ದುಶ್ಚಟ ಮುಕ್ತ ಜೀವನಕ್ಕೆ ಸಂಕಲ್ಪ ಮಾಡಿ

0

ಸುಳ್ಯದ ಜನಜಾಗೃತಿ ಸಮಾವೇಶದಲ್ಲಿ ಡಾ| ಡಿ.ವೀರೇಂದ್ರ ಹೆಗ್ಗಡೆ ಕರೆ

ಅಡಿಕೆ ಎಲೆ ಹಳದಿ ರೋಗ : ಕೇಂದ್ರದ ಗಮನ ಸೆಳೆದಿದ್ದೇನೆ – ಮನವಿಗೆ ಪ್ರತಿಕ್ರಿಯೆ

“ಮದ್ಯಪಾನದಂತ ದುಶ್ಚಟಗಳು ಮನುಷ್ಯನನ್ನು ಆವರಿಸಿದರೆ ಆತನ ಜೀವನ, ಸಂಸಾರ, ಆರ್ಥಿಕ ವ್ಯವಸ್ಥೆ ಹಾಳಾಗುತ್ತದೆ. ಅಂತವರನ್ನು ನಿರಂತರವಾಗಿ ಎಚ್ಚರಿಸಿ, ದುಶ್ಚಟದಿಂದ ದೂರ ಇರುವಂತೆ ಎಚ್ಚರಿಕೆಯ ಗಂಟೆಯನ್ನು ಬಾರಿಸುವ ಕೆಲಸವನ್ನು ಜನಜಾಗೃತಿ ವೇದಿಕೆ ಮಾಡುತ್ತದೆ. ಕೆಲವರಿಗೆ ಈ ಗಂಟೆ ಕೇಳೋದೇ ಇಲ್ಲ. ಇನ್ನೂ ಕೆಲವರು ಕೇಳಿಯೂ ಸುಮ್ಮನಿರುತ್ತಾರೆ. ಆದರೆ ಯಾರಿಗೆ ಈ ಎಚ್ಚರಿಕೆಯ ಗಂಟೆ ಕೇಳಿ ಎಚ್ಚೆತ್ತುಕೊಳ್ಳುತ್ತಾರೋ ಆತ ಬಹಳ ಬೇಗ ಹೊಸ ಜೀವನ ಆರಂಭಿಸುತ್ತಾನೆ. ಆದ್ದರಿಂದ ನಾವು ಹಾಗೂ ನಮ್ಮ ಸಮಾಜ ದುಶ್ಚಟ ಮುಕ್ತವಾಗಿರುವಂತೆ ಮಾಡುವ ಸಂಕಲ್ಪ ನಾವು ಕೈಗೊಳ್ಳೋಣ” ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ.ವಿರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.


ಅ.೩ರಂದು ಗಾಂಧಿ ಜಯಂತಿಯ ಪ್ರಯುಕ್ತ ಧರ್ಮಸ್ಥಳ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಸುಳ್ಯದ ಅಮರಶ್ರೀಭಾಗ್ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ಜರುಗಿದ ಗಾಂಧಿಸ್ಮತಿ, ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಸಂದೇಶ ಸಾರಿದವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು. ಅವರ ಆದರ್ಶ ಸಂದೇಶಗಳು ನಿತ್ಯ ನಿರಂತರವಾಗಿರುತ್ತದೆ ಎಂದು ಹೇಳಿದ ಅವರು, ಡಾ. ಕುರುಂಜಿ ವೆಂಕಟ್ರಮಣ ಗೌಡರು ಸುಳ್ಯದಲ್ಲಿ ವಿದ್ಯಾಸಂಸ್ಥೆಗಳನ್ನು, ಆಸ್ಪತ್ರೆಗಳನ್ನು ಕಟ್ಟಿ ಸುಳ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.


ಅಡಿಕೆ ಎಲೆ ಹಳದಿ ರೋಗ : ಸಮಾರಂಭದಲ್ಲಿ ಸುಳ್ಯ ತಾಲೂಕಿನಲ್ಲಿರುವ ಅಡಿಕೆ ಎಲೆ ಹಳದಿ ರೋಗದ ವಿಚಾರವಾಗಿ ಕೇಂದ್ರ ಸರಕಾರದ ಗಮನ ಸೆಳೆಯುವಂತೆ ಜನಜಾಗೃತಿ ವೇದಿಕೆಯ ಜಿಲ್ಲೆಯ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರರ ನೇತೃತ್ವದಲ್ಲಿ, ಸಂಸದರೂ ಆಗಿರುವ ಡಾ| ಹೆಗ್ಗಡೆಯವರಿಗೆ ಮನವಿ ಸಲ್ಲಿಸಲಾಯಿತು. ತಮ್ಮ ಭಾಷಣದಲ್ಲಿ ಇದನ್ನು ಉಲ್ಲೇಖಿಸಿದ ಡಾ| ಹೆಗ್ಗಡೆಯವರು, ಅಡಿಕೆ ಎಲೆ ಹಳದಿ ರೋಗದ ಕುರಿತು ನಾನು ಈಗಾಗಲೇ ಕೇಂದ್ರ ಸರಕಾರದ ಗಮನ ಸೆಳೆದಿದ್ದೇನೆ. ಅದಕ್ಕೆ ಉತ್ತರವೂ ಬಂದಿದೆ. ಅದನ್ನು ನಿಮಗೆ ಕಳುಹಿಸಿ ಕೊಡುತ್ತೇನೆ. ಆದರೂ ಇದೀಗ ಮನವಿ ಸಲ್ಲಿಸಿರುವುದರಿಂದ ಮತ್ತೊಮ್ಮೆ ಕೇಂದ್ರ ಸರಕಾಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದ ಅವರು ಅಡಿಕೆ ಎಲೆ ಹಳದಿ ರೋಗದ ಪರಿಹಾರಕ್ಕೆ ನನ್ನಿಂದಾಗುವ ಎಲ್ಲ ಪ್ರಯತ್ನವನ್ನು ಮಾಡುತ್ತೇನೆ. ಈ ಭಾಗದಲ್ಲಿ ಉತ್ತಮ ಕೃಷಿ ಆಗಲಿ. ಸಂಪತ್ತು ಉಳಿದು ದುಶ್ಚಟ ಮುಕ್ತ ಸಮಾಜ ನಿರ್ಮಾಣ ಆಗುವಂತಾಗಲಿ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಜಾಗೃತಿ ಮಿತ್ರ, ಜಾಗೃತಿ ಅಣ್ಣ, ಶೌರ್ಯ ಪ್ರಶಸ್ತಿ ಪ್ರದಾನ ನಡೆಯಿತು.