎಂದರೆ fast responding power. ಈ ನಾಗದೇವರ ಅಭಿಮಾನಿ ದೇವರು ಸುಬ್ರಹ್ಮಣ್ಯ. ಇವನನ್ನು ದೇವ ಸೇನಾನಿ ಎಂದು ಕರೆಯುತ್ತಾರೆ. ದೇವ ಎಂದರೆ ದೇವತೆಗಳು, ಬೆಳಕು, ಜ್ಞಾನ ಎಂದರ್ಥ. ಇಂತಹ ಪಂಚಮಿಯ ದಿನ ನಾಗದೇವರನ್ನು ಆರಾಧಿಸುವ ಮೂಲಕ ಶಕ್ತಿಯನ್ನು ಸಂಪನ್ನಗೊಳಿಸಿ, ಮೋಹಗಳ ನಿಯಂತ್ರಣ ಮಾಡಿಕೊಳ್ಳಲು ಪ್ರಾಜ್ಞರು ಸಲಹೆ ನೀಡಿದ್ದರು.

ವರ್ಷಕ್ಕೆ ಬರುವ 24 ಪಂಚಮಿ ವೃತಗಳ ಸಮಾರೋಪವೇ ಶ್ರಾವಣ ಶುಕ್ಲ ಪಂಚಮಿ. ಈ ದಿನ ನಾವು ಪ್ರತಿಷ್ಟಾಪನೆ ಮಾಡಿದ ನಾಗ ಸಾನ್ನಿಧ್ಯ ವನಗಳಲ್ಲಿ ಇರುವ ನಾಗ ಶಿಲೆಗೆ ಪಂಚಾಮೃತ, ಗೋಕ್ಷೀರ, ಜಲಾಭಿಷೇಕದ ಮೂಲಕ ಶುದ್ದ ಅಭಿಷೇಕ ಮಾಡಿಸಿ, ಗಂದ – ಚಂದನ, ಅರಿಶಿನ ಲೇಪಿಸಿ, ಪುಷ್ಪಾಲಂಕಾರ ಮಾಡಿ ಕಲ್ಪೋಕ್ತ ಪೂಜೆ ಮಾಡುವ ಸಂಪ್ರದಾಯವಿದೆ. ಗೋ ಎಂದರೆ ಭೂಮಿ ಎಂಬ ಅರ್ಥವಿದೆ. ಅದನ್ನು ಗೋವಿನ ಕ್ಷೀರದೊಂದಿಗೆ ನಾಗ ಶಿಲೆಯ ಅಭಿಷೇಕದ ಮೂಲಕ ಭೂಮಿಗೆ ಸಮರ್ಪಿಸಿದರೆ ಮಾನಸಿಕವಾಗಿ ಮೋಹ ನಿಯಂತ್ರಣವೂ,ಲೌಕಿಕವಾಗಿ ಭೂಮಿಯ ಫಲವತ್ತೆಯ ವೃದ್ಧಿಯೂ ಆಗುತ್ತದೆ. ವಾಸ್ತವವಾಗಿಯೂ ಲಕ್ಷಾಂತರ ಭಕ್ತರು ಈ ಸಂಪ್ರದಾಯ ಸುಕರ್ಮದಿಂದ ಕ್ಷೇಮವಾದದ್ದರಿಂದಲೇ ತಲೆತಲಾಂತರದಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಈ ನಾಗರ ಪಂಚಮಿಯಂದು ಭಕ್ತಿ – ಶ್ರದ್ಧೆಯಿಂದ,ನಾಗ ಸೇವೆ ಮಾಡುವ ಉದ್ದೇಶವನ್ನರಿತು, ಶುಭ್ರತೆಯಿಂದ, ಶುದ್ಧ ಮನಸ್ಸಿನಿಂದ ಆರಾಧಿಸೋಣ. ನಾಗದೇವರಿಗೆ ಹಾಲುಬಾಯಿ( ಅಕ್ಕಿ ಹಲ್ವಾ), ಪಂಚಾಮೃತ, ಹಣ್ಣು ಕಾಯಿ, ಅನ್ನ ನೈವೇದ್ಯ, ಕ್ಷೀರ ಪಾಯಸ ಇತ್ಯಾದಿ ಸಮರ್ಪಣೆ ಮಾಡಬಹುದು. ನಾಗದೇವರಿಗೆ ಕೆಂಪು ಹೂವು ಬಿಟ್ಟು ಬೇರೆ ಹಳದಿ, ಶ್ವೇತ ವರ್ಣಗಳ ಪರಿಮಳಯುಕ್ತ ಪುಷ್ಪಾರ್ಚನೆ ಮಾಡಬೇಕು. ನಾಗನಿಗೆ ಆಶ್ಲೇಷಾ ನಕ್ಷತ್ರ ವಿಶೇಷ. ಕೆಲವೆಡೆ ನಾಗ ತಂಬಿಲ, ಆಶ್ಲೇಷಾ ಬಲಿ, ತನು ತರ್ಪಣಾದಿಗಳು ನಡೆಯುತ್ತವೆ.

ಪರೀಕ್ಷತ್ ರಾಜನಿಗೆ ಋಷಿ ಶಾಪದಿಂದಾಗಿ ಸರ್ಪದಿಂದ ಸಾಯುವ ಸಮಯ ಬರುತ್ತದೆ. ಆಗ ಅವನ ಮಗ ಜನಮೇಜಯನು ಕೋಪಿಷ್ಟನಾಗಿ ಸರ್ಪಸತ್ರ ಮಾಡಿಸುತ್ತಾನೆ. ಅದರಲ್ಲಿ 86 ಪ್ರಭೇದಗಳ ಸರ್ಪ ಸಂಕುಲ ನಾಶ ಆಗುತ್ತದೆ. ಅದಲ್ಲದೆ ಅರ್ಜುನನ ಕಾಂಡವ ದಹನದಲ್ಲೂ ಸರ್ಪಗಳು ನಾಶವಾಗುತ್ತದೆ. ಇದು ಕೇವಲ ಕೃತ್ಯ ಮಾಡಿದ ವಂಶಕ್ಕೆ ಮಾತ್ರವಲ್ಲ,ಇಡೀ ದೇಶಕ್ಕೇ ದೋಷವಾಗುತ್ತದೆ. ಇದಕ್ಕಾಗಿಯೇ ಋಷಿಗಳು ಪರಿಹಾರಾರ್ಥವಾಗಿ ನಾಗಾರಾಧನೆ ಮಾಡಲು ಹೇಳಿದರು. ಅಂದಿನಿಂದ ಇಂದಿಗೂ ಇದು ನಡೆಯುತ್ತಲೇ ಇದೆ. ಜ್ಯೋತಿಷ್ಯದಲ್ಲಿ ರಾಹುವಿನಿಂದ ನಾಗನ ಚಿಂತನೆ ಮತ್ತು ಕೇತುವಿನಿಂದ ನಾಗನ ವಾಸಸ್ಥಾನದ ಉಲ್ಲೇಖವಿದೆ.