ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಕೊಡಿಯಾಲಬೈಲು ಸ.ಕಿ.ಪ್ರಾ. ಶಾಲೆ ದತ್ತು ಸ್ವೀಕಾರ

0

ತೆಂಗು, ಅಡಿಕೆ ತೋಟ ಮತ್ತು ಹಣ್ಣಿನ ತೋಟ ರಚನೆಗೆ ಚಾಲನೆ

ಶಾಸಕಿ ಭಾಗೀರಥಿ ಅವರಿಂದ ಗಿಡ ನೆಟ್ಟು ಉದ್ಘಾಟನೆ

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಉಬರಡ್ಕ ಗ್ರಾಮದ ಕೊಡಿಯಾಲಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಲಾಗಿದ್ದು, ಶಾಲೆಯ ಸ್ಥಳದಲ್ಲಿ ತೆಂಗು, ಅಡಿಕೆ ಮತ್ತು ಹಣ್ಣಿನ ತೋಟವನ್ನು ರಚನೆ ಮಾಡುವ ಕಾರ್ಯ ಆರಂಭಗೊಂಡಿದೆ. ಸುಮಾರು ಒಂದು ಎಕರೆ ಪ್ರದೇಶದಲ್ಲಿ ೩೦೦ ಅಡಿಕೆ ಗಿಡಗಳನ್ನು ನೆಟ್ಟು, ೧೦ಕ್ಕಿಂತ ಅಧಿಕ ತೆಂಗಿನ ಗಿಡಗಳನ್ನು ಹಾಗೂ ಹಣ್ಣಿನ ಗಿಡಗಳನ್ನು ೪ ವರ್ಷ ಸಲಹಿ, ಅಡಿಕೆ ಫಲ ಕೊಡಲು ಆರಂಭ ಮಾಡುವಾಗ ಅದನ್ನು ಶಾಲಾ ಎಸ್‌ಡಿಎಂಸಿ ಗೆ ವಹಿಸಿ ಕೊಡುವ ಯೋಜನೆ ಇದಾಗಿದ್ದು, ಆ.೨೮ ರಂದು ಶಾಸಕಿ ಕು.ಭಾಗೀರಥಿ ಮುರುಳ್ಯರವರು ತೆಂಗಿನ ಗಿಡ ನೆಟ್ಟು ಫಲಕ ಅನಾವರಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ದೀಪ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು “ನನ್ನ ಊರಾದ ಮುರುಳ್ಯದಲ್ಲಿ ಇರುವ ಸರಕಾರಿ ಶಾಲೆಯ ೧೦ ಸೆಂಟ್ಸ್ ಸ್ಥಳದಲ್ಲಿ ನಾವು ಅಡಿಕೆ ಗಿಡ ನೆಟ್ಟಿದ್ದೇವೆ. ಮುಂದಿನ ಜನಾಂಗಕ್ಕೆ ಭತ್ತ ಕೃಷಿಯನ್ನು ಪರಿಚಯಿಸುವ ಉದ್ದೇಶದಿಂದ ಶಾಲೆಗಳಲ್ಲಿ ಭತ್ತದ ಗದ್ದೆಗಳನ್ನು ಮಾಡುವ ಕಾರ್ಯವನ್ನು ಸಂಘ ಸಂಸ್ಥೆಗಳು ಮಾಡಬೇಕೆಂದು ನನ್ನ ಸಲಹೆ. ಕೃಷಿಗೆ ಪ್ರೋತ್ಸಾಹ ನೀಡುವ, ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದ ಲಯನ್ಸ್ ಸಂಸ್ಥೆಯ ಕಾರ್ಯ ಅತ್ಯಂತ ಶ್ರೇಷ್ಠವಾದುದು” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಲಯನ್ಸ್ ಮುಖ್ಯ ಜಿಲ್ಲಾ ಗ್ಲೋಬಲ್ ಸರ್ವೀಸ್ ಕೋ ಆರ್ಡಿನೇಟರ್ ಜಗದೀಶ ಎಡಪಡಿತ್ತಾಯರು ಮಾತನಾಡಿ “ವಿದ್ಯೆಗೆ ಪೂರಕವಾಗಿ ಕೃಷಿ ಜೀವನದ ಪಾಠವನ್ನು ಹೇಳಿ ಕೊಡುವ ಸುಳ್ಯ ಲಯನ್ಸ್ ಕ್ಲಬ್‌ನ ಕಾರ್ಯ ಶ್ಲಾಘನೀಯ” ಎಂದು ಹೇಳಿದರು.


ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪಗೌಡ ಕಣ್ಕಲ್ ಸಭಾಧ್ಯಕ್ಷತೆ ವಹಿಸಿದ್ದರು. “೫೦ ವರ್ಷ ಪೂರೈಸಿದ ಸುಳ್ಯ ಲಯನ್ಸ್ ಕ್ಲಬ್ ಅನೇಕ ಜನಪರ ಸಮಾಜ ಸೇವಾ ಕಾರ್ಯಕ್ರಮಗಳೊಂದಿಗೆ ಜನಮಾನಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಈ ವರ್ಷ ೫೧ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಲಯನ್ಸ್ ಸಂಸ್ಥೆ ಹೊಸ ಯೋಜನೆ ರೂಪಿಸುವ ದೃಷ್ಠಿಯಿಂದ ಸರಕಾರಿ ಶಾಲೆಯೊಂದನ್ನು ದತ್ತು ಪಡೆದು ಅದರ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಸುಳ್ಯ ಕೊಡಿಯಾಲಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿ ಆ ಶಾಲೆಗೆ ಲಭ್ಯವಿರುವ ೨.೫೦ ಎಕ್ರೆ ಸ್ಥಳದಲ್ಲಿ ಅಡಿಕೆ, ತೆಂಗು ಮತ್ತು ಹಣ್ಣಿನ ಗಿಡಗಳನ್ನು ನೆಟ್ಟು ೪ ವರ್ಷಗಳ ಕಾಲ ಪೋಷಣೆ ಮಾಡಿ ಶಾಲಾಭಿವೃದ್ಧಿ ಸಮಿತಿಗೆ ಹಸ್ತಾಂತರ ಮಾಡಲಾಗುವುದು. ೩೦೦ ಅಡಿಕೆ ಗಿಡ ೧೦ ತೆಂಗಿನ ಗಿಡ ಮತ್ತು ಹಣ್ಣಿನ ಗಿಡಗಳನ್ನು ನೆಟ್ಟು ನೀರಿನ ಸಂಪರ್ಕಕ್ಕೆ ಸ್ಪಿಂಕ್ಲರ್ ಅಳವಡಿಸಲಾಗಿದೆ. ಗ್ರಾಮ ಪಂಚಾಯತ್ ಉಬರಡ್ಕ, ಶಾಲಾ ಅಭಿವೃದ್ಧಿ ಸಮಿತಿ ಮತ್ತು ಪೋಷಕ ಸಮಿತಿ, ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ವಿಷ್ಣು ಯುವಕ ಮಂಡಲ, ವರಲಕ್ಷ್ಮಿಯುವತಿ ಮಂಡಲ, ಹಳೆ ವಿದ್ಯಾರ್ಥಿ ಸಂಘ, ಸ್ಥಳೀಯ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ, ಮಹಮ್ಮಾಯಿ ಸಂಘ ಮತ್ತು ಇತರ ಸಂಘ ಸಂಸ್ಥೆಗಳು, ಇವರು ಸಹಕಾರ ನೀಡಿದ್ದಾರೆ. ಶಾಲೆಗೆ ನಿರಂತರ ಆದಾಯ ಕಲ್ಪಿಸುವುದು. ಒಂದು ಮಾದರಿ ಸರಕಾರಿ ಶಾಲೆಯನ್ನು ರೂಪಿಸುವುದು ಉದ್ದೇಶ. ಇದರೊಂದಿಗೆ ತಾಲೂಕಿನ ಅನೇಕ ಸರಕಾರಿ ಶಾಲೆಗಳಿಗೆ ಸ್ಥಳ ಲಭ್ಯವಿದ್ದು, ಇಂತಹ ಯೋಜನೆಗಳನ್ನು ಸಾರ್ವಜನಿಕರು ಸ್ಥಳೀಯ ಸಂಘ, ಸಂಸ್ಥೆಗಳು ಕೈಗೊಳ್ಳಲು ಪ್ರೇರಣೆಯಾಗಬಹುದೆಂಬ ಸಾಧ್ಯವಾಗುವುದು. ಆಶಯ. ಜೊತೆಗೆ ಮಕ್ಕಳಲ್ಲಿಯೂ ಕೃಷಿ ಆಸಕ್ತಿ ಮೂಡಲು ಸಹಕಾರಿಯಾಗಬಹುದು ಎಂದು ಅವರು ಹೇಳಿದರು.

ಮೆಡಿಕಲ್ ಓದಲು ವಿದ್ಯಾರ್ಥಿಗೆ ನೆರವು

ನೀಟ್ ಎಕ್ಸಾಂ ನಲ್ಲಿ ತೇರ್ಗಡೆಯಾಗಿ ಎಂಬಿಬಿಎಸ್ ವಿದ್ಯಾಭ್ಯಾಸಕ್ಕೆ ಆಯ್ಕೆಯಾಗಿರುವ ಅಜ್ಜಾವರ ಗ್ರಾಮದ ಬಯಂಬು ನಿವಾಸಿ ರಕ್ಷಿತ್ ಎಂಬ ವಿದ್ಯಾರ್ಥಿಗೆ ಫೀಸ್ ಕಟ್ಟುವುದಕ್ಕಾಗಿ ಲಯನ್ಸ್ ಸದಸ್ಯರು ಸ್ಥಳದಲ್ಲೆ ೨೬ ಸಾವಿರ ರೂ. ಗಳನ್ನು ಸಂಗ್ರಹಿಸಿ ನೀಡಿದರು. ಇದನ್ನು ಕಂಡು ಕಾರ್ಯಕ್ರಮಕ್ಕೆ ಬಂದಿದ್ದ ರೋಟರಿ ಕ್ಲಬ್‌ನವರು ೨ ಸಾವಿರ ರೂ.ಗಳನ್ನು ಹಾಗೂ ಕುದ್ಪಾಜೆ ಸೋಮಯ್ಯ ಮಾಸ್ತರ್‌ರವರು ೨ ಸಾವಿರ ರೂ.ಗಳನ್ನು ಆ ವಿದ್ಯಾರ್ಥಿಗೆ ನೀಡಿದರು.

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಚಿತ್ರಾ ಕುಮಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ ಬಿ.ಇ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಎಂ. ರಮೇಶ, ಉದ್ಯಮಿ, ಕಸ್ತೂರಿ ನರ್ಸರಿಯ ಮಧುಸೂದನ್ ಕುಂಭಕ್ಕೋಡು, ಲಯನ್ಸ್ ಪ್ರಾಂತೀಯ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ, ಸುಳ್ಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ದೊಡ್ಡಣ್ಣ ಬರಮೇಲು, ಕೋಶಾಧಿಕಾರಿ ಕಿರಣ್ ನೀರ್ಪಾಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಚಂದ್ರಕಲಾ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಸ್ವಾಗತಿಸಿ, ಯೋಜನಾ ನಿರ್ದೇಶಕ ಲ.ಹರೀಶ್ ಉಬರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು ವಂದಿಸಿದರು. ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು.