ಅಡ್ಕಾರು: ಸ್ಕಾರ್ಪಿಯೋ ಢಿಕ್ಕಿ ಹೊಡೆದು ಪಾದಾಚಾರಿ ಕಾರ್ಮಿಕ ಮೃತ್ಯು ಪ್ರಕರಣ

0

ಮೃತ ಕಾರ್ಮಿಕನ ಪತ್ನಿ ಹಾಗೂ ಸಂಬಂಧಿಕರ ಆಗಮನ

ಊರಿನಲ್ಲಿ ವ್ಯವಸ್ಥೆ ಇಲ್ಲವೆಂದು ಸುಳ್ಯದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ

ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಪಾದಾಚಾರಿಗೆ ಸ್ಕಾರ್ಪಿಯೋ ವಾಹನ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ಸೆ.5ರಂದು ರಾತ್ರಿ ಸಂಭವಿಸಿದ್ದು, ಸೆ.6ರಂದು ಮೃತರ ಪತ್ನಿ ಹಾಗೂ ಸಂಬಂಧಿಕರು ಬಂದ ಬಳಿಕ ಸುಳ್ಯದ ರುದ್ರಭೂಮಿಯಲ್ಲಿ ಸಂಜೆ ವೇಳೆಗೆ ಮೃತದೇಹದ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಸೆ.5ರಂದು ರಾತ್ರಿ ಕಾಸರಗೋಡಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಅನಿಲ್ ಕುಮಾರ್ ರೈ ಎಂಬವರು ಚಲಾಯಿಸುತ್ತಿದ್ದ KL 14 4554 ನಂಬರಿನ ಸ್ಕಾರ್ಪಿಯೋ ಕಾರು ಅಡ್ಕಾರಿನಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಜಾಲ್ಸೂರಿನ ಶಫೀಕ್ ಕಾಂಪ್ಲೆಕ್ಸ್ ಮಾಲಕರಾದ ಅಬ್ದುಲ್ಲ ಜಾಲ್ಸೂರು ಎಂಬವರ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಹುಬ್ಬಳ್ಳಿ ಮೂಲದ ಅಣ್ಣಪ್ಪ (37) ಎಂಬವರಿಗೆ ಢಿಕ್ಕಿ ಹೊಡೆದಿತ್ತು.

ಢಿಕ್ಕಿ ಹೊಡೆದ ರಭಸಕ್ಕೆ ಅಣ್ಣಪ್ಪ ಅವರು ರಸ್ತೆ ಬದಿಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಮೃತಪಟ್ಟಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಬ್ದುಲ್ಲ ಅವರು ಸ್ಥಳೀಯರ ಸಹಕಾರದಿಂದ ಅಣ್ಣಪ್ಪ ಅವರನ್ನು ತಮ್ಮ ಕಾರಿನಲ್ಲಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ ಅಲ್ಲಿ ವೈದ್ಯರು ಪರೀಕ್ಷಿಸುವ ವೇಳೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಬಳಿಕ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು.

ಅಪಘಾತದ ವಿಷಯ ತಿಳಿದು ರಾತ್ರಿಯೇ ಸುಳ್ಯ ಎಸ್.ಐ. ಈರಯ್ಯ ದೂಂತೂರು ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ, ಕಾರು ಚಾಲಕರನ್ನು ವಶಕ್ಕೆ ಪಡೆದಿದ್ದರು. ಸೆ.6ರಂದು ಬೆಳಿಗ್ಗೆ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ತವರು ಮನೆಯಲ್ಲಿದ್ದ ಪತ್ನಿ ಹಾಗೂ ಮಕ್ಕಳು

ಮೃತ ಅಣ್ಣಪ್ಪ ಅವರು ಹುಬ್ಬಳ್ಳಿ -ಧಾರವಾಡ ಜಿಲ್ಲೆಯ ಕಲಘಟಕಿ ತಾಲೂಕಿನ ಹೀರೆಹೊನ್ನಿಹಳ್ಳಿ ನಿವಾಸಿಯಾಗಿದ್ದು, ಅವರಿಗೆ ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಬಾಗೇವಾಡಿಯ ರೂಪ ಅವರೊಂದಿಗೆ ವಿವಾಹವಾಗಿದ್ದು , ಇಬ್ಬರು ಮಕ್ಕಳಿದ್ದಾರೆ. ಅಪಘಾತ ನಡೆದ ದಿನವಾದ ಸೆ.5ರಂದು ರೂಪ ಅವರು ತನ್ನ ಇಬ್ಬರು ಮಕ್ಕಳಾದ ಲಕ್ಷ್ಮೀ ಹಾಗೂ ಸಮರ್ಥ್ ಬೆಳಗಾವಿಯ ತಮ್ಮ ತವರು ಮನೆಯಲ್ಲಿದ್ದರೆನ್ನಲಾಗಿದೆ. ದೂರವಾಣಿ ಮೂಲಕ ಅಪಘಾತದ ವಿಷಯ ತಿಳಿದು ಸೆ.6ರಂದು ಬೆಳಗ್ಗಿನ ಜಾವ ಮೂರು ಗಂಟೆ ವೇಳೆಗೆ ಕಾರಿನಲ್ಲಿ ಬೆಳಗಾವಿಯ ತನ್ನ ತವರು ಮನೆಯಿಂದ ಹುಬ್ಬಳ್ಳಿಗೆ ಬಂದು ಅಲ್ಲಿನ ಸಂಬಂಧಿಕರೊಂದಿಗೆ ನೇರವಾಗಿ ಸುಳ್ಯಕ್ಕೆ ಬಂದಿದ್ದರು.

ಸುಳ್ಯದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ

ಮಧ್ಯಾಹ್ನ 12 ಗಂಟೆ ವೇಳೆಗೆ ಸುಳ್ಯಕ್ಕೆ ತಲುಪಿದ ಮೃತರ ಪತ್ನಿ ರೂಪ ಸರ್ಕಾರಿ ಆಸ್ಪತ್ರೆಯಲ್ಲಿದ್ದ ಪತಿಯ ಮೃತದೇಹವನ್ನು ನೋಡಿದಾಗ ಆಕ್ರಂದನ ಮುಗಿಲು ಮಟ್ಟಿತ್ತು.
ಈ ಸಂದರ್ಭದಲ್ಲಿ ಅಡ್ಕಾರಿನಿಂದ ಮನೆಮಾಲಕರಾದ ಅಬ್ದುಲ್ಲ ಜಾಲ್ಸೂರು, ಅಶ್ರಫ್ ಅಡ್ಕಾರು, ಉಸ್ಮಾನ್ ಅಡ್ಕಾರು, ಕಯೀಮ್ ಅಡ್ಕಾರು ಸುಳ್ಯಕ್ಕೆ ಹೋದರು. ಈ ವೇಳೆ ಮೃತರ ಪತ್ನಿ ರೂಪ ಹಾಗೂ ಅವರ ಜೊತೆಗೆ ಬಂದಿದ್ದ ಸಂಬಂಧಿಕರು ತಮ್ಮ ಊರಿನಲ್ಲಿ ತಮಗೆ ಮನೆ ಮಾತ್ರ ಇದ್ದು, ಅಂತ್ಯಸಂಸ್ಕಾರ ನೆರವೇರಿಸಲು ಜಾಗ ಇಲ್ಲ. ಆದ್ದರಿಂದ ಇಲ್ಲಿಯೇ ಅಂತ್ಯಸಂಸ್ಕಾರ ಮಾಡುವಂತೆ ಕೇಳಿಕೊಂಡರೆನ್ನಲಾಗಿದೆ. ಬಳಿಕ ಸುಳ್ಯದ ಪ್ರಗತಿ ಅಂಬ್ಯುಲೆನ್ಸ್ ನ ಅಚ್ಚು, ಸ್ಥಳೀಯರಾದ ಗುರುವ ಹಾಗೂ ಅಡ್ಕಾರಿನಿಂದ ಹೋಗಿದ್ದ ಯುವಕರ ಸಹಕಾರದೊಂದಿಗೆ ಸುಳ್ಯ ಪೊಲೀಸ್ ಠಾಣೆಯ ಪ್ರಕಾಶ್ ಅವರ ಉಪಸ್ಥಿತಿಯಲ್ಲಿ ಸುಳ್ಯದ ಕೊಡಿಯಾಲಬೈಲಿನ ರುದ್ರಭೂಮಿಯಲ್ಲಿ ಸಂಜೆಯ ವೇಳೆಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಅಂಗಿಯ ಕಿಸೆಯಲ್ಲಿದ್ದ ಪತ್ನಿಯ ದೂರವಾಣಿ ಸಂಖ್ಯೆಯಿಂದ ಸಂಬಂಧಿಕರ ಗುರುತುಪತ್ತೆ

ಮೃತ ಅಣ್ಣಪ್ಪ ಅವರು ಹುಬ್ಬಳ್ಳಿ ಮೂಲದವರಾಗಿದ್ದು, ಅವರ ಪತ್ನಿಯಾಗಲೀ, ಸಂಬಂಧಿಕರದ್ದಾಗಲೀ ದೂರವಾಣಿ ಸಂಖ್ಯೆ ಇಲ್ಲಿ ಯಾರಲ್ಲೂ ಇರಲಿಲ್ಲವೆನ್ನ. ಆದರೆ ಮೃತವ್ಯಕ್ತಿಯ ಅಂಗಿಯ ಕಿಸೆಯಲ್ಲಿದ್ದ ಪತ್ನಿಯ ದೂರವಾಣಿ ಸಂಖ್ಯೆ ಅವರ ಸಂಬಂಧಿಕರ ಗುರುತು ಪತ್ತೆ ಹಚ್ಚಲು ಸಹಕಾರಿಯಾಯಿತು. ಮೃತರು ಪತ್ನಿ ಶ್ರೀಮತಿ ರೂಪ, ಪುತ್ರಿ ಲಕ್ಷ್ಮಿ, ಪುತ್ರ ಸಮರ್ಥ್ , ಓರ್ವ ಸಹೋದರ ಮಂಜುನಾಥ ಅವರನ್ನು ಅಗಲಿದ್ದಾರೆ.

ಪತ್ನಿ ರೂಪ ಹಾಗೂ ಸಂಬಂಧಿಕರು ಅಂತ್ಯಸಂಸ್ಕಾರ ಮುಗಿಸಿ, ಸಂಜೆ 7 ಗಂಟೆ ವೇಳೆಗೆ ಜಾಲ್ಸೂರು ಜುಮ್ಮಾ ಮಸೀದಿಯ ಬಳಿಯಿರುವ ಅಬ್ದುಲ್ಲ ಅವರ ಮನೆಗೆ ಬಂದು, ಅಲ್ಲಿಂದ ತಮ್ಮ ಊರಿಗೆ ತೆರಳಿದ್ದಾರೆ.

ಎರಡು ದಿನದ ಹಿಂದೆ ಊರಿನಿಂದ ಮರಳಿ ಬಂದಿದ್ದರು

ಅಣ್ಣಪ್ಪ ಅವರು ಕಳೆದ ಆರು ತಿಂಗಳ ಹಿಂದೆ ಹುಬ್ಬಳ್ಳಿಯಿಂದ ಕೂಲಿ ಕೆಲಸ ಅರಸಿ ಸುಳ್ಯಕ್ಕೆ ಬಂದಿದ್ದರು. ಕೆಲಸ ಕೇಳಿಕೊಂಡು ಅಡ್ಕಾರಿಗೆ ಬಂದ ಇವರು, ಅಬ್ದುಲ್ಲ ಅವರ ಕೃಷಿ ತೋಟದಲ್ಲಿ ಕೆಲಸ ಮಾಡುತ್ತಾ, ಅಬ್ದುಲ್ಲ ಅವರ ಮನೆಯ ಒಂದು ಕೊಠಡಿಯಲ್ಲಿಯೇ ವಾಸವಾಗಿದ್ದರು‌. ಹದಿನೈದು ದಿನಗಳ ಹಿಂದೆ ತನ್ನ ಊರಾದ ಹುಬ್ಬಳ್ಳಿಗೆ ಹೋಗಿದ್ದ, ಅವರು ಎರಡು ದಿನಗಳ ಹಿಂದಷ್ಟೆ, ಮರಳಿ ಬಂದಿದ್ದರು. ಸೆ.5ರಂದು ರಾತ್ರಿ ಊಟ ಮುಗಿಸಿ, ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ದುರಂತ ಅಂತ್ಯ ಕಂಡಿದ್ದಾರೆ.