ಪೌರ ಕಾರ್ಮಿಕರ ಶ್ರಮ ಮತ್ತು ಸೇವೆಯನ್ನು ನಾವೆಲ್ಲರೂ ಗೌರವಿಸೋಣ : ಶಾಸಕಿ ಭಾಗೀರಥಿ ಮುರುಳ್ಯ
ಪೌರಕಾರ್ಮಿಕರ ಶ್ರಮ ಇಲ್ಲದಿದ್ದಲ್ಲಿ ನಮ್ಮ ಊರು ಇಷ್ಟೊಂದು ಸುಂದರವಾಗುತ್ತಿರಲಿಲ್ಲ. ಅವರ ಶ್ರಮ ಮತ್ತು ಸೇವೆಯನ್ನು ನಾವು ಸದಾ ಗೌರವಿಸುತ್ತಿರಬೇಕೆಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಹೇಳಿದರು. ಪೌರಕಾರ್ಮಿಕರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ ಹೇಳಿದ್ದಾರೆ.
ಅವರು ಇಂದು ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದು, ನಗರ ಪಂಚಾಯತ್ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು.
ಸುಳ್ಯ ನಗರ ಪಂಚಾಯತ್ ಕಚೇರಿಯಲ್ಲಿ ಎಲ್ಲಾ ಪೌರಕಾರ್ಮಿಕರು ಮದುವೆ ಸಮಾರಂಭಕ್ಕೆ ಬಂದಂತೆ ಸಂತೋಷದಿಂದ ಕಾಣುತ್ತಿದ್ದು ವರ್ಷವಿಡೀ ನಮ್ಮ ಸುಳ್ಯ ನಗರದ ಬೀದಿ ಬೀದಿಗಳನ್ನು ಸ್ವಚ್ಛಪಡಿಸಿ ಮಳೆ ಬಿಸಿಲು ಗಾಳಿ ಲೆಕ್ಕಿಸದೆ ಅವರಲ್ಲಿರುವ ಅಪಾರ ಸೇವೆಯನ್ನು ನೀಡುತ್ತಿದ್ದಾರೆ. ಕಷ್ಟಪಟ್ಟು ದುಡಿದು ಸಂಪಾದನೆ ಮಾಡುವ ಇವರ ಕೈಗಳಿಗೆ ನಾವು ಬಲವನ್ನು ನೀಡಬೇಕಾಗಿದೆ. ನಗರ ಪ್ರದೇಶಗಳಲ್ಲಿ ಅಥವಾ ನಮ್ಮ ನಮ್ಮ ಮನೆಯ ಸಮೀಪದಲ್ಲಿ ನಾವು ನಾವೇ ಸ್ವಚ್ಛತೆಯನ್ನು ಕಾಪಾಡಿಕೊಂಡು ಪ್ಲಾಸ್ಟಿಕ್ ವಸ್ತುಗಳ ಬಳಕೆಗಳನ್ನು ಕಡಿಮೆಗೊಳಿಸಿ ಸುಂದರ ಸುಳ್ಯವನ್ನು ನಿರ್ಮಿಸಬೇಕಾಗಿದೆ. ಇವತ್ತಿನ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು ತಮ್ಮ ಮನೆಯವರನ್ನು ಮತ್ತು ಮಕ್ಕಳನ್ನು ಕರೆತಂದು ಈ ದಿನದ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಾರೆ. ಇವರ ಮಕ್ಕಳು ಮುಂದಿನ ದಿನಗಳಲ್ಲಿ ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಉನ್ನತ ಉದ್ಯೋಗಗಳಿಗೆ ಸೇರಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ, ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಎಂ ವೆಂಕಪ್ಪಗೌಡ, ವಿನಯಕುಮಾರ್ ಕಂದಡ್ಕ ಈ ಸಂದರ್ಭದಲ್ಲಿ ಮಾತನಾಡಿ ಪೌರಕಾರ್ಮಿಕರ ಸೇವೆಯನ್ನು ಶ್ಲಾಘನೆ ಮಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಪ್ರಗತಿಪರ ಕೃಷಿಕ ಲ. ವಿನೋದ್ ಲಸ್ರಾದೋ ಉಪಸ್ಥಿತರಿದ್ದರು. ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಕಚೇರಿಯಲ್ಲಿ ಪೌರಕಾರ್ಮಿಕ ಹುದ್ದೆಯಲ್ಲಿ ಖಾಯಂ ಆಗಿರುವ ೧೨ ಮಂದಿ ಸಿಬ್ಬಂದಿಗಳು, ಮತ್ತು ಕಚೇರಿಯ ಇತರ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ಧನ ಸಹಾಯದ ಚೆಕ್ ವಿತರಣೆ ನಡೆಯಿತು.
ನಗರ ಪಂಚಾಯತ್ ಸಿಬ್ಬಂದಿಗಳಾದ ಸುದೇವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಳಿಕ ಬೆಳಗ್ಗಿನಿಂದ ನಡೆದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ನಗರ ಪಂಚಾಯತಿ ಸದಸ್ಯರುಗಳಾದ ಬುದ್ಧ ನಾಯ್ಕ್, ಡೇವಿಡ್ ಧೀರಾ ಕ್ರಾಸ್ತ, ಶಿಲ್ಪಾ ಸುದೇವ್, ಪ್ರವಿತಾ ಪ್ರಶಾಂತ್, ಸುಶೀಲಾ ಜಿನ್ನಪ್ಪ, ಬಾಲಕೃಷ್ಣ ಭಟ್ ಕೊಡಂಕೇರಿ, ಶೀಲಾ ಅರುಣ್ ಕುರುಂಜಿ, ಶಶಿಕಲಾ ನೀರಬಿದಿರೆ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಸಾಮಾಜಿಕ ಮುಖಂಡ ಮಹೇಶ್ ಕುಮಾರ್ ರೈ ಮೇನಾಲ, ನಗರ ಪಂಚಾಯತ್ ಸಿಬ್ಬಂದಿಗಳಾದ ಶಶಿಕಲಾ, ಸುನಿತಾ, ಸ್ವಾತಿ, ಸುಮತಿ, ತಿಮ್ಮಪ್ಪ, ಹಾಗೂ ಇನ್ನಿತರ ಸಿಬ್ಬಂದಿ ವರ್ಗದವರು, ಪೌರಕಾರ್ಮಿಕರ ಕುಟುಂಬದ ಸದಸ್ಯರುಗಳು ಉಪಸ್ಥಿತರಿದ್ದರು.