ಯೋಧನ ಹೆಸರಲ್ಲಿ ಕರೆ ಮಾಡಿ ಕೋಳಿ ಮಾಂಸ ಆರ್ಡರ್

0

ಬಿಲ್ ಕೇಳಿದಾಗ ಅರಿವಿಗೆ ಬಂತು ಆನ್ಲೈನ್ ಮೋಸದ ಜಾಲ

ಸುಳ್ಯದ ಚಿಕನ್ ಸೆಂಟರ್ ಒಂದಕ್ಕೆ ೨೦ ಕೆಜಿ ಚಿಕನ್ ಆರ್ಡರ್ ಮಾಡಿ ಮೋಸ ಮಾಡಲೆತ್ನಿಸಿದ ಘಟನೆ ಸೆ.೨೩ ರಂದು ವರದಿಯಾಗಿದೆ.

ಸುಳ್ಯದ ಚಿಕನ್ ಸೆಂಟರ್ ಒಂದಕ್ಕೆ ಇತ್ತೀಚೆಗೆ ವಿಕಾಸ್ ಎಂಬವ ಪೋನ್ ಮಾಡಿ ತಾನು ಭಾರತೀಯ ಯೋಧ ಎಂದು ಪರಿಚಯ ಮಾಡಿಕೊಂಡಿದ್ದು ಬೆಳಗ್ಗಿನ ೮ ಗಂಟೆ ಸುಮಾರಿಗೆ ಹಿಂದಿಯಲ್ಲಿ ಮಾತನಾಡುತ್ತಾ ತಾವು ಈ ಕಡೆ ಟೂರ್ ಬಂದಿದ್ದು ಇಲ್ಲೇ ಹತ್ತಿರ ಇರುವುದಾಗಿ ತಿಳಿಸಿ 2೦ ಕೆಜಿ ಕೋಳಿ ಮಾಂಸ ಆರ್ಡರ್ ಮಾಡಿ 10 ಗಂಟೆಗೆ ಬರುವುದಾಗಿ ತಿಳಿಸಿದ್ದರು.


ಅಲ್ಲದೆ ಭಾರತೀಯ ಯೂನಿಫಾರ್ಮ್ ಹಾಕಿರುವ ಫೋಟೋಗಳನ್ನು, ಐಡಿ ಕಾರ್ಡ್ ಕಳುಹಿಸಿದ್ದರು. ಆರ್ಡರ್ ತೆಗೆದುಕೊಂಡು ಮಾಂಸ ರೆಡಿ ಮಾಡಿ ೧೦ ಗಂಟೆಗೆ ಬರುವುದಾಗಿ ತಿಳಿಸಿದವನಿಗೆ ಮತ್ತೆ ಕಾಲ್ ಮಾಡಿ ಬಿಲ್ ಮೊತ್ತ ಹೇಳಿದಾಗ ಆ ಕಡೆಯಿಂದ ಸ್ಕ್ಯಾನರ್ ಕಳುಹಿಸಿ ಅದಕ್ಕೆ ಒಂದು ರೂ ಹಾಕಿ ಆಮೇಲೆ ನಾನು ಹಣ ಹಾಕುತ್ತೇನೆ ಎಂದಿದ್ದ. ಅದರಂತೆ ಒಂದು ರೂ. ಹಾಕಿದಾಗ ಆ ಕಡೆಯಿಂದ ಎರಡು ರೂಪಾಯಿ ಮತ್ತೆ ಹಾಕಲಾಗಿದ್ದು, ಮತ್ತೆ ಕಾಲ್ ಮಾಡಿ ಚಿಕನ್ ಬಿಲ್ ರೂ. ೨೯೦೦ ನ್ನು ನೀವು ಒಮ್ಮೆ ಹಾಕಿ. ಬಳಿಕ ನಾನು ಅದಕ್ಕೆ ಸೇರಿಸಿ ಅದರ ಡಬಲ್ ಹಣ ಹಾಕುತ್ತೇನೆ ಅದನ್ನು ನಮ್ಮ ಕಂಪನಿಯಿಂದಲೇ ಹಾಕುತ್ತಾರೆ ಎಂದು ಹೇಳಿದ. ಆದರೆ ಇತ್ತ ಕಡೆಯಿಂದ ಹಣ ಹಾಕದೆ ಮತ್ತೆ ಸಂಪರ್ಕಿಸಿದಾಗ ಮತ್ತದೇ ಮಾತನ್ನು ಹೇಳಿದ್ದಾರೆ. ಆದರೂ ಈ ಕಡೆಯಿಂದ ಹಣ ಹಾಕದೆ ಇದ್ದಾಗ ಮತ್ತೆ ಪೋನ್ ಸಂಪರ್ಕಕ್ಕೂ ಸಿಗದೆ ಮೋಸ ಮಾಡಲು ಯತ್ನಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಪೊಲೀಸರಿಂದ ಮಾಹಿತಿ ಕೇಳಿದಾಗ ಬೇರೆ ಕಡೆಯೂ ಇದೇ ರೀತಿ ಮಾಡಲೆತ್ನಿಸಿರುವುದಾಗಿ ತಿಳಿದುಬಂದಿದೆ.